ಮಂಗಳೂರು : ಸಾಹಿತ್ಯಾ ಪ್ರಕಾಶನ ಇವರ ವತಿಯಿಂದ ಪತ್ರಕರ್ತ ರಾಜೇಶ್ ಶೆಟ್ಟಿ ದೋಟ ಇವರು ರಚಿಸಿರುವ ‘ಗುತ್ತೊಂಜಿ ಕತೆಯಾಂಡ್’ ನಾಟಕ ಕೃತಿಯು ದಿನಾಂಕ 07 ಅಕ್ಟೋಬರ್ 2026ರಂದು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಲೋಕಾರ್ಪಣೆಗೊಂಡಿತು.
ಈ ಕಾರ್ಯಕ್ರಮದಲ್ಲಿ ನಾಟಕ ಕೃತಿ ಬಿಡುಗಡೆಗೊಳಿಸಿದ ಜಾನಪದ ವಿದ್ವಾಂಸ, ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಮಾತನಾಡಿ “ನಾಟಕ ಅತ್ಯಂತ ಪರಿಣಾಮಕಾರಿ ಸಾಮಾಜಿಕ ಮಾಧ್ಯಮ. ಹಲವಾರು ಸಾಮಾಜಿಕ ಬದಲಾವಣೆಗಳಿಗೆ ನಾಟಕಗಳು ಕಾರಣವಾಗಿದೆ. ತುಳು ಭಾಷೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ರಚನೆಯಾಗಿರುವ ಪ್ರಕಾರವೂ ನಾಟಕವೇ ಆಗಿದೆ. ತುಳುನಾಡಿನ ಸಂಸ್ಕೃತಿಯ ಹಿರಿಮೆಯನ್ನು ಎತ್ತಿ ಹಿಡಿದ ಗುತ್ತುಗಳ ಕುರಿತು ಹಲವು ಕಾದಂಬರಿ, ನಾಟಕಗಳು ರಚನೆಯಾಗಿವೆ. ಇಲ್ಲಿನ ಸಾಂಸ್ಕೃತಿಕ, ಜಾನಪದೀಯ ದಾಖಲೀಕರಣಕ್ಕೆ ಇವು ಮಹತ್ವದ ಕೊಡುಗೆ ನೀಡಿವೆ. ಪರಂಪರೆಯನ್ನು ನಿರ್ಲಕ್ಷಿಸಿ ಆಧುನಿಕ ತಲೆಮಾರು ಮುಂದುವರಿಯುತ್ತಿರುವ ಹಾಗೂ ನೈತಿಕ ಅಧಃಪತನದತ್ತ ಮುಖಮಾಡುತ್ತಿರುವ ರೂಪಕಗಳಿಗೆ ಸಾಹಿತ್ಯದ ಮೂಲಕ ನಾಟಕದ ರೂಪ ನೀಡಿರುವುದು ಶ್ಲಾಘನೀಯ. ಕಾಲದ ಬದಲಾವಣೆ, ಸ್ಥಿತ್ಯಂತರಗಳನ್ನು ಈ ಕೃತಿ ಅತ್ಯಂತ ಸಮರ್ಥವಾಗಿ ನಿರೂಪಿಸುತ್ತದೆ. ಆಧುನೀಕತೆ ಮತ್ತು ಸಂಸ