Subscribe to Updates

    Get the latest creative news from FooBar about art, design and business.

    What's Hot

    ‘ಭಾವಸಂಗಮ’ ಜಿಲ್ಲಾ ಮಟ್ಟದ ಭಕ್ತಿಗೀತೆ, ದೇಶಭಕ್ತಿ, ಭಾವಗೀತೆ ಸ್ಪರ್ಧೆ | ಕೊನೆಯ ದಿನಾಂಕ ಜುಲೈ 15

    July 4, 2026

    ಪ್ರಬಂಧ ಸ್ಪರ್ಧೆಗೆ ಅರ್ಜಿ ಆಹ್ವಾನ | ಜುಲೈ 08

    July 4, 2026

    ಮಾಧವ ತಿಂಗಳಾಯರ 113ನೇ ಜನ್ಮದಿನಾಚರಣೆಯ ಸಂಸ್ಮರಣಾ ಕಾರ್ಯಕ್ರಮ

    July 4, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ನೃತ್ಯ ವಿಮರ್ಶೆ | ಪ್ರಿಯಾಂಕಳ ಮನಮೋಹಕ ನೃತ್ಯ ಸೌಂದರ್ಯ
    Article

    ನೃತ್ಯ ವಿಮರ್ಶೆ | ಪ್ರಿಯಾಂಕಳ ಮನಮೋಹಕ ನೃತ್ಯ ಸೌಂದರ್ಯ

    July 4, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸಾಮಾನ್ಯವಾಗಿ ಭರತನಾಟ್ಯದ ರಂಗಪ್ರವೇಶದಲ್ಲಿ ‘ಮಾರ್ಗಂ’ ಸಂಪ್ರದಾಯದ ಅನುಕ್ರಮಣಿಕೆಯಲ್ಲಿ ಕೃತಿಗಳನ್ನು ಪ್ರಸ್ತುತಪಡಿಸುವುದು ಪದ್ಧತಿ. ಶಾಸ್ತ್ರೀಯ ಚೌಕಟ್ಟಿನಲ್ಲಿ ನೃತ್ಯಾಭಿನಯ ಇದ್ದರೂ ನೃತ್ಯಗುರುಗಳ ವಿಶೇಷ ಪರಿಕಲ್ಪನೆ ಮತ್ತು ಪ್ರಯೋಗಶೀಲತೆಯಿಂದ ನೃತ್ಯ ವಿಶಿಷ್ಟ ಆಯಾಮವನ್ನು ಪಡೆದುಕೊಳ್ಳುತ್ತದೆ. ಅದರಂತೆ ಯಲಹಂಕದ ಅಂಬೇಡ್ಕರ್ ಭವನದಲ್ಲಿ ದಿನಾಂಕ 27 ಜೂನ್ 2026ರಂದು ನಡೆದ ಗುರು ಪವಿತ್ರಾ ಶ್ರೀಧರ್ ಶಿಷ್ಯೆ ಪ್ರಿಯಾಂಕ ವೆಂಕಟಾಚಾರಿ ಶ್ರೀಮಾನ್ ನಾರಾಯಣನಿಗೆ ಸಮರ್ಪಿತವಾದ ‘ಹರಿ ಭಕ್ತಿ ಸುಧಾ’- ವಿಷಯಾಧಾರಿತ ‘ನವವಿಧ ಭಕ್ತಿ’ಯನ್ನು ಭರತನಾಟ್ಯದಲ್ಲಿ ಸಾಕಾರಗೊಳಿಸಿದ ಕಲಾವಿದೆ ಪ್ರತಿಯೊಂದು ಕೃತಿಯನ್ನೂ ಸಮರ್ಪಕವಾಗಿ ಪರಿಣಾಮಕಾರಿಯಾಗಿ ಅರ್ಪಿಸಿದಳು. ಗುರು ಪವಿತ್ರಾ ಇವರ ಸ್ಫುಟವಾದ ಅಸ್ಖಲಿತ ನಟುವಾಂಗ ಅವಳ ನೃತ್ಯದ ಕಸುವನ್ನು ಉನ್ನತೀಕರಿಸಿತು.

