Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ‘ಅದಮ್ಯ ರಂಗೋತ್ಸವ’ | ಮಾರ್ಚ್ 24, 25 ಮತ್ತು 26

    March 21, 2026

    ಉಡುಪಿಯ ವಿಶೇಷ ಉಪನ್ಯಾಸ ಹಾಗೂ ಗೋವಿಂದ ಪೈಗಳ ಕಾವ್ಯ ಪ್ರಸ್ತುತಿ

    March 21, 2026

    ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನ

    March 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ನಾಟಕ ವಿಮರ್ಶೆ | ರಂಗಭೂಮಿಯಲ್ಲಿ ಲಾವಣ್ಯ : ಒಂದು ವಿಭಿನ್ನ ದಾರಿ
    Article

    ನಾಟಕ ವಿಮರ್ಶೆ | ರಂಗಭೂಮಿಯಲ್ಲಿ ಲಾವಣ್ಯ : ಒಂದು ವಿಭಿನ್ನ ದಾರಿ

    March 20, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ರಂಗಭೂಮಿ ಎಂದರೆ ಕೇವಲ ಮನರಂಜನೆಯ ವೇದಿಕೆ ಮಾತ್ರವಲ್ಲ; ಅದು ಸಮಾಜದ ಮನಸ್ಸುಗಳನ್ನು ಸ್ಪರ್ಶಿಸುವ, ಮಾನವೀಯ ಮೌಲ್ಯಗಳನ್ನು ನೆನಪಿಸುವ ಹಾಗೂ ಕಾಲದ ಜೊತೆ ಮಾತುಕತೆ ನಡೆಸುವ ಒಂದು ಜೀವಂತ ಕಲಾಮಾಧ್ಯಮ. ಪೀಳಿಗೆಯಿಂದ ಪೀಳಿಗೆಗೆ ಕಥೆಗಳು, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಸಾಗಿಸುವಲ್ಲಿ ರಂಗಭೂಮಿಯ ಪಾತ್ರ ಅಪಾರ. ನಾಟಕದ ಮೂಲಕ ವ್ಯಕ್ತವಾಗುವ ಭಾವನೆಗಳು, ಪ್ರಶ್ನೆಗಳು ಮತ್ತು ಸಂದೇಶಗಳು ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾಗಿ ನೆಲೆಸಿ ಸಮಾಜದ ಚಿಂತನೆಗೆ ಹೊಸ ದಿಕ್ಕು ನೀಡುತ್ತವೆ. ಆದ್ದರಿಂದಲೇ ರಂಗಭೂಮಿ ಕೇವಲ ಕಲೆಯ ಪ್ರದರ್ಶನವಲ್ಲ, ಅದು ಸಮಾಜದೊಂದಿಗೆ ನಡೆಯುವ ಸೃಜನಾತ್ಮಕ ಸಂವಾದವಾಗಿದೆ.

