ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು
ಬಿನ್ನಗಾಗಿದೆ ಮನವು ಬಗೆಯೊಳಗನೇ ತೆರೆದು
ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವನಕ ನನ್ನ ಬಾಳಿದು ನರಕ
ಎಂ. ಗೋಪಾಲಕೃಷ್ಣ ಅಡಿಗರ ಮೊದಲ ಕವನ ಸಂಕಲನ ‘ಭಾವತರಂಗ’ (1946)ದ ಮೊದಲ ಕವನ ‘ನನ್ನ ನುಡಿ’ಯಲ್ಲಿ ಅವರ ಕಾವ್ಯದ ಕಾಳಜಿ ಮತ್ತು ಜೀವನದೃಷ್ಟಿ ವ್ಯಕ್ತವಾಗುತ್ತದೆ. ಈ ಕವನದ ಮೂಲ ಆಶಯವೇ ಬೆಳೆದು ಎತ್ತರಕ್ಕೇರಿ ಅವರ ಇತರ ರಚನೆಗಳಲ್ಲಿ ರೂಪುವಡೆದಿದೆ. ಮೇಲ್ನೋಟಕ್ಕೆ ಸಾಧಾರಣವೆಂಬಂತೆ ತೋರುವ ಈ ಕವಿತೆಯ ತಳಹದಿಯ ಮೇಲೆ ಅಡಿಗರ ಕಾವ್ಯ ತಲೆಯೆತ್ತಿ ನಿಂತಿದೆ.
ಸ್ವಂತಿಕೆಯ ಹುಡುಕಾಟವೇ ಅಡಿಗರ ಕಾವ್ಯದ ಮುಖ್ಯ ಕಾಳಜಿಯಾಗಿದೆ. ವ್ಯಕ್ತಿ, ಸಮಾಜ ಮತ್ತು ಸಂಸ್ಕೃತಿಗಳಲ್ಲಿ ಕಾಣೆಯಾಗುತ್ತಿರುವ ಸ್ವಂತಿಕೆಯನ್ನು ಜಾಗೃತಗೊಳಿಸುವ ಅಥವಾ ಅದನ್ನು ಮರಳಿ ಪಡೆಯುವ ಉದ್ದೇಶದಿಂದ ಪರಾವಲಂಬನೆ ಮತ್ತು ಪರಾಧೀನತೆಯ ಮುಖಗಳು ಉಗ್ರಟೀಕೆಗೊಳಗಾಗುತ್ತವೆ. ವೈಯಕ್ತಿಕ ಹುಡುಕಾಟವೆಂದು ತೋರುವ ಚಟುವಟಿಕೆಯು ರಾಜಕೀಯ ಮತ್ತು ತಾತ್ವಿಕ ಕ್ರಿಯೆಯಾಗಿ ಮೈದಾಳುತ್ತದೆ. ವಸಾಹತೀಕರಣಕ್ಕೊಳಗಾದ ಮನಸ್ಸು, ಸಮಾಜ ಮತ್ತು ಸಂಸ್ಕೃತಿಯ ಪರಿಸ್ಥಿತಿಯನ್ನು ಪರಿಶೀಲಿಸುತ್ತದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ವ್ಯಕ್ತಿಗಳನ್ನು ಕಡೆಗಣಿಸಿ, ದಬ್ಬಾಳಿಕೆಯನ್ನು ನಡೆಸುವ ಪ್ರಭುತ್ವದ ಅಮಾನವೀಯ ರಾಜಕಾರಣವನ್ನು ವಿಮರ್ಶಿಸುತ್ತದೆ. ವ್ಯಕ್ತಿವಿಶಿಷ್ಟತೆಯ ಬದಲು ಚಹರೆಯಿಲ್ಲದ ಮನುಷ್ಯರ ಗುಂಪು, ಸಮುದಾಯ ಪ್ರಜ್ಞೆಯ ಜಾಗದಲ್ಲಿ ಸಮೂಹ ಸನ್ನಿ, ಪ್ರಭುತ್ವದ ಹೆಸರಿನಲ್ಲಿ ಸ್ವಾತಂತ್ರ್ಯಹರಣ, ರಾಜಕಾರಣದ ಭ್ರಷ್ಟ, ಕರಾಳ ಮುಖಗಳನ್ನು ಅಡಿಗರ ಕಾವ್ಯ ತನ್ನೆಲ್ಲ ಉದ್ವೇಗ ಮತ್ತು ತಳಮಳದೊಂದಿಗೆ ಬಯಲುಗೊಳಿಸುತ್ತದೆ. ಆಧ್ಯಾತ್ಮಿಕ ಸ್ತರದಲ್ಲಿ ಅಸ್ಮಿತೆಯ ಹುಡುಕಾಟದೊಂದಿಗೆ ಮನುಷ್ಯ ಸಮೂಹ, ಜೀವಸಂಕುಲ, ಭೂಮಿ ಮತ್ತು ಬ್ರಹ್ಮಾಂಡದ ಭಾಗವಾಗಿ ವೈಯಕ್ತಿಕ ಅನನ್ಯತೆಯನ್ನು ಅರಸುತ್ತದೆ. ಸಾರ್ವಜನಿಕ ಮತ್ತು ಖಾಸಗಿ ನೆಲೆಯಲ್ಲಿ ಒಂದರೊಳಗೊಂದು ಬೆರೆತು ರಾಜಕೀಯ ಸಾಂಸ್ಕೃತಿಕ ಆಯಾಮಗಳನ್ನು ಪಡೆದುಕೊಳ್ಳುತ್ತದೆ.