    ಹದಿನೈದರ ಬಾಲೆ ಕಲಾವಿದೆ ಪ್ರಿಯಾಂಕ ತನ್ನ ವಯಸ್ಸಿಗೂ ಮೀರಿದ ಪರಿಶ್ರಮದಿಂದ ಸತತ ನೃತ್ತಗಳ ರಸಧಾರೆ, ಹದವಾದ ಅಭಿನಯ ಸೌಂದರ್ಯದಿಂದ ರಂಗದ ಮೇಲೆ ಸುಮಾರು ಎರಡು ಗಂಟೆಗಳ ಕಾಲ ನಿರಾಯಾಸವಾಗಿ ನರ್ತಿಸಿದ್ದು ವಿಶೇಷ. ಭಕ್ತಿಪ್ರಧಾನ ಕೃತಿಗಳಿಂದ ಜ್ಹೆಂಕರಿಸಿದ ಎಲ್ಲ ಕೃತಿಗಳಿಗೆ ನ್ಯಾಯ ಒದಗಿಸಿದ ಕಲಾವಿದೆಯ ರಮ್ಯ ನರ್ತನಕ್ಕೆ ಹೇಳಿ ಮಾಡಿಸಿದಂತಿದ್ದ ಶಂಖ- ಚಕ್ರಗಳ ದಿವ್ಯವಾದ ರಂಗಸಜ್ಜಿಕೆ ಮತ್ತು ಅವಳ ಹೆಜ್ಜೆ- ಗೆಜ್ಜೆಗಳ ಚೆಂದವನ್ನು, ಭಾವನೆಗಳ ತೀವ್ರತೆಯನ್ನು ಎತ್ತಿ ತೋರಿಸಿದ ಬೆಳಕಿನ ವಿನ್ಯಾಸವೂ ಪೂರಕವಾಗಿತ್ತು.