    ರಂಗಭೂಮಿಯ ಉದ್ದೇಶ ಕೇವಲ ಹೊಸತನವನ್ನು ಹುಡುಕುವುದಲ್ಲ, ಸಮಾಜದೊಂದಿಗೆ ಸಂವಾದ ನಡೆಸುವುದೂ ಆಗಿದೆ. ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿರುವ ಕಥೆಗಳ ಮೂಲಕ ಆಲೋಚನೆಗೆ ಪ್ರೇರೇಪಿಸುವುದು ರಂಗಭೂಮಿಯ ನಿಜವಾದ ಶಕ್ತಿ. ಇಂದಿನ ಕಾಲದಲ್ಲಿ ಕೆಲವೊಂದು ವರ್ಗದ ಜನರು ರಂಗಭೂಮಿಯಿಂದ ದೂರವಾಗುತ್ತಿರುವುದನ್ನು ಕಾಣಬಹುದು. ಇದರ ಒಂದು ಪ್ರಮುಖ ಕಾರಣ ಪೌರಾಣಿಕ ಕಥೆಗಳನ್ನು ಅತಿಯಾಗಿ ಬದಲಾಯಿಸಿ ವಿಭಿನ್ನವಾಗಿ ತೋರಿಸುವುದರ ಮೂಲಕ ನಾಟಕಗಳನ್ನು ಪ್ರದರ್ಶಿಸುವುದು. ಈ ರೀತಿಯ ಪ್ರದರ್ಶನಗಳು ಪ್ರೇಕ್ಷಕರಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ವಿಶೇಷವಾಗಿ ಮಕ್ಕಳಿಗೆ ನಾವು ಪುರಾಣದ ಕಥೆಗಳನ್ನು ತೋರಿಸಬೇಕೋ ಬೇಡವೋ, ನಾವು ಕೇಳಿ ಬೆಳೆದ ಕಥೆಗಳೇ ಸತ್ಯವೋ ಅಥವಾ ನಾಟಕದಲ್ಲಿ ತೋರಿಸುವುದೇ ಸತ್ಯವೋ ಎಂಬ ಗೊಂದಲಗಳು ಮೂಡುತ್ತವೆ.

    ರಂಗಭೂಮಿ ಹೊಸ ಪ್ರಯೋಗಗಳನ್ನು ಮಾಡುವುದು ಅಗತ್ಯ. ಆದರೆ ಸಮಾಜದ ವಿವಿಧ ಮನಸ್ಸುಗಳ ಭಾವನೆಗಳನ್ನು ಗೌರವಿಸುವುದು ಅಷ್ಟೇ ಮುಖ್ಯ. ಈ ಹಿನ್ನಲೆಯಲ್ಲಿ ಸರಳವಾದರೂ ಭಾವಪೂರ್ಣವಾದ ನಾಟಕಗಳು ಸದಾ ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತವೆ.

    ಇದಕ್ಕೆ ಸಾಕ್ಷಿಯೆಂಬಂತೆ ದಿನಾಂಕ 04 ಮಾರ್ಚ್ 2026ರಂದು ಶ್ರೀ ಶಾರದಾ ವೇದಿಕೆಯಲ್ಲಿ ಲಾವಣ್ಯ(ರಿ) ಬೈಂದೂರು ಇದರ 49ನೇ ವಾರ್ಷಿಕೋತ್ಸವದ ‘ರಂಗಶ್ರೀ – ರಂಗಹಬ್ಬ’ದ ಪ್ರಯುಕ್ತ ಪ್ರದರ್ಶಿತಗೊಂಡ ರಾಜೇಂದ್ರ ಕಾರಂತರಿಂದ ರಚಿತಗೊಂಡ, ಬಿ. ಗಣೇಶ್ ಕಾರಂತ್ ನಿರ್ದೇಶಿತ ನಾಟಕ ‘ಸಂಜೆಹಾಡು’ ಪ್ರೇಕ್ಷಕರ ಮನಸೂರೆಗೊಂಡಿತು.

    ಅಬ್ಬರದ ರಂಗಸಜ್ಜಿಕೆ ಮತ್ತು ಅಪಾರ ಹಣ ಖರ್ಚು ಮಾಡುವ ಮೂಲಕ ಕೇವಲ ಪ್ರಚಾರಕ್ಕಾಗಿ ಪ್ರದರ್ಶಿತವಾಗುವ ನಾಟಕಗಳ ಮಧ್ಯೆ, ಲಾವಣ್ಯ ಬೈಂದೂರು ತಂಡವು ಅತ್ಯಂತ ಸರಳತೆ ಮತ್ತು ಕಡಿಮೆ ವೆಚ್ಚದ ಮೂಲಕ ಕೇವಲ ನಾಲ್ಕು ಜನ ಕಲಾವಿದರಿಂದ ನಾಟಕವನ್ನು ಪ್ರದರ್ಶಿಸಿ ರಂಗಕಲೆಯ ನಿಜವಾದ ಮೌಲ್ಯವನ್ನು ಪ್ರೇಕ್ಷಕರ ಮುಂದೆ ಕಟ್ಟಿಕೊಟ್ಟಿದೆ.

