ಮಂಗಳೂರು : ಅಧ್ಯಾಪನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದರೊಂದಿಗೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ ಹಾಗೂ ನಿರೂಪಣಾ ಕಲೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಉಪನ್ಯಾಸಕ, ಕಟೀಲು ಮೇಳದ ಕಲಾವಿದ ಡಾ. ವಾದಿರಾಜ ಕಲ್ಲೂರಾಯ ಇವರನ್ನು ಧಾರವಾಡದ ಕಲಾಧರ ಪ್ರತಿಷ್ಠಾನ ಇದರ ವತಿಯಿಂದ ಪ್ರದಾನ ಮಾಡಲಾಗುವ ‘ಕಲಾಧರ ಶ್ರೇಷ್ಠತಾ ಸನ್ಮಾನ’ಕ್ಕೆ ಆಯ್ಕೆ ಮಾಡಲಾಗಿದೆ.
ಅಧ್ಯಾಪನವನ್ನು ಕೇವಲ ಪಠ್ಯಬೋಧನೆಯ ಪರಿಧಿಯಲ್ಲಿ ಸೀಮಿತಗೊಳಿಸದೆ, ಕಲೆ ಮತ್ತು ಸಂಸ್ಕೃತಿಯ ವಿವಿಧ ಆಯಾಮಗಳೊಂದಿಗೆ ಬೆಸೆದುಕೊಂಡು ಸಾಗುತ್ತಿರುವ ಡಾ. ಕಲ್ಲೂರಾಯ ಇವರು ಕಲಾಸಕ್ತ, ನಿರೂಪಕ ಹಾಗೂ ಸಾಂಸ್ಕೃತಿಕ ಸಂಘಟಕರಾಗಿ ಛಾಪು ಮೂಡಿಸಿದ್ದಾರೆ. ಶಿಕ್ಷಣದ ಮೂಲಕ ಜ್ಞಾನವನ್ನು, ಕಲೆಯ ಮೂಲಕ ಸೌಂದರ್ಯಪ್ರಜ್ಞೆಯನ್ನು ಹಾಗೂ ಸಂಸ್ಕೃತಿಯ ಮೂಲಕ ಜೀವನಮೌಲ್ಯಗಳನ್ನು ಪಸರಿಸುವ ಇವರ ಬಹುಮುಖ ಸೇವೆಯನ್ನು ಪರಿಗಣಿಸಿ ಈ ಗೌರವಕ್ಕೆ ಇವರನ್ನು ಆಯ್ಕೆ ಮಾಡಲಾಗಿದೆ. ದಿನಾಂಕ 20 ಅಕ್ಟೋಬರ್ 2026ರಂದು ಬಾಗಲಕೋಟೆ ಜಿಲ್ಲೆಯ ಮುರ್ನಾಳದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಡಾ. ವಾದಿರಾಜ ಕಲ್ಲೂರಾಯ ಇವರಿಗೆ ರೂ.10,000/- ಗೌರವಧನ, ಸನ್ಮಾನ ಪತ್ರ ಒಳಗೊಂಡ ‘ಕಲಾಧರ ಶ್ರೇಷ್ಠತಾ ಸನ್ಮಾನ’ವನ್ನು ಪ್ರದಾನ ಮಾಡಲಾಗುವುದು ಎಂದು ಕಲಾಧರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ಯಾಮಸುಂದರ ಕುಲಕರ್ಣಿ ತಿಳಿಸಿದ್ದಾರೆ.