    ಪ್ರಿಯಾಂಕ, ತನ್ನ ಅಂಗಶುದ್ಧ ನರ್ತನ, ಆತ್ಮವಿಶ್ವಾಸದ ನಡೆಯೊಂದಿಗೆ ಇಡೀ ಕಾರ್ಯಕ್ರಮವನ್ನು ತುಂಬು ಚೈತನ್ಯದಿಂದ ನರ್ತಿಸಿ ಯಶಸ್ವಿಗೊಳಿಸಿದಳು. ಶ್ರೀಹರಿಯನ್ನು ಕುರಿತ ನವವಿಧ ಭಕ್ತಿಯನ್ನು ಅನೇಕ ವಿಶಿಷ್ಟ ಕೃತಿಗಳ ಮೂಲಕ ಭಕ್ತಿ ತಾದಾತ್ಮ್ಯತೆಯಿಂದ ಪಾತ್ರದಲ್ಲಿ ಲೀನಳಾಗಿ ಅಭಿನಯಿಸಿ ತನ್ನ ನೃತ್ತ ಮತ್ತು ಅಭಿನಯ ಎರಡರಲ್ಲಿಯೂ ಗಮನ ಸೆಳೆದಳು. ಶುಭಾರಂಭಕ್ಕೆ – ‘ಪ್ರಣಮಾಂಮ್ಯಹಂ ಶ್ರೀ ಗೌರೀ ಸುತಂ’ ಎಂದು ಪ್ರಥಮ ಪೂಜಿತ ವಿಘ್ನ ವಿನಾಯಕನನ್ನು ಆರಾಧಿಸುವ ಮೂಲಕ ಪುಷ್ಪಾಂಜಲಿಯನ್ನು ನೆರವೇರಿಸಿ, ದಶಾವತಾರದ ಹೊಸ ಅಲರಿಪುವಿನಲ್ಲಿ ಶ್ರೀಹರಿಯ ಹತ್ತೂ ಅವತಾರಗಳ ದಿವ್ಯ ಭಂಗಿಗಳನ್ನು ಅನಾವರಣಗೊಳಿಸಿದಳು. ಇದರ ನಂತರ ಇನ್ನೊಂದು ಬಗೆಯ ಭಕ್ತಿಯ ವಿಧವಾದ ‘ಕೀರ್ತನಂ’ – ಪೆರಿಯವರ್ ತಿರುಮೋಳಿಯ ‘ಪಲ್ಲಾಂಡು ಪಲ್ಲಾಂಡು’ ಶ್ರೀಮನ್ನಾರಾಯಣನ ದಿವ್ಯ ಸಂಕೀರ್ತನೆಯನ್ನು ಅನುಪಮವಾಗಿ ಅಭಿನಯಿಸಿ ನರ್ತಿಸಿದಳು. ಮುಂದೆ- ಸ್ಮರಣಂ – ಸಖ್ಯಂ ನಿವೇದನೆಯಲ್ಲಿ ಶ್ರೀಕೃಷ್ಣನ ಮಹಿಮತೀತ ವ್ಯಕ್ತಿತ್ವ ನಿರೂಪಣೆ, ಅವನ ಬಾಲಲೀಲೆಗಳು, ಗೋಪಿಕೆಯರೊಡನೆ ಅವನ ಸ್ನೇಹ- ಸಖ್ಯ ವಿನೋದಗಳನ್ನು, ಕಲಾವಿದೆ, ಲಾಲ್ಗುಡಿ ಜಯರಾಂ ವಿರಚಿತ ಚಾರುಕೇಶಿ ರಾಗದ ‘ಇನ್ನೂಂ ಮನಂ’ – ಶ್ರೀ ಕೃಷ್ಣನನ್ನು ಕುರಿತ ಭಕ್ತಿಪ್ರಧಾನ ದೀರ್ಘ ವರ್ಣದಲ್ಲಿ ನೃತ್ತಾಭಿನಯದಲ್ಲಿ ಸಮಾನ ಸಾಮರ್ಥ್ಯವನ್ನು ತೋರಿದಳು. ಅವನ ಆತ್ಮ ಸಖ್ಯವನ್ನು ನೋಡುಗರಿಗೆ ದೈವೀಕ ಆಯಾಮದಲ್ಲಿ ಪ್ರದರ್ಶಿಸಿದಳು. ಗುರು ಪವಿತ್ರಾರ ಸೃಜನಾತ್ಮಕ ನೃತ್ಯ ಸಂಯೋಜನೆಯನ್ನು ಶಿಷ್ಯೆ ಚೇತೋಹಾರಿಯಾಗಿ ಸಾಕ್ಷಾತ್ಕರಿಸಿದಳು.

    ಅನಂತರ- ಶ್ರೀ ಅಣ್ಣಮಾಚಾರ್ಯರ ‘ನವ ನಾರಸಿಂಹ’ನ ಕುರಿತ ‘ಕೌತ್ವಂ’ ಕೀರ್ತನ ರೂಪದಲ್ಲಿ ಭಕ್ತ್ಯಾರ್ಪಣೆಯಾಯಿತು. ಕಲಾವಿದೆ ನರಸಿಂಹನ ಒಂಭತ್ತು ರೂಪಗಳನ್ನು ತನ್ನ ಸುಂದರಾಭಿನಯದಿಂದ ಬಹು ಪರಿಣಾಮಕಾರಿಯಾಗಿ ಅಭಿನಯಿಸಿದ್ದು ಶ್ಲಾಘನೀಯವಾಗಿದ್ದು ಪ್ರೇಕ್ಷಕರಿಂದ ಅಪಾರ ಕರತಾಡನ ಪಡೆಯಿತು. ಸಂಚಾರಿ ಕಥಾನಕದಲ್ಲಿ ನಿರೂಪಿಸಿದ ಪ್ರಹ್ಲಾದನ ಮನನೀಯ ಸಂಚಾರಿ ನಾಟಕೀಯ ಆಯಾಮದಲ್ಲಿ ಮೂಡಿಬಂತು. ಮುಂದಿನ ಅಂಡಾಲ್ ನಾಚಿಯರ್ – ಗೋಧಾ ದೇವಿಯ ಅಪೂರ್ವ ಕಥನ ಪ್ರಕರಣ ‘ಆತ್ಮನಿವೇದನೆ’ಯ ಭಾಗವಾಗಿ ಕಣ್ಮನ ಸೆಳೆದ ‘ಪದಂ’ ಹೃದಯಸ್ಪರ್ಶಿಯಾಗಿ ಮನಮುಟ್ಟಿತು.

