15 ಫೆಬ್ರವರಿ 2023, ಮಂಗಳೂರು: “ಏಕವ್ಯಕ್ತಿ ನೃತ್ಯ ಪ್ರದರ್ಶನದಿಂದ ಕಲಾವಿದನ ನೈಜ ಪ್ರತಿಭೆಯ ಅನಾವರಣ” – ಮೋಹನ್ ಕುಮಾರ್ ಉಳ್ಳಾಲ
ಚಕ್ರಪಾಣಿ ನೃತ್ಯ ಕಲಾಕೇಂದ್ರದ ಆಶ್ರಯದಲ್ಲಿ ಶ್ರೀ ಕ್ಷೇತ್ರ ಚಕ್ರಪಾಣಿ ಗೋಪಿನಾಥ ದೇವಸ್ಥಾನ ಆವರಣದಲ್ಲಿ ಪುರುಷ ನೃತ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ನಾಟ್ಯಾಚಾರ್ಯ ಶಾಂತಲಾ ಪ್ರಶಸ್ತಿ ಪುರಸ್ಕೃತ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ಉದ್ಘಾಟಿಸಿದರು.
ಕಲಾವಿದನಲ್ಲಿ ಲಯಬದ್ಧ ಚಲನೆ, ನಾಟಕೀಯತೆಯೊಂದಿಗೆ ನೃತ್ಯ ಸಂಯೋಜನೆ ಈ ಮೂರು ಅಂಶಗಳು ಇದ್ದಾಗ ಮಾತ್ರ ಗುಣಮಟ್ಟ ನಿರ್ಧಾರವಾಗುತ್ತದೆ ಎಂದು ಹಿರಿಯ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಹೇಳಿದರು. ಮುಖ್ಯ ಅತಿಥಿ ಸ್ಥಾನದಿಂದ ರತೀಂದ್ರನಾಥ್ ಮಾತನಾಡಿ ಕಲಾಸೇವೆಯೊಂದಿಗೆ ಶ್ರೀ ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡ ಚಕ್ರಪಾಣಿ ಸಂಸ್ಥೆಯ ನಿರ್ದೇಶಕ ಶ್ರೀ ಸುರೇಶ್ ಅತ್ತಾವರ ಇವರನ್ನು ಅಭಿನಂದಿಸಿದರು. ಕ್ಷೇತ್ರದ ಮಾಜಿ ಆಡಳಿತ ಅಧ್ಯಕ್ಷ ಧರ್ಮಣ್ಣ ನಾಯಕ್ ಶುಭ ಹಾರೈಸಿದರು. ನಿರ್ದೇಶಕ ಸುರೇಶ್ ಅತ್ತಾವರ ಸ್ವಾಗತಿಸಿ, ಲಕ್ಮ್ಮೀಶ ನಿರೂಪಿಸಿ ವಂದಿಸಿದರು.