ಅಡಿಗರ ಕಾವ್ಯವು ಅನ್ಯ ಸಂಪರ್ಕ ಮತ್ತು ಸಂಬಂಧಗಳ ಪ್ರಾಮುಖ್ಯತೆಯನ್ನು ಅಲ್ಲಗೆಳೆಯುವುದಿಲ್ಲ. ಆದರೆ ಅವುಗಳು ಪರಾಧೀನತೆ ಮತ್ತು ಪರಾವಲಂಬನೆಗಳಿಗೆ ದಾರಿ ಮಾಡಿಕೊಟ್ಟು ನಮ್ಮತನವನ್ನು ನಾಶಗೊಳಿಸುವಂತಿರಬಾರದು ಎಂದು ಎಚ್ಚರಿಸುತ್ತದೆ. ಪ್ರಸಿದ್ಧ ವ್ಯಕ್ತಿಗಳ ಹಿಂಬಾಲಕನಾಗಿದ್ದ ಮಾತ್ರಕ್ಕೆ ಅವರಷ್ಟು ಎತ್ತರಕ್ಕೇರಲಾರದವನ ಸ್ಥಿತಿಯನ್ನು ‘ನನ್ನ ಅವತಾರ’ ಎಂಬ ಕವಿತೆ ಮಾರ್ಮಿಕವಾಗಿ ಹೇಳುತ್ತದೆ. ತ್ರೇತಾ ಯುಗದಲ್ಲಿ ನಾನು ರಾಮನ ಬಳಿಯೂ, ದ್ವಾಪರದಲ್ಲಿ ಕೃಷ್ಣನ ಬಳಿಯೂ ಇದ್ದೆ. ಕೃಷ್ಣನು ತನ್ನ ಬಾಲ್ಯದಲ್ಲಿ ಮಾಡಿದ್ದನ್ನು ನಾನೂ ಮಾಡಿದೆ. ಆದರೆ ಅವನು ಯೋಗರಾಜನಾದ. ನಾನು ಭೋಗರಾಜ ಮತ್ತು ರೋಗರಾಜನಾದೆ. ಇತಿಹಾಸ ಕಾಲದಲ್ಲಿ ಬುದ್ಧನ ಶಿಷ್ಯನಾಗಿದ್ದೆ. ‘ಬುದ್ಧಂ ಶರಣಂ ಗಚ್ಛಾಮಿ’ ಎಂದು ನಡೆದವರ ಮುಂದಾಳಾಗಿದ್ದೆ. ಗಾಂಧಿಗೂ ಜಯಕಾರ ಹಾಕಿದೆ. ಅವನು ಹೋದ ಮೇಲೆ ಏನು ಮಾಡುವುದೆಂದು ತಿಳಿಯುವುದಿಲ್ಲ. ನಾಯಕನಿಲ್ಲದೆ ನನಗೆ ಅಸ್ತಿತ್ವವಿಲ್ಲ. ಹಿಂಬಾಲಕನಾಗಿರುವುದು ಸುಲಭ ಮತ್ತು ಸುರಕ್ಷಿತ ಎಂದು ತನ್ನನ್ನು ತಾನೇ ಮೂದಲಿಸಿಕೊಂಡು ನಿರೂಪಕ ಹೀಗೆ ಪ್ರಶ್ನಿಸುತ್ತಾನೆ.
ನಾನು ಅವನು ಒಂದೆ ಲೋಹ
ಕಬ್ಬಿಣ – ಕರಿ ಕಬ್ಬಿಣ
ಯಾವ ರಸವು ಸೋಕಿತವನ?