    ತನ್ನದೇ ಮಗನಿಂದ ದೂರವಾಗುತ್ತಿರುವ ತಂದೆಯ ಹೃದಯಕ್ಕೆ ಆ ಬಾಡಿಗೆದಾರನೇ ನಿಜವಾದ ಮಗನಂತೆ ಹತ್ತಿರವಾಗುವ ಕ್ಷಣಗಳು ನಾಟಕದಲ್ಲಿ ಅತ್ಯಂತ ಭಾವನಾತ್ಮಕವಾಗಿ ಮೂಡಿಬಂದಿವೆ. ರಕ್ತಸಂಬಂಧಕ್ಕಿಂತ ಹೃದಯಗಳ ಆತ್ಮೀಯತೆಯಲ್ಲಿ ಸಂಬಂಧಗಳ ನಿಜವಾದ ಅರ್ಥ ಅಡಗಿದೆ ಎಂಬ ಸಂದೇಶವನ್ನು ಈ ನಾಟಕ ಸೂಕ್ಷ್ಮವಾಗಿ ಆದರೆ ಗಾಢವಾಗಿ ಪ್ರೇಕ್ಷಕರ ಮನಸ್ಸಿಗೆ ತಲುಪಿಸುತ್ತದೆ. ನಾಟಕವು ಹಿರಿಯ ತಲೆಮಾರಿನ ಪ್ರೇಕ್ಷಕರಿಂದ ಹಿಡಿದು ಇಂದಿನ ತಲೆಮಾರಿನ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ತರಿಸುವ ಮೂಲಕ ಪ್ರೇಕ್ಷಕರನ್ನು ಆಲೋಚನೆಗೆ ಪ್ರೇರೇಪಿಸುವ ಭಾವನಾಲೋಕದತ್ತ ಕರೆದೊಯ್ಯಿತು.
    ಇಂದಿನ ಸಮಾಜದಲ್ಲಿ ಮಾನವೀಯ ಸಂಬಂಧಗಳ ಮೌಲ್ಯವನ್ನು ಉಳಿಸಿಕೊಳ್ಳಲು ಮತ್ತು ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸಲು ನಾಟಕಗಳ ಅವಶ್ಯಕತೆ ಅತ್ಯಂತ ಅನಿವಾರ್ಯವಾಗಿದೆ. ಈ ದಿಸೆಯಲ್ಲಿ ಲಾವಣ್ಯದ ಪ್ರಯತ್ನ ಶ್ಲಾಘನೀಯ. ಪ್ರಸ್ತುತ ಕಾಲಘಟ್ಟದ ರಂಗ ನಿರ್ದೇಶಕರ ನಡುವೆ ಲಾವಣ್ಯದ ಬಿ. ಗಣೇಶ್ ಕಾರಂತ್ ಅವರು ವಿಭಿನ್ನವಾಗಿ ಕಾಣಿಸುತ್ತಾರೆ. ಲಾವಣ್ಯದ ನಾಟಕಗಳ ಪ್ರಮುಖ ವಿಶೇಷತೆ ಎಂದರೆ ಸಮಾಜ ಮತ್ತು ರಂಗಭೂಮಿಯ ನಡುವೆ ಇರಬೇಕಾದ ಭಾವನಾತ್ಮಕ ಸಂಬಂಧವನ್ನು ಅವರು ಚೆನ್ನಾಗಿ ಅರ್ಥ ಮಾಡಿಕೊಂಡಿರುವುದು. ಅವರ ನಿರ್ದೇಶನದಲ್ಲಿ ನಾಟಕ ಕೇವಲ ಕಥೆಯಾಗಿ ಉಳಿಯದೆ, ಪ್ರೇಕ್ಷಕರ ಮನಸ್ಸಿನಲ್ಲಿ ಬದುಕುವ ಅನುಭವವಾಗಿ ಮೂಡುತ್ತದೆ.

