ಉಪ್ಪಿನಂಗಡಿ: ಗಯಾಪದ ಕಲಾವಿದೆರ್ ಉಬಾರ್ ವತಿಯಿಂದ ‘ಗಯಾಪದ ರಂಗ ಸಂಭ್ರಮ’ ಮತ್ತು ಕಲಾ ಪೋಷಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಕಾಳಿಕಾಂಬ ವೇದಿಕೆಯಲ್ಲಿ ದಿನಾಂಕ 25 ಮಾರ್ಚ್ 2025 ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ನಾಯ್ಕ ಮಾತನಾಡಿ “ಕಲಾವಿದರು ಮತ್ತು ಅವರಲ್ಲಿರುವ ಕಲೆಯನ್ನು ಗುರುತಿಸಿ ಗೌರವಿಸುವ ಮೂಲಕ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಪೋಷಿಸಿದಂತಾಗುತ್ತದೆ” ಎಂದರು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ ಕಾರ್ಯಕ್ರಮ ಉದ್ಘಾಟಿಸಿದರು.
ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಉಪ್ಪಿನಂಗಡಿ ಶ್ರೀರಾಮ ಶಾಲೆಯ ಸಂಚಾಲಕ ಯು. ಜಿ. ರಾಧಾ, ಪತ್ರಕರ್ತ ಸಂತೋಷ್ ಕುಮಾರ್ ಶಾಂತಿನಗರ, ಉಬಾರ್ ಗಯಾಪದ ಕಲಾವಿದೆರ್ ತಂಡದ ಮುಖ್ಯಸ್ಥರಾದ ಬಾಲಕೃಷ್ಣ ಪೂಜಾರಿ ಪೆರುವಾಯಿ ಮಾತನಾಡಿದರು. ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕೇಸರ ರಾಜೇಶ್ ಶಾಂತಿನಗರ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ವಿದ್ಯಾಧರ ಜೈನ್, ಕೈಲಾರು ರಾಜಗೋಪಾಲ ಭಟ್, ರಾಮಚಂದ್ರ ಮಣಿಯಾಣಿ, ಕಂಗ್ಲೆ ವಿಶ್ವನಾಥ ಶೆಟ್ಟಿ, ಗುಣಕರ ಅಗ್ನಾಡಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಂಗಕರ್ಮಿ ರವಿಶಂಕರ ಶಾಸ್ತ್ರಿ ಮಣಿಲ ಇವರಿಗೆ ‘ಕಲಾ ಮಾಣಿಕ್ಯ’ ಬಿರುದು ಪ್ರದಾನ ಮಾಡಲಾಯಿತು. ಬಳಿಕ ಕಲಾ ಪೋಷಕರಿಗೆ ಮತ್ತು ನಾಟಕ ತಂಡದ ಕಲಾವಿದರನ್ನು ಸನ್ಮಾನಿಸಲಾಯಿತು.
ಕಲಾವಿದ ರಂಗಯ್ಯ ಬಳ್ಳಾಲ್ ಕೆದಂಬಾಡಿಬೀಡು ಸ್ವಾಗತಿಸಿ, ಸುನೀಲ್ ಪೆರ್ನೆ ನಿರೂಪಿಸಿ, ಸಂಚಾಲಕ ಕಿಶೋರ್ ಕುಮಾರ್ ಜೋಗಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಗಯಾಪದ ಕಲಾವಿದೆರ್ ಉಬಾರ್ ತಂಡದಿಂದ ‘ನಾಗಮಾಣಿಕ್ಯ’ ನಾಟಕ ಪ್ರದರ್ಶನಗೊಂಡಿತು.