ಯಾವ ಬೆಂಕಿ ತಾಕಿತವನ?
ಸಾಯುವಾಗ ಎಂಥ ಗಟ್ಟಿ ಚಿನ್ನವಾಗಿ ಸಾಗಿದ
ತಾನು ಮಾತ್ರ ಹಾಗೆಯೇ ಉಳಿದುಬಿಟ್ಟಿದ್ದೇನೆ ಎಂಬ ಉರಿ ಅವನನ್ನು ಸುಡುವ ಬಗೆ ವ್ಯಕ್ತವಾಗುತ್ತದೆ. ‘ಮೂಲಕ ಮಹಾಶಯರು’ ಈ ಪದ್ಯದ ಮುಂದುವರಿಕೆಯಂತಿದೆ.
ತನ್ನ ಕ್ರೀಡಾಪಟುತ್ವಕ್ಕೆ ಗವಾಸ್ಕರ ಚಂದ್ರಶೇಖರ ಇತ್ಯಾದಿ
ಸ್ವಪ್ರದರ್ಶನರತಿಗೆ ಖನ್ನಾ, ಖಾನ್, ಬಚ್ಚನ್ ಅಥವಾ ರಾಜ
ಕುಮಾರರೇ ಬಲಿ, ಮಾಡದೆ ಮಾಡಿಸಿ ನೋಡಿ ಉದ್ರೇಕಗೊಳ್ಳುವ ಬಾಬು;
ಸತ್ತಾದರೂ ಖ್ಯಾತನಾಗುತ್ತೇನೆಂಬ ಬಾಲಿಶ ಹಟಕ್ಕೆ
ತುತ್ತು ದೊಡ್ಡವರೆಲ್ಲ. ಕತ್ತಿನ ಮೇಲೆ ಸ್ವಂತ ತಲೆ ಇದ್ದೂ ಕೂಡ ಬೇಸಿರ್ ಹೆಸರು
ಗಿಟ್ಟಿಸುವ ಕಲ್ಪನೆಯ ಕಾಕು. ಪರಕಾಯ ಪ್ರವೇಶ ಹೆಣ
ನಿನಗೆ ಸ್ವಂತ ಬದುಕೆಂಬುದೇ ಇಲ್ಲ. ಭಯ
ಬದುಕಿನಲ್ಲಿ ಸಿಕ್ಕಿಕೊಳ್ಳುವುದಕ್ಕೆ. ಕನಸಿನಲ್ಲಿ ಕಂಡ ಶಿಖರದ ಕಡೆ
ಹೆಜ್ಜೆ ಹಾಕುವುದಕ್ಕೆ – ಮೂಲಕವೆ ಬದುಕುವಂಥವರು. ಕೃಷ್ಣ, ಬುದ್ಧ, ಜಿನ
ಬಸವಣ್ಣ, ಯೇಸು, ಗಾಂಧಿ ಯಾರಾದರೂ ಸರಿಯೆ. ಅವರ ಮೂಲಕವೆ
ನೋಂತವರು, ಹುತಾತ್ಮರೂ ಆಗಿ ಕೃತಾರ್ಥರಾಗುವ ಪೈಕಿ
ಇದು ಬಹಳ ಹಳೆಯ ಪೈಕಿ
ಅತ್ಯಂತ ಆಧುನಿಕ ಕೂಡ – ಹೈಕಿ? ನೈಕಿ?
ಕನ್ನಡಿಯ ಮುಂದೆ ಒಂದು ಕ್ಷಣವಾದರೂ ನಿಲ್ಲು ಎಂಬ ಸಾಲಿನ ಮೂಲಕ ಆತ್ಮವಿಮರ್ಶೆಯ ಅಗತ್ಯವನ್ನು ಸಾರುತ್ತದೆ. ಪ್ರತಿಯೊಬ್ಬರೂ ತಮ್ಮ ಸಂಕಲ್ಪ ಮತ್ತು ಕ್ರಿಯೆಗಳ ಮೂಲಕ ಸಾಗಬೇಕು. ಇದು ಪರಿಪೂರ್ಣತೆಯ ಕಡೆಗಿನ ಚಲನೆ, ಮಾನವತ್ವದ ಮೂಲ ಎಂದು ಘೋಷಿಸುತ್ತದೆ.
