ಅದೊಂದು ಮುಂಜಾನೆಯ ತಂಪಾದ ಹೊತ್ತು – ಹಕ್ಕಿಗಳ ಕಲರವದಂತೆ ಪುಟ್ಟಮಕ್ಕಳು ಗೆಜ್ಜೆಗಳ ಸದ್ದು ಮಾಡುತ್ತ ಸಂಭ್ರಮಿಸುತ್ತ ಓಡಾಡುತ್ತಿರುವ ನಲಿಯುತ್ತಿರುವ ದೃಶ್ಯ ಕಣ್ಣಿಗೆ ಹಬ್ಬವಾಗಿತ್ತು. ಆಕರ್ಷಕ ವೇಷಭೂಷಣ, ಉದ್ದನೆಯ ಕುಚ್ಚಿನ ಜಡೆ, ಹೂವಿನ ದಂಡೆಗಳ ಮಾಲೆಯನ್ನು ಮುಡಿದು, ಸೋಗೆ ಕಣ್ಣಿನ ಅಲಂಕಾರ, ತಿಲಕದ ಶೋಭೆಯಲ್ಲಿ ಒಂದೊಂದು ಪುಟಾಣಿಗಳೂ ಗಂಧರ್ವಲೋಕದ ಕಣ್ಮಣಿಗಳಂತೆ ಮಿನುಗುತ್ತಿದ್ದವು. ಅಂದು ನಿಜವಾಗಿ ‘ಮಕ್ಕಳ ಹಬ್ಬ’ವೆಂದರೂ ಸರಿಯೇ. ಸಂಭ್ರಮದ ವಾತಾವರಣ. ಅದು – ಬೆಂಗಳೂರಿನ ‘ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್’ ಸಭಾಂಗಣದ ವೇದಿಕೆಯ ಮೇಲೆ ನಡೆದ ‘ಅಚ್ಚಿ ಶಾಸ್ತ್ರೀಯ ನೃತ್ಯಶಾಲೆ’ಯ ಮುಕುಲ ಕಲಾವಿದೆಯರು ‘ಚಿಗುರು’ ವಾರ್ಷಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನರ್ತಿಸಿದ ನಲಿವಿನ ಸಂದರ್ಭ. ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ಎಂಬ ಶೀರ್ಷಿಕೆಯಲ್ಲಿ ಪ್ರಾರಂಭವಾದ ಉತ್ಸವ ಇದು.
ಸುಮಾರು ಎರಡು ಗಂಟೆಗಳ ಕಾಲ ಪುಟ್ಟನರ್ತಕಿಯರ ಮುಗ್ಧಮುಖಗಳ ಅಭಿವ್ಯಕ್ತಿ, ಅವರ ಮುದ್ದುಹೆಜ್ಜೆ-ಗೆಜ್ಜೆಗಳ ನಾದ, ಅವರು ಪ್ರದರ್ಶಿಸಿದ ಭರತನಾಟ್ಯದ ಅನೇಕ ಬಂಧಗಳು ನೆರೆದ ಕಲಾರಸಿಕರೆಲ್ಲರಿಗೂ ಆನಂದ ನೀಡಿತ್ತು. ಪುಟ್ಟಮಕ್ಕಳಿಗೆ ನೃತ್ಯಗುರು ಡಾ. ಪದ್ಮಿನಿ ಅಚ್ಚಿ ನೀಡಿದ ಶಿಸ್ತಿನ ತರಬೇತಿ – ಅಭ್ಯಾಸ ನಿಚ್ಚಳವಾಗಿ ಎದ್ದು ಕಾಣುತ್ತಿತ್ತು. ನೃತ್ಯದ ಅನೇಕ ಆಯಾಮಗಳಲ್ಲಿ ಶಿಕ್ಷಣ ನೀಡುವುದಲ್ಲದೆ, ಜೀವನಕ್ಕೆ ಅತ್ಯವಶ್ಯಕವಾದ ಸಂಸ್ಕಾರದ ಪಾಠಗಳೂ ಇಲ್ಲಿ ದೊರೆಯುತ್ತವೆ. ಮಕ್ಕಳ ಸಾಮರ್ಥ್ಯ ಅವರ ಕಲಿಕಾ ಹಂತ ಪರಿಗಣಿಸಿ ಗುರುಗಳು ಅವರಿಗೆ ತಕ್ಕ ನೃತ್ಯ ಸಂಯೋಜನೆ ಮಾಡಿದ್ದರು. ಪುಟಾಣಿ ನೃತ್ಯ ವಿದ್ಯಾರ್ಥಿಗಳು ಅಂಗಶುದ್ಧ ನರ್ತನ ಮಾಡಿದ್ದು ವಿಶೇಷವಾಗಿತ್ತು. ಖಚಿತ ಅಡವು, ಸ್ಪಷ್ಟ ಮುದ್ರೆಗಳು, ಶುದ್ಧ ಆಂಗಿಕಗಳು ಮತ್ತು ನೃತ್ಯದಲ್ಲಿ ಒಡಮೂಡಿದ ಸಾಮರಸ್ಯ ಮಕ್ಕಳ ಪರಿಶ್ರಮಕ್ಕೆ ಹಿಡಿದ ಕನ್ನಡಿಯಾಗಿತ್ತು.