    ಅಂತ್ಯದಲ್ಲಿ ಭಕ್ತಿಯ ‘ಆನಂದ’ ಕೆನೆಗಟ್ಟಿ, ತಿಲ್ಲಾನರೂಪದಲ್ಲಿ ಕಲಾವಿದೆ ತನ್ನ ಸಂತೋಷ- ಸಂಭ್ರಮಗಳನ್ನು ರಂಗಾಕ್ರಮಣ, ಪಾದಭೇದದ ಸುಂದರ ಅಡವು- ಆಕಾಶಚಾರಿ- ಅರೆಮಂಡಿಗಳ ಕಲಾಪ್ರಪೂರ್ಣನರ್ತನದೊಂದಿಗೆ ತನ್ನ ಸಂತೋಷಾಧಿಕ್ಯವನ್ನು ಹೊರಸೂಸಿ, ಮಂಗಳದೊಂದಿಗೆ ತನ್ನ ನರ್ತನವನ್ನು ಸಂಪನ್ನಗೊಳಿಸಿದಳು.

    ಕಲಾವಿದೆಯ ಸುಂದರ ನರ್ತನಕ್ಕೆ ಸಂಗೀತದ ಸಾಂಗತ್ಯ ನೀಡಿದವರು- ಅತ್ಯಮೋಘ ಗಾಯನದಲ್ಲಿ ವಿದುಷಿ ಹರ್ಷಿತಾ ವಿದ್ಯಾ, ಮೃದಂಗ- ವಿದ್ವಾನ್ ಮಿಥುನ್ ಶಕ್ತಿ, ವೀಣೆ- ವಿದ್ವಾನ್ ಶ್ರೀಕಾಂತ್ ನಿಟ್ಟೂರು, ಕೊಳಲು- ವಿದ್ವಾನ್ ದೀಪಕ್ ಹೆಬ್ಬಾರ್, ಸೊಗಸಾದ ನಟುವಾಂಗದಲ್ಲಿ ಗುರು ಪವಿತ್ರಾ ಶ್ರೀಧರ್.

    ವಿಮರ್ಶೆಕರು : ವೈ.ಕೆ. ಸಂಧ್ಯಾ ಶರ್ಮ

    ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

    baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಮುಲ್ಕಿ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ತು ಉದ್ಘಾಟನಾ ಸಮಾರಂಭ | ಜುಲೈ 05
    Next Article ಮಾಧವ ತಿಂಗಳಾಯರ 113ನೇ ಜನ್ಮದಿನಾಚರಣೆಯ ಸಂಸ್ಮರಣಾ ಕಾರ್ಯಕ್ರಮ
    roovari

    Add Comment Cancel Reply


    Related Posts

    ‘ಭಾವಸಂಗಮ’ ಜಿಲ್ಲಾ ಮಟ್ಟದ ಭಕ್ತಿಗೀತೆ, ದೇಶಭಕ್ತಿ, ಭಾವಗೀತೆ ಸ್ಪರ್ಧೆ | ಕೊನೆಯ ದಿನಾಂಕ ಜುಲೈ 15

    July 4, 2026

    ಪ್ರಬಂಧ ಸ್ಪರ್ಧೆಗೆ ಅರ್ಜಿ ಆಹ್ವಾನ | ಜುಲೈ 08

    July 4, 2026

    ಮಾಧವ ತಿಂಗಳಾಯರ 113ನೇ ಜನ್ಮದಿನಾಚರಣೆಯ ಸಂಸ್ಮರಣಾ ಕಾರ್ಯಕ್ರಮ

    July 4, 2026

    ಮುಲ್ಕಿ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ತು ಉದ್ಘಾಟನಾ ಸಮಾರಂಭ | ಜುಲೈ 05

    July 4, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.