ನಿನಗೆ ಬೇಕಾದಂತೆ ಮಾಗಬೇಕಾದದ್ದು
ನೀನೆ; ನಿನ್ನ ಮೂಲತತ್ವದ ಮಾತು ಅದು. ನಿನ್ನ ತೃಪ್ತಿಗೆ ನಾನು
ಮಾಗಬೇಕಾದ್ದಿಲ್ಲ
ಮತ್ತೊಂದು ಪ್ರಸಿದ್ಧ ಕವನ ‘ಪ್ರಾರ್ಥನೆ’ಯಲ್ಲಿ ನಿರೂಪಕ
ತೆಕ್ಕೆಗೊಗ್ಗದ ಹಗಲುಗನಸಿನ ಧಡೂತಿ ತೊಡೆ
ಸಿಕ್ಕದೇ ಸಿಕ್ಕಿದಂತಾಗಿ ತೂಬನು ತೆಗೆವ
ಸ್ವಪ್ನೇಂದ್ರಿಯದ ಸ್ವಯಂಚಾಲಕಕೆ ತಡೆಹಾಕು;
ಅಲ್ಲದೇ, ಗಾಳಿಯಲಿ ಬತ್ತಲೆ ಸುಳಿವ
ಅಪ್ಸರೆಯರ ಅನಂಗಸಂಘಟ್ಟನೆಗೆ ವೃಥಾ
ಮುಷ್ಠಿಮೈಥುನದಹಂಕಾರ ಕೆರಳಿಸಬೇಡ
ಕಳುಹಿಸಯ್ಯಾ ಬಳಿಗೆ ಕೃಪೆತಳೆದು ಆಗಾಗ್ಗೆ ವಾಸ್ತವದ ಹೆಣ್ಣುಗಳ
ಎಂದು ಪ್ರಾರ್ಥಿಸುತ್ತಾನೆ. ವಿಕೃತ ಕಾಮವನ್ನು ತಿರಸ್ಕರಿಸುವ ಈ ಕವಿತೆ ಸಹಜ ಕಾಮದ ಅಗತ್ಯವನ್ನು ತಿಳಿಸುತ್ತದೆ. ಆಗ ಅಹಂಕಾರ ಕರಗಿ ಮಿಲನ ಮತ್ತು ಹೊಸ ಸೃಷ್ಟಿ ಸಾಧ್ಯವಾಗುತ್ತದೆ. ಹೊರಗಿನ ಸಂಪರ್ಕವಿಲ್ಲದೆ ಸೃಷ್ಟಿಕಾರ್ಯ ಸಾಧ್ಯವಿಲ್ಲ, ಆದರೆ ವಿಕೃತ ಕಾಮದಿಂದ ರೋಗ ಬರಬಹುದು. ವ್ಯಕ್ತಿಗಳ ನಡುವೆ ಮಾತ್ರವಲ್ಲ ಸಂಸ್ಕೃತಿಗಳ ಕೂಡುವಿಕೆಗೆ ಸಂಬಂಧಿಸಿದಂತೆಯೂ ಇದು ನಿಜವೆನಿಸಿಕೊಳ್ಳುತ್ತದೆ. ಇವುಗಳ ನಡುವೆ ಸರಳ ಸಮನ್ವಯ ಸಾಧ್ಯವಿಲ್ಲದಿರುವುದರಿಂದ ಅಡಿಗರ ಕಾವ್ಯ ಯಾವುದನ್ನೂ ಏಕಮುಖವಾಗಿ ಸ್ವೀಕರಿಸುವುದಿಲ್ಲ, ನಿರಾಕರಿಸುವುದೂ ಇಲ್ಲ. ಎಲ್ಲವೂ ಒಂದು ಹದದಲ್ಲಿ ಬೆರೆಯಬೇಕು. ನಮ್ಮತನವನ್ನು ಕಳೆದುಕೊಳ್ಳದೆ ವಿಕಾಸವನ್ನು ಹೊಂದುತ್ತಾ ಇತರರೊಂದಿಗೆ ಬೆರೆಯುವಂತಾಗಬೇಕು. ಇದು ಪೂರ್ವ ಪಶ್ಚಿಮಗಳ ನಡುವಿನ ಹದವಾದ ಅನುಸಂಧಾನದ ಅಗತ್ಯದ ಪ್ರತಿಪಾದನೆಯೂ ಹೌದು.