    “ಸಂಜೆಹಾಡು” ನಾಟಕದಲ್ಲಿ ವಿಶೇಷವಾಗಿ ಲಾವಣ್ಯದ ಹೆಮ್ಮೆಯ ಗಾಯಕ ಮೂರ್ತಿ ಬೈಂದೂರು ಇವರ ಅದ್ಭುತ ಕಂಠಸಿರಿಯಲ್ಲಿ ಮೂಡಿಬಂದ ಹೃದಯ ಮಿಡಿಯುವ ಭಾವಗೀತೆಗಳು, ಕಥೆಯ ಭಾವನೆಯನ್ನು ಹೊತ್ತೊಯ್ಯುವ ರಸವಾಹಿನಿಯಂತೆ ಹರಿದು, ಪ್ರೇಕ್ಷಕರ ಹೃದಯದಲ್ಲಿ ದೀರ್ಘಕಾಲ ಉಳಿಯುವ ಸಂಗೀತಾನುಭವವನ್ನು ನೀಡಿದವು. ನಾಟಕದ ಪಾತ್ರಗಳಿಗೆ ಜೀವ ತುಂಬಿದ ಕಲಾವಿದರ ಅಭಿನಯ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿತು. ತಂದೆಯಾಗಿ ಅಭಿನಯಿಸಿದ ಸುಬ್ರಹ್ಮಣ್ಯ ಗಾಣಿಗ ಅವರ ಅಭಿನಯ ಗಂಭೀರತೆ ಮತ್ತು ಭಾವನಾತ್ಮಕತೆಯ ಸಮನ್ವಯವಾಗಿ ಮೂಡಿ ಬಂದು ಪಾತ್ರದ ಅಂತರಂಗವನ್ನು ಮನೋಜ್ಞವಾಗಿ ಅನಾವರಣಗೊಳಿಸಿತು.

    ಬಾಡಿಗೆದಾರನ ಪಾತ್ರದಲ್ಲಿ ರೋಷನ್ ಕುಮಾರ್ ಅವರ ಲೀಲಾಜಾಲವಾದ, ಚುರುಕಿನ ಮತ್ತು ಸಹಜತೆಯಿಂದ ಕೂಡಿದ ಅಭಿನಯ ನಾಟಕಕ್ಕೆ ವಿಶೇಷ ಚೈತನ್ಯ ನೀಡಿತು. ಮಗನ ಪಾತ್ರದಲ್ಲಿ ಅಭಿನಯಿಸಿದ ವಿಶ್ವನಾಥ ಆಚಾರ್ ಹಾಗೂ ಅಡುಗೆ ಭಟ್ಟರ ಪಾತ್ರದಲ್ಲಿ ಅಭಿನಯಿಸಿದ ಗಣೇಶ್ ಪರಮಾನಂದ ಅವರ ಅಭಿನಯ ನಾಟಕಕ್ಕೆ ವಿಶೇಷ ಮೆರಗು ನೀಡಿತು.

    ರಾಮ ಟೈಲರ್ ಬೈಂದೂರು ಅವರ ತಂಡದ ಬೆಳಕಿನ ವಿನ್ಯಾಸವು ನಾಟಕದ ಭಾವನೆಗಳಿಗೆ ಸರಿಯಾಗಿ ಹೊಂದಿಕೊಂಡಿತ್ತು. ಸರಳತೆಯಲ್ಲಿಯೇ ಸೌಂದರ್ಯವನ್ನು ತೋರುವಂತೆ ಅವರು ಬೆಳಕನ್ನು ಬಳಸಿದ್ದು ಗಮನಾರ್ಹವಾಗಿದೆ. ಹಾಗೆಯೇ ಈ ನಾಟಕದಲ್ಲಿನ ಆಡಂಬರವಿಲ್ಲದ ಸರಳ ರಂಗಸಜ್ಜಿಕೆ ನಾಟಕದ ಸಾರವನ್ನು ಮೆರೆಯುವಂತೆ ವೇದಿಕೆಯನ್ನು ಅರ್ಥಪೂರ್ಣವಾಗಿಸಿತು.

    ಕಳೆದ 49 ವರ್ಷಗಳಿಂದ ಲಾವಣ್ಯ (ರಿ.) ಬೈಂದೂರು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಸಮಾಜದೊಂದಿಗೆ ಅವಿನಾಭಾವ ಸಂಬಂಧವನ್ನು ಬೆಳೆಸಿಕೊಂಡು ಬಂದಿದೆ. ನಾಟಕವನ್ನು ಕೇವಲ ಪ್ರದರ್ಶನವಾಗಿ ಮಾತ್ರವಲ್ಲದೆ, ಒಂದು ಸಂಸ್ಕೃತಿಯ ಆಚರಣೆಯಾಗಿ ರೂಪಿಸುವಲ್ಲಿ ಈ ತಂಡದ ಪಾತ್ರ ಮಹತ್ತರವಾಗಿದೆ.

    ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಮಾಜಮುಖಿ ಹಾಗೂ ಚಿಂತನೆಯನ್ನು ಮೂಡಿಸುವ ನಾಟಕಗಳು ನಿರಂತರವಾಗಿ ಪ್ರದರ್ಶಿತವಾಗಲಿ. ಐವತ್ತರ ಸಂಭ್ರಮದತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ಲಾವಣ್ಯದ ಕಲಾವಿದರಿಂದ ಇನ್ನಷ್ಟು ಸೃಜನಾತ್ಮಕ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳು ಮೂಡಿ ಬಂದು ರಂಗಭೂಮಿಯ ಪ್ರಭೆಯನ್ನು ಇನ್ನಷ್ಟು ವಿಸ್ತರಿಸಲಿ ಎಂಬ ಆಶಯ ಎಲ್ಲರದು. ಲಾವಣ್ಯದ ಈ ಪಯಣ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಹಾಗೂ ಕನ್ನಡ ರಂಗಭೂಮಿಯ ಪರಂಪರೆ ಇನ್ನಷ್ಟು ಸಮೃದ್ಧವಾಗಲಿ ಎಂಬುದು ರಂಗಪ್ರೇಮಿಗಳ ಹಾರೈಕೆ.

    – ನಿರ್ಮಲ ಮಂಜುನಾಥ್ ಬೈಂದೂರು

    article baikady review roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ನಯನ ರಂಗ ಮಂದಿರದಲ್ಲಿ ‘ಎಲ್.ಎಸ್.ಡಿ.’ ಕನ್ನಡ ನಾಟಕ ಪ್ರದರ್ಶನ | ಮಾರ್ಚ್ 20
    Next Article ರಂಗಕರ್ಮಿ ಡಾ. ಜೀವನ್ ರಾಮ್ ಸುಳ್ಯರವರ ಜೊತೆ ಮಾತುಕತೆ | ಮಾರ್ಚ್ 22
    roovari

    Add Comment Cancel Reply


    Related Posts

    ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ‘ಅದಮ್ಯ ರಂಗೋತ್ಸವ’ | ಮಾರ್ಚ್ 24, 25 ಮತ್ತು 26

    March 21, 2026

    ಉಡುಪಿಯ ವಿಶೇಷ ಉಪನ್ಯಾಸ ಹಾಗೂ ಗೋವಿಂದ ಪೈಗಳ ಕಾವ್ಯ ಪ್ರಸ್ತುತಿ

    March 21, 2026

    ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನ

    March 21, 2026

    ಮಂಗಳೂರಿನಲ್ಲಿ ‘ವಸಂತ ಸಂಗೀತೋತ್ಸವ’ ಕಾರ್ಯಕ್ರಮ

    March 21, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.