ಮಕ್ಕಳು ಅತ್ಯುತ್ಸಾಹದಿಂದ ಪ್ರಸ್ತುತಿಗೊಳಿಸಿದ ಪುಷ್ಪಾಂಜಲಿ, ಅನೇಕ ದೇವರನಾಮಗಳು, ಪಿಳ್ಳಾರಿ ಗೀತೆ, ಸುಬ್ರಮಣ್ಯಂ ಕೌತ್ವಂ, ಜತಿಸ್ವರ ಮುಂತಾದ ನೃತ್ತ ಬಂಧಗಳನ್ನು ಮಕ್ಕಳು ಸೊಗಸಾಗಿ ಪ್ರಸ್ತುತಿಪಡಿಸಿದರು. ನೃತ್ಯ ಜಗತ್ತಿನಲ್ಲಿ ಖ್ಯಾತರಾಗಿರುವ ವಿದುಷಿ ಪದ್ಮಿನಿ ಅಚ್ಚಿ ಅವರು ಉತ್ತಮ ನೃತ್ಯ ಗುರು- ಕಲಾವಿದೆ, ನೃತ್ಯ ಸಂಯೋಜಕಿಯಾಗಿರುವುದಲ್ಲದೆ ಅನೇಕೆ ಟಿ.ವಿ. ಧಾರಾವಾಹಿ ಮತ್ತು ಚಲನಚಿತ್ರಗಳಲ್ಲೂ ಅಭಿನಯಿಸಿ ಬಹುಮುಖ ಪ್ರತಿಭೆ ಎನಿಸಿದ್ದಾರೆ. ಇವರ ಶಿಷ್ಯೆಯರ ಅನೇಕ ನೃತ್ಯ ಪ್ರದರ್ಶನಗಳು ಸ್ಪರ್ಧೆಗಳಲ್ಲಿ ವಿಜೇತವಾಗಿದ್ದು ವಿಶೇಷವಾಗಿ ಅಚ್ಚಿ ಶಾಲೆಯ ತಿಳಿಜಲ ಮತ್ತು ವಚನ ವೈಭವ ನೃತ್ಯರೂಪಕಗಳು ಅನುಪಮವಾಗಿವೆ. ನುರಿತ ಕಲಾವಿದೆಯಾದ ಪದ್ಮಿನಿ ಪುಟ್ಟಮಕ್ಕಳ ಬಗ್ಗೆ ಅತೀವ ಗಮನ ಹರಿಸಿ ನೇರ ಸಂಗೀತದ ಸಹಕಾರದಲ್ಲಿ ಮಕ್ಕಳ ನೃತ್ಯ ಪ್ರದರ್ಶನ ಏರ್ಪಡಿಸಿರುವುದು ತುಂಬಾ ವಿಶೇಷವಾದ ಸಂಗತಿ ಹಾಗೂ ಅವರ ಅಪಾರ ಕಲಾಪ್ರೀತಿಗೆ ಸಾಕ್ಷಿ.

ಚಿಗುರು ಚಿಣ್ಣರ ಮೇಳದ ಈ ಕಾರ್ಯಕ್ರಮದಲ್ಲಿ ಇದರಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ನೆನಪಿನ ಕಾಣಿಕೆ ಮತ್ತು ಪ್ರಮಾಣಪತ್ರಗಳನ್ನು ಅತಿಥಿಗಳು ವಿತರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಶಶಿಧರ್ ಪ್ರಸಾದ್ ಮತ್ತು ಲೇಖಕಿ- ಅಂಕಣಕಾರ್ತಿ, ನೃತ್ಯ- ನಾಟಕಗಳ ವಿಮರ್ಶಕರಾದ ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ ಆಗಮಿಸಿದ್ದರು. ಅಪೂರ್ವ ಸಂಗೀತ ಸಾಂಗತ್ಯದಲ್ಲಿ ನಟುವಾಂಗ – ಕುಮಾರಿ ಇನಿ ಮಹೇಶ್, ಗಾಯನ ವಿದುಷಿ ಮೈಥಿಲಿ ಶಿಖರ್ಪುರ್, ಮೃದಂಗ- ವಿದ್ವಾನ್ ನಾರಾಯಣ ಸ್ವಾಮಿ, ವಯೊಲಿನ್ – ವಿದ್ವಾನ್ ಮಧುಸೂದನ್ ಮುಂತಾದವರ ಕೊಡುಗೆ ಗಮನಾರ್ಹವಾಗಿತ್ತು.

ವಿಮರ್ಶಕಿ : ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