ಹಡಗ ತಾಗಿಸು ಪ್ರತೀ ಬಂದರಿಗು, ಯಾವೊಂದು
ತಿಮಿಂಗಿಲ ತೊಡೆಯು ಕೂಡ ನುಂಗಿ ಕೊಳಸದ ಹಾಗೆ
ನಡಸು ಬಂದರಿನಿಂದ ಬಂದರಿಗೆ. ಆಮದು ರಫ್ತು
ಸಾಗುತ್ತಲಿರಲಿ ಕೊನೆವರೆಗೆ. ಆದರು
ಫರಂಗಿರೋಗ ತಗಲದ ಹಾಗೆ
ಉಳಿಸು ಪೂರ್ವರ್ಜಿತದ ರತಿವಿವೇಕದ ಶಿಖೆಯ
‘ಸ್ವಾತಂತ್ರ್ಯ : 1958ರ ಪಾಠ’ದಲ್ಲೂ ಇದೇ ಹದ ಕಂಡುಬರುತ್ತದೆ.
ಮನೆಯ ಮಕ್ಕಳ ಕೂಡೆ ಆಡ ಬಂದರೆ ಊರ
ಹುಡುಗ ಪಾಳೆಯ, ತಿಂಡಿಕೊಟ್ಟು ನಗಿಸು;
ಅಲ್ಲೆ ತಳವೂರಿಸಲು ಬಯಸಿ ತೆಳ್ಳಗೆ ಮಾಡ
ಬೇಡ ಇರುವಷ್ಟು ತಂಭಾಲು ಗುಟುಕು
ಸಹಜ ಪ್ರಕ್ರಿಯೆಯಲ್ಲಿ ಹಾದು ಬರದೆ, ಅದರ ಕಷ್ಟನಷ್ಟಗಳನ್ನು ಅನುಭವಿಸದೆ ವಿಕಾಸ ಉಂಟಾಗಲಾರದು. ಭೌತಿಕ ಸೃಷ್ಟಿ ಮತ್ತು ಸಂಸ್ಕೃತಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇದು ಅಕ್ಷರಶಃ ನಿಜ. ಪ್ರಜಾಪ್ರಭುತ್ವ ಎಂದರೆ ನಮಗಾಗಿ ಇತರರು ಆಲೋಚಿಸಿ, ಯೋಜನೆಗಳನ್ನು ರೂಪಿಸಿ ಆಡಳಿತ ನಡೆಸುವ ವ್ಯವಸ್ಥೆಯಲ್ಲ. ಅದೊಂದು ಜೀವನಕ್ರಮ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಾಧ್ಯತೆಗಳನ್ನು ಕಂಡುಕೊಂಡು, ಕ್ರಿಯಾಶೀಲ ಭಾಗವಹಿಸುವಿಕೆಯ ಮೂಲಕ ತನ್ನ ಮತ್ತು ಸಮುದಾಯದ ಏಳಿಗೆಯನ್ನು ಕಂಡುಕೊಳ್ಳಬೇಕಾದ ಜೀವನವಿಧಾನ. ಆದ್ದರಿಂದ ವ್ಯಕ್ತಿಯು ತನಗೆ ಮುಖ್ಯವೆನಿಸಿದ್ದನ್ನು ಆಯ್ಕೆ ಮಾಡಿಕೊಂಡು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳಬೇಕು. ಕಾಲಕ್ಕೆ ತಕ್ಕಂತೆ ಪರಿಷ್ಕರಿಸಬೇಕು. ಪಡೆಯಬೇಕಾದ್ದನ್ನು ಪಡೆದು, ಅಗತ್ಯವಿಲ್ಲದಿರುವುದನ್ನು ಬಿಟ್ಟು ಬಿಡಬೇಕು. ಪರಿವರ್ತನಶೀಲವಾದ ಬದುಕಿನಲ್ಲಿ ಹಳೆಯದು ಎಷ್ಟೋ ಕಣ್ಮರೆಯಾಗಿ, ಹೊಸತು ಕಾಣಿಸಿಕೊಳ್ಳುತ್ತದೆ. ಈ ಸಹಜ ಲಯವನ್ನು ಗ್ರಹಿಸಿ ನಮ್ಮ ವರ್ತಮಾನವನ್ನು ನಾವೇ ರೂಪಿಸಿಕೊಳ್ಳಬೇಕು ಎಂಬ ವಿಚಾರವನ್ನು ಅಡಿಗರ ಕಾವ್ಯ ಬೇರೆ ಬೇರೆ ಪ್ರತಿಮೆಗಳ ಮೂಲಕ ಸೂಚಿಸುತ್ತದೆ.
‘ಕೃತಿ’ ಎಂಬ ಕವಿತೆ ಅಡಿಗರ ಕಾವ್ಯಮೀಮಾಂಸೆ ಮತ್ತು ಬಾಳಿನ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಇದು ಕಾವ್ಯರಚನೆಗಷ್ಟೇ ಸೀಮಿತಗೊಳ್ಳದೆ ಎಲ್ಲ ಬಗೆಯ ಮನುಷ್ಯ ನಿರ್ಮಿತಿಯನ್ನು ಒಳಗೊಳ್ಳುತ್ತದೆ.
