ಚೊಕ್ಕಾಡಿ : ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ.) ಮಂಗಳೂರು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಘಟಕ, ಜೇ.ಸಿ.ಐ. ಬೆಳ್ಳಾರೆ ಇದರ ಸಂಯುಕ್ತ ಆಶ್ರಯದಲ್ಲಿ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀ ರಾಮಕೃಷ್ಣ ಭಟ್ ಚೊಕ್ಕಾಡಿಯವರ 60ರ ಅಭಿನಂದನಾ ಸಮಾರಂಭ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವು ದಿನಾಂಕ 04 ಆಗಸ್ಟ್ 2024ರಂದು ಚೊಕ್ಕಾಡಿಯ ಶ್ರೀರಾಮ ದೇವಾಲಯದ ದೇಸೀ ಸಭಾಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದ ಇತಿಹಾಸ ತಜ್ಞ, ಲೇಖಕ ಪುಂಡಿಕಾಯಿ ಗಣಪಯ್ಯ ಭಟ್ “ಒಬ್ಬ ವ್ಯಕ್ತಿ ಹತ್ತು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರೆ ಅದು ರಾಮಕೃಷ್ಣ ಭಟ್ಟರ ವ್ಯಕ್ತಿತ್ವ. ರಾಮಕೃಷ್ಣ ಭಟ್ಟರು ನಿವೃತ್ತಿಯಾಗಿ ಕೇವಲ 4 ದಿವಸಗಳಲ್ಲಿ ಅಭಿನಂದನಾ ಗ್ರಂಥ ಬಿಡುಗಡೆಗೊಂಡಿರುವುದು ಇದರ ಹಿಂದೆ ಡಾ. ಮುರಲೀಮೋಹನ್ ಚೂಂತಾರುರವರ ಶ್ರಮ ಎದ್ದು ಕಾಣುತ್ತದೆ. ಸುಮಾರು 600ಕ್ಕೂ ಹೆಚ್ಚು ಲೇಖನಗಳು ಬೇರೆ ಬೇರೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವುದು, ಪುಸ್ತಕಗಳನ್ನು ಬರೆದಿರುವುದು ರಾಮಕೃಷ್ಣ ಭಟ್ಟರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ಸಾಕ್ಷಿಯಾಗಿದೆ. ರಾಮಕೃಷ್ಣ ಭಟ್ಟರು ಸುಪ್ತ ಮನಸ್ಸಿನ ಹಲವು ಮುಖಗಳನ್ನು ಹೊಂದಿರುವ ವಿಶೇಷ ಪ್ರತಿಭೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಿನಂದನಾ ಸಮಿತಿ ಅಧ್ಯಕ್ಷರಾದ ಆನೆಕಾರ ಗಣಪಯ್ಯ ವಹಿಸಿದ್ದರು. ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಇವರು ‘ಅಕ್ಷರ ತೇರಿನ ಸಾರಥಿ’ ಎಂಬ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡುತ್ತಾ “ರಾಮಕೃಷ್ಣ ಅಭಿನಂದನಾ ಗ್ರಂಥವು ಅವರ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿದೆ. ಅವರ ಜೀವನದ ಸಾಧನೆಗಳ ದಾಖಲೆಯಾಗಿದೆ. ಅವರ ವ್ಯಕ್ತಿತ್ವದಲ್ಲಿ ರಾಮ ಮತ್ತು ಕೃಷ್ಣರ ಆದರ್ಶಗಳನ್ನು ಬೆಳೆಸಿಕೊಂಡಿದ್ದಾರೆ” ಎಂದರು.
ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ಮತ್ತು ಜೇ.ಸಿ.ಐ. ಬೆಳ್ಳಾರೆ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ ಅತಿಥಿಗಳಾಗಿ ಭಾಗವಹಿಸಿದ್ದರು. ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ರಾಮ ಪೆರುವಾಜೆ, ಬೆಳಾಲು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ ಗೌಡ ಮತ್ತು ದ.ಕ. ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಮಹಮ್ಮದ್ ರಿಯಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಅಭಿನಂದನಾ ಮಾತುಗಳನ್ನಾಡಿದರು. ಶ್ರೀರಾಮ ದೇವಾಲಯದ ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಭಟ್ ಚೂಂತಾರು ಸ್ವಾಗತಿಸಿ, ಡಾ. ಮುರಲೀಮೋಹನ್ ಚೂಂತಾರು ಪ್ರಸ್ತಾವಿಕ ಮಾತುಗಳನ್ನಾಡಿದರು. ಜೇ.ಸಿ.ಐ. ಬೆಳ್ಳಾರೆ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ ವಂದಿಸಿ, ಪ್ರಕಾಶ್ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು.