ವರ್ಷಕಾಲದ ಹನಿ ಹನಿ ಮಳೆಯ ಆ ತಂಪು ಸಂಜೆಯಲ್ಲಿ ರಂಗದ ಮೇಲೊಂದು ಕೋಲ್ಮಿಂಚಿನ ಬಳ್ಳಿಯೊಂದು ಥಳಥಳನೆ ಹೊಳೆಯುತ್ತ ಇಡೀ ರಂಗವನ್ನು ದೇದೀಪ್ಯಾಯಮಾನಗೊಳಿಸಿ, ಶೋಭೆಯಿಂದ ಕಣ್ಮನ ಸೆಳೆದ ಅನುಪಮ ನೃತ್ಯ ಕಲಾವಿದೆ ಜಾನಕೀ ಸುಬ್ರಮಣ್ಯಂ ತಾನೊಬ್ಬ ಪ್ರತಿಭಾವಂತೆ ಕಲಾವಿದೆ ಎಂಬುದನ್ನು ಅಂದು ಸಾಬೀತುಗೊಳಿಸಿದಳು. ನೆರೆದ ಕಲಾರಸಿಕರೆಲ್ಲರೂ ದೇವಲೋಕದ ಗೊಂಬೆಯಂಥ ಸುಂದರ ನೀಳವಾದ ನಿಲುವಿನ, ಬೊಗಸೆ ಕಂಗಳ, ನೃತ್ಯಕ್ಕೆ ಹೇಳಿ ಮಾಡಿಸಿದಂತಿದ್ದ ಮಾಟವಾದ ಅಂಗಸೌಷ್ಟವದ ಕಲಾವಿದೆಯ ಬಾಹ್ಯರೂಪವಷ್ಟೇ ಅಲ್ಲ ಅವಳ ಕಲಾತ್ಮಕ ನೃತ್ಯಸೌಂದರ್ಯವನ್ನು ವೀಕ್ಷಿಸಿ ಮೋಡಿಗೊಳಗಾದ ಕಲಾರಸಿಕರು ನಿಬ್ಬೆರಗಾಗಿ ಮೆಚ್ಚುಗೆಯ ಕರತಾಡನ ನೀಡಿದರು.

ಬೆಂಗಳೂರಿನ ಹೆಸರಾಂತ ‘ನಟರಾಜರಂಗಂ ಸ್ಕೂಲ್ ಆಫ್ ಡ್ಯಾನ್ಸ್’ ನೃತ್ಯಸಂಸ್ಥೆಯ ನಾಟ್ಯಗುರು ಮತ್ತು ನೃತ್ಯಕಲಾವಿದೆ ಶ್ರೀಮತಿ ಅಭಿನಯ ನಟರಾಜನ್ ಅವರ ಪ್ರಿಯ ಶಿಷ್ಯೆ ಕುಮಾರಿ ಜಾನಕಿ ಸುಬ್ರಮಣ್ಯಂ ಬೆಂಗಳೂರಿನ ಎ.ಡಿ.ಎ. ರಂಗಮಂದಿರದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿ ‘ಮಾರ್ಗಂ’ ಸಂಪ್ರದಾಯದ ಕೃತಿಗಳನ್ನು ಬಹು ಸಮರ್ಥವಾಗಿ ಅಷ್ಟೇ ಚೈತನ್ಯಪೂರ್ಣ ಅದ್ಭುತ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮನಗೆದ್ದಳು.

‘ಪುಷ್ಪಾಂಜಲಿ’ಯಿಂದ ಶುಭಾರಂಭಗೊಳಿಸಿ ಅಂಡಾಳ್ ಕೌತ್ವಂ, ಜತಿಸ್ವರ, ವರ್ಣ, ಅರ್ಧನಾರೀಶ್ವರ ಸ್ತುತಿ, ತಿಲ್ಲಾನದವರೆಗೂ ಜಾನಕಿ ತನ್ನ ರಮ್ಯಾಭಿನಯ – ನಿಖರವಾದ ಆಂಗಿಕಾಭಿನಯ, ಸುಂದರ ಹೆಜ್ಜೆ-ಗೆಜ್ಜೆಗಳ ಸಮ್ಮಿಲನದಲ್ಲಿ ಪಾದರಸದಂತೆ ಲವಲವಿಕೆಯಿಂದ ನರ್ತಿಸಿ ಬೆರಗುಗೊಳಿಸಿದಳು. ಪ್ರಸ್ತುತಿಯ ಮೊದಲಿನಿಂದ ಕಡೆಯವರೆಗೂ ಒಂದೇ ಬಗೆಯ ಚೈತನ್ಯದಿಂದ ಲವಲವಿಕೆಯಿಂದ ಸೊಗಸಾಗಿ ನರ್ತಿಸಿ, ತಾಳ-ಲಯಜ್ಞಾನವನ್ನು ಮೆರೆದು ನೋಡುಗರಿಂದ ಶಹಭಾಷಗಿರಿ ಪಡೆದದ್ದು ಅವಳ ಅಗ್ಗಳಿಕೆ.