ಹತ್ತು ಕೊಡದಷ್ಟುಚ್ಚೆ ಪ್ರತಿನಿತ್ಯ ಹೊಯ್ದರು ಕೂಡ, ಮಗು
ಹುಟ್ಟುವುದಿಲ್ಲ. ದಿನಂಪ್ರತಿ ನಡೆದರೂ ನಿಸರ್ಗ
ಸುಗ್ಗಿ ಬರದೆ, ಹೂವರಳಿ ಗಾಳಿ ಗಂಧಭಾರಕ್ಕೆ
ಸ್ಪಂದಿಸದೆ, ತುಂಬಿಗಳ ಝೇಂಕಾರ
ಕಿವಿ ತುಂಬಿ ಮನಸ್ಸೆಲ್ಲ ತುಂಬಿ ತತ್ತರಿಸದೆ, ಪರಾಗ
ಮೂಸುತ್ತ, ಮುದುರುತ್ತ, ಎಗರುತ್ತ, ಮುಗ್ಗರಿಸುತ್ತ, ನಿಮಿರುತ್ತ
ಒತ್ತುತ್ತ, ಒತ್ತುವ ಮೃದುತ್ವ ಭೇದಿಸಿ ಕಡೆಯ ಹತ್ತದೇ
ಇಲ್ಲ ಬೀಜಮಾಪನ. ಬಿತ್ತು ಬಿದ್ದದ್ದು
ಮೊಳೆಯಬೇಕು; ಮೊಳೆತದ್ದು ಹಸು ಕರು ಆಡು
ಮುಟ್ಟದೇ ಇರಬೇಕು. ತಕ್ಕ ತಕ್ಕ ಕಾಲಕ್ಕೆ ನೀರು ನೆಳಲು ಹೊತ್ತಿನ ಮುತ್ತು
ಸೇವಿಸುತ್ತಿರಬೇಕು. ಕೊಡಲಿಯ ಕಾವು
ಬಂದೆರಗದಂತಿರಬೇಕು.
ದಿನದಿನ ಕಾದು ತಣಿದು ಕಾದು ಹೀಚಾಗಿ, ಕಾಯಾಗಿ, ಹಣ್ಣು;
ಮಗನೇ ಕೇಳು;
ಸೃಷ್ಟಿ ಅವಸರ ವಿಸರ್ಜನ ಚೇಷ್ಟೆ ಅಲ್ಲ, ಖಂಡಿತ ಅಲ್ಲ
ಅಣ್ಣಯ್ಯಾ,
ತಿನ್ನಬೇಕು, ತಿಂದದ್ದಂತರಗ್ನಿಗೆ ಬೆಂದು, ರಾಸಾಯನಿಕ ಕ್ರಿಯೆಗೆ ಸಂದು,
ರಕ್ತ, ರಕ್ತ ಸೋಸಿ ಭಟ್ಟಿಯಿಳಿದು, ಬಿಂದು ಬಿಂದು ಬೇರ್ಪಟ್ಟು,
ಧಾತು ಕಾತರ ಕಳೆದು ಕಾದು ಕಾದು
ಮೆದುನೆಲಕ್ಕಿಳಿದು, ಇಕ್ಕಿ, ಇರಿದು, ಮಥಿಸಿ, ನೆಲೆ ನಿಂತು ನವಮಾಸ
ಕಳೆದ ಬಳಿಕವೇ ಹುಟ್ಟಬಹುದಯ್ಯ ಮಗು; ಹುಟ್ಟುವುದು
ಕುರುಡೊ ಮೂಗೊ ಕುಂಟೊ ಯಾರು ಬಲ್ಲ?
ಇದೇ ಧಾಟಿ ‘ಭೂತ’ದಲ್ಲೂ ಕಂಡು ಬರುತ್ತದೆ.
ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು;
ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗೆರೆಮಿರಿವ ಚಿನ್ನದದಿರು.
ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ
ಇನ್ನಾದರೂ ಕೊಂಚ ಕಲಿಯಬೇಕು;
ಹೊನ್ನ ಕಾಯಿಸಿ ಹಿಡಿದು ಬಡಿದಷ್ಟದೇವತಾ
ವಿಗ್ರಹಕ್ಕೊಗ್ಗಿಸುವ ಅಸಲು ಕಸಬು
ಅಡಿಗರದ್ದು ಸಂಘರ್ಷ ಪ್ರಧಾನ ಕಾವ್ಯ. ಈ ಸಂಘರ್ಷ ಹೊರಜಗತ್ತಿನಲ್ಲಿ ಮಾತ್ರವಲ್ಲ, ಮನದೊಳಗೂ ನಡೆಯುತ್ತದೆ. ಪರಂಪರೆ – ಆಧುನಿಕತೆ, ಭೂತ – ವರ್ತಮಾನ, ಹಳತು – ಹೊಸತು, ಗುರು – ಶಿಷ್ಯ, ಎಡ – ಬಲ, ಬ್ರಾಹ್ಮಣ – ಶೂದ್ರ, ಪೂರ್ವ – ಪಶ್ಚಿಮ, ಸಮಾನತೆ – ಅಸಮಾನತೆ, ಗಾಂಧಿ – ಅಂಬೇಡ್ಕರ್ ಮುಂತಾದ ಸರಳ ವಿಭಜನೆಯನ್ನು ವೈಭವೀಕರಿಸದೆ, ಒಪ್ಪಿಕೊಳ್ಳದೆ, ಅವುಗಳ ನಡುವಿನ ಅಂತರವನ್ನು ಶೋಧಿಸುತ್ತದೆ. ವೈರುಧ್ಯಗಳನ್ನು ತೂಗಿನೋಡಿ, ಸ್ಥಾಪಿತ ರಚನೆಗಳನ್ನು ಮುರಿದು ಕಟ್ಟುತ್ತದೆ. ಈ ರೀತಿಯಲ್ಲಿ ಹೊಸ ಬಗೆಯ ನೈತಿಕತೆಯನ್ನು ತೋರಿಸಿಕೊಡಬಹುದು ಎಂಬುದಕ್ಕೆ ‘ಹದ್ದು’, ‘ಕೂಪಮಂಡೂಕ’, ‘ಚಿಂತಾಮಣಿಯಲ್ಲಿ ಕಂಡ ಮುಖ’, ‘ನಾನು ಹಿಂದೂ ನಾನು ಬ್ರಾಹ್ಮಣ’ ಎಂಬ ರಚನೆಗಳೂ ಸೇರಿದಂತೆ ಹಲವು ಉದಾಹರಣೆಗಳು ಸಿಗುತ್ತವೆ.
ದೊಡ್ಡವರು ನೀವು, ನಾವೇನೂ ಕುಬ್ಜರಲ್ಲ (ಬಿ.ಎಮ್.ಶ್ರೀ ಅವರಿಗೆ)
ಅರ್ಥವಾಗುವ ಹಾಗೆ ಬರೆಯಬೇಕೆಂದ ಹಿರಿಯರು ‘ತಮಗೆ’ ಎಂದು
ಮಾತು ಸೇರಿಸಿದ್ದಕ್ಕೆ ಶಾಭಾಸೆನ್ನಲೇ ಬೇಕು ಆದರೂ ಅರ್ಥ
ಇರುವ ಹಾಗೆ ಎಂದಿದ್ದರೆ ಅರ್ಥಪೂರ್ಣವಾಗುತ್ತಿತ್ತು ಮಾತು (ಅರ್ಥವಾಗುವ ಹಾಗೆ ಬರೆಯಬೇಕು)
ಕಲಿಸು ಬಾಗದೆ ಸೆಟೆವುದನ್ನು, ಬಾಗುವುದನ್ನು (ಪ್ರಾರ್ಥನೆ)
ಕೋತಿಯಂತೆ ಕಂಡಿದ್ದ ಮಗನ ವಿಕಾಸದ ಸಾಧ್ಯತೆ ‘ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ’ (ವರ್ಧಮಾನ) ಎಂದು ಸೂಚಿತವಾಗಿ ಮಗನ ಬಗ್ಗೆ ಅಪ್ಪ ಪಡೆದ ಅರಿವಾಗಿ ಬದಲಾಗುತ್ತದೆ. ಇಲ್ಲಿ ಮಗನು ಅಪ್ಪನಿಂದ ಕಲಿಯದೆ ಅಪ್ಪನೇ ಮಗನಿಂದ ಕಲಿಯುವ ಬಗೆಯಿದೆ. ಹೆಚ್ಚಿನ ಕವಿಗಳು ಗಂಗಾವತರಣಕ್ಕೆ ಮೊರೆಯಿಟ್ಟರೆ ಅಡಿಗರು ‘ಬತ್ತಿ ಹೋಗಲಿ ಗಂಗೆಯೊಂದು ಸಲ ತಳ ಬಿರಿದು’ (ಬತ್ತಲಾರದ ಗಂಗೆ) ಎನ್ನುತ್ತಾರೆ. ಹುಟ್ಟಿದ ಕ್ಷಣದಲ್ಲೇ ಹಿಂಬಾಲಿಸಿ ಬರುವ ಸಾವಿನ ಸೂಚನೆ ಇಲ್ಲಿ ಮುಖ್ಯವಾಗುತ್ತದೆ.
ನರ್ಸುಗಳು ಡಾಕ್ಟರರು ಹೆರಿಗೆ ಮನೆಯೊಳ ಹೊರಗೆ
ಅವರ ಬೆನ್ನಿಗೆ ಸದಾ ನಾಲ್ಕು ಮಂದಿ
ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ
ಜಾತಕರ್ಮದಿ ನಿರತ ಈ ಪುರೋಹಿತಭಟ್ಟ ಅಪರಪ್ರಯೋಗದಲಿ ಪಾರಂಗತ (ಭೂಮಿಗೀತ)
ಲಂಕೆಯಲ್ಲಿ ರಾಮಬಾಣ ವಿಜೃಂಭಿಸಿದ ಸೂಚನೆಯನ್ನು ಹಿಂಬಾಲಿಸಿಕೊಂಡು ಬರುವ ಈ ಸಾಲುಗಳು ಬದುಕನ್ನು ಕುರಿತ ಸಂಕೀರ್ಣ ಗ್ರಹಿಕೆಗೆ ಸಾಕ್ಷಿಯಾಗಿವೆ.
ವಿಜೃಂಭಿಸಿತು ರಾಮಬಾಣ; ನಿಜ. ಕತ್ತಲಿಗೆ ಹತ್ತೆ ತಲೆ? ನೂರಾರೆ? ಅದು ಅಸಂಖ್ಯ
ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ
ಅನಾದಿ ಕೋದಂಡ ದಂಡವೂ ಹೀಗೆ ದಂಡ (ರಾಮನವಮಿಯ ದಿವಸ)
1992ರಲ್ಲಿ ಅಡಿಗರು ನಿಧನರಾದಾಗ ಭಾರತದಲ್ಲಿ ಜಾಗತೀಕರಣದ ಪ್ರಕ್ರಿಯೆಗೆ ಚಾಲನೆ ದೊರಕಿತ್ತು. ಅದರ ಪಾರ್ಶ್ವ ಪರಿಣಾಮಗಳಾದ ನವ ವಸಾಹತುಶಾಹಿ, ನವ ಸಾಮ್ರಾಜ್ಯಶಾಹಿ, ನವ ಬಂಡವಾಳಶಾಹಿಯ ವಿಕೃತಿಗಳನ್ನು ಅಡಿಗರ ಕಾವ್ಯ ಅದಕ್ಕಿಂತ ಮೊದಲೇ ಸೂಚ್ಯವಾಗಿ ತೋರಿಸಿ ಕೊಟ್ಟಿತ್ತು. ವ್ಯಕ್ತಿಯು ತನ್ನ ಪ್ರಾಧಾನ್ಯತೆಯನ್ನು ಕಳೆದುಕೊಳ್ಳುತ್ತಿರುವ, ಆತನ ವ್ಯಕ್ತಿತ್ವ ಅಪ್ರಸ್ತುತವಾಗುತ್ತಿರುವ, ಕನಸು ಮತ್ತು ಆದರ್ಶ ಇಲ್ಲವಾಗುತ್ತಿರುವ, ಎಲ್ಲವೂ ಕೊಳ್ಳುವ ಮಾರುವ ಸರಕಾಗಿ ಬದಲಾಗುತ್ತಿರುವ ಈ ಕಾಲದಲ್ಲಿ ಮನುಷ್ಯನ ಸ್ವಾತಂತ್ರ್ಯ ಮತ್ತು ವ್ಯಕ್ತಿವಿಶಿಷ್ಟತೆಯ ಹುಡುಕಾಟವನ್ನು ನಡೆಸುವ ಅಡಿಗರ ಕಾವ್ಯ ಹೆಚ್ಚು ಪ್ರಸ್ತುತವಾಗುತ್ತದೆ. ತನ್ನ ಕಾಲದ ಇತಿಹಾಸದಲ್ಲಿ ನಿಂತು ಮನುಷ್ಯನ ಪಾಡನ್ನು ಹಲವು ಸ್ತರದಲ್ಲಿ ಶೋಧಿಸಿದ ಅಡಿಗರ ಕಾವ್ಯ ದೇಶಕಾಲವನ್ನು ಮೀರಿ ನಿಲ್ಲಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ವಿಮರ್ಶಕರು : ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