‘ಪುಷ್ಪಾಂಜಲಿ’ (ಆರಭಿ ರಾಗ- ಆದಿತಾಳ)ಯಿಂದ ತನ್ನ ಪ್ರಸ್ತುತಿಯನ್ನು ಶುಭಾರಂಭಿಸಿದ ಕಲಾವಿದೆ ಜಾನಕೀ, ತನ್ನ ವಿಶಿಷ್ಟ ನೃತ್ತಗಳ ನವ ವಿನ್ಯಾಸದ ಜ್ಹೆಂಕಾರವನ್ನು ಇಡೀ ರಂಗದ ತುಂಬಾ ಪಸರಿಸಿ, ಚಿಗರೆಯ ಮರಿಯಂತೆ ನಲಿವಿನಿಂದ ಕುಪ್ಪಳಿಸುತ್ತ ದೇವಾನುದೇವತೆಗಳಿಗೆ, ಗುರು-ಹಿರಿಯರಿಗೆ ತನ್ನ ನೃತ್ತಗಳ ಮೂಲಕ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು. ಮುಂದಿನ ರಾಗಮಾಲಿಕೆಯ ‘ಆಂಡಾಳ್ ಕೌತ್ವಂ’ -ಕೊರಳಲ್ಲಿ ಬಣ್ಣ ಬಣ್ಣದ ಹೂಗಳ ಜೋಮಾಲೆ ಧರಿಸಿ, ವರೆ ತುರುಬಿನ ಅಲಂಕಾರದಲ್ಲಿ ಮನಮೋಹಕವಾಗಿ ವಿಜ್ರುಂಭಿಸುತ್ತಿದ್ದ ಮಹಾನ್ ವಿಷ್ಣುಭಕ್ತೆ ಆಂಡಾಳಳ ದೈವೀಕ ಕಥೆಯನ್ನು ಕಲಾವಿದೆ ಬಹು ರೋಚಕವಾಗಿ ಕಣ್ಣಿಗೆ ಕಟ್ಟುವಂತೆ ಚೇತೋಹಾರಿಯಾಗಿ ಚಿತ್ರಿಸಿದಳು.

ನಂತರದ ‘ಜತಿಸ್ವರ’ದಲ್ಲಿ ಮೆರಗು ತುಂಬಿದ ಆಂಗಿಕ ಚಲನೆಗಳ, ಪಾದಭೇದದ ಚಮತ್ಕಾರವನ್ನು ಚಿತ್ರವತ್ತಾಗಿ ನಿರೂಪಿಸಿದಳು. ಮಿಂಚಿನ ವೇಗದ ನೃತ್ತ ಹಾಗೂ ಅಭಿನಯ ಎರಡರಲ್ಲೂ ಸಮಾನ ಹಿಡಿತ ಹೊಂದಿದ್ದ ಕಲಾವಿದೆ ತನ್ನ ಲೀಲಾಜಾಲ ಅದ್ಭುತ ನರ್ತನದಿಂದ ಅದರಲ್ಲೂ ಲಾಲ್ಗುಡಿ ಜಯರಾಂ ವಿರಚಿತ ಭಕ್ತಿ- ಶೃಂಗಾರದ ಸುದೀರ್ಘ ‘ಪದವರ್ಣ’ (ನೀಲಾಂಬರಿ ರಾಗ- ಆದಿತಾಳ) ‘ಸೆಂತಿಲ್ ನಗರ್ ಮೇವುಂ ದೇವ ದೇವ ಶಿವಬಾಲ’ನಲ್ಲಿ ಅನುರಕ್ತಳಾದ ನಾಯಕಿ, ಮುರುಗನ ಪ್ರೀತಿ- ಕರುಣೆಯ ಕೃಪೆಯನ್ನು ಬೇಡುತ್ತಾ ಭಕ್ತಿಯಿಂದ ಅರ್ಚಿಸುವ ಹೃದಯಂಗಮ ಕೃತಿಯ ನಿರೂಪಣೆಯಲ್ಲಿ, ಕಣ್ಮನ ಸೆಳೆದ ನವ ವಿನ್ಯಾಸದ ನೃತ್ತಾವಳಿಗಳನ್ನು ಪ್ರದರ್ಶಿಸಿ, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಅತ್ಯಂತ ಭಾವುಕತೆ ತುಂಬಿದ ಪರಿಣಾಮಕಾರಿಯಾದ ಅಭಿವ್ಯಕ್ತಿ ಹಾಗೂ ಪ್ರೌಢತೆಯಿಂದ ಅಭಿನಯಿಸಿ ಬೆರಗು ಮೂಡಿಸಿದಳು. ಸುಮಾರು ಒಂದು ಗಂಟೆಯ ಅವಧಿಯ ಸುದೀರ್ಘ ವರ್ಣದಲ್ಲಿ ಕಲಾವಿದೆ ಜಾನಕಿಯ ಅಪರಿಮಿತ ಚೈತನ್ಯ – ಕಲಾತ್ಮಕತೆ ಸುವ್ಯಕ್ತವಾಯಿತು.

ಶಿಷ್ಯೆಗೆ ಬಹು ನಿಷ್ಠೆಯಿಂದ ವಿದ್ಯಾದಾನ ಮಾಡಿದ ಉತ್ತಮ ಗುರುವೆಂದು ಹೆಸರು ಗಳಿಸಿರುವ ವಿದುಷಿ ಅಭಿನಯ ಮೊದಲ ಕೃತಿಯಿಂದ ಕಡೆಯ ಕೃತಿಯವರೆಗೂ ಓತಪ್ರೋತವಾಗಿ ತಮ್ಮ ಸುಸ್ವರದಲ್ಲಿ ಸ್ಫುಟವಾಗಿ ನಟುವಾಂಗ ಮಾಡಿ ಶಿಷ್ಯೆಯ ನರ್ತನಕ್ಕೆ ಸ್ಫೂರ್ತಿ ತುಂಬಿದರು. ಇನ್ನೂ ಒಂದು ವಿಶೇಷವೆಂದರೆ, ಮುಂದಿನ ಕೃತಿ ‘ತೀರದ ವಿಳಯಾಟ್ಟು ಪಿಳ್ಳೈ ಕಣ್ಣ’ (ರಚನೆ- ಸುಬ್ರಮಣ್ಯ ಭಾರತಿಯಾರ್) ಬಾಲಕೃಷ್ಣನ ಲೀಲಾವಿನೋದಗಳಿಗೆ ಕನ್ನಡಿ ಹಿಡಿದ ಜಾನಕಿಯ ಸುಮನೋಹರ ಅಭಿನಯದ ಕೃತಿಯ ಸಂದರ್ಭದಲ್ಲಿ, ತುಂಟ ಕೃಷ್ಣ, ಗೋಪಿಕೆಯರನ್ನು ಕಾಡುವ ವಿವಿಧ ನೋಟಗಳ ದೃಶ್ಯಾವಳಿಗಳ ಭಾಗವಾಗಿ ನಟುವಾಂಗ ಮಾಡುತ್ತಿದ್ದ ಗುರು, ಕುಳಿತಲ್ಲೇ ಮನೋಜ್ಞವಾಗಿ ಅಭಿನಯಿಸಿ ಮುಖಾಭಿವ್ಯಕ್ತಿಯಲ್ಲಿ ಪ್ರತಿಕ್ರಿಯಿಸಿದ ಪರಿ ಹೊಸಬಗೆಯದಾಗಿತ್ತು. ನಾಟಕೀಯ ಆಯಾಮದಲ್ಲಿ ನಡೆದ ಗುರು–ಶಿಷ್ಯೆಯರ ಮೂಕಾಭಿನಯದ ಸಂವಾದ ಕುತೂಹಲಕರವಾಗಿತ್ತು. ಇಂಥ ಹೊಸ ಆಯಾಮಗಳ ಪ್ರಯೋಗ, ಗುರು ಅಭಿನಯ ಅವರ ಅಸ್ಮಿತೆ ಎಂದರೆ ಅತಿಶಯೋಕ್ತಿಯಲ್ಲ.

ಶ್ರೀ ಎಂ.ಎಸ್. ಸುಖಿ ರಚಿತ ’ಅರ್ಧನಾರೀಶ್ವರ ಸ್ತುತಿ’ಯಲ್ಲಿ ಜಾನಕೀ ತೋರಿದ ಶಕ್ತಿಶಾಲಿ ಭಂಗಿಗಳ ರೋಚಕತೆ, ಅಂಗಿಕಾಭಿನಯದ ಸೊಗಡು, ಶಿವ ಸಾಕ್ಷಾತ್ಕಾರದ ಝೇಂಕಾರ ಕಣ್ಣಾರೆ ಕಂಡೇ ಸವಿಯುವಂಥದ್ದು. ಅಂತ್ಯದಲ್ಲಿ ಕಲಾವಿದೆ ಸಿಂಧುಭೈರವಿ ರಾಗದ ‘ತಿಲ್ಲಾನ’ವನ್ನು ನಲ್ಲಿ ನಲಿಯುತ್ತ ಆನಂದತುಂದಿಲಳಾಗಿ ರಂಗಾಕ್ರಮಣ ಮಾಡಿ ನರ್ತಿಸುತ್ತ ತನ್ನ ಇಡೀ ಪ್ರಸ್ತುತಿಯ ಸಾರ್ಥಕ್ಯ ಭಾವಸಂಭ್ರಮವನ್ನು ಸಿಂಚನಗೊಳಿಸಿದಳು.

ವಿಮರ್ಶಕಿ : ವೈ.ಕೆ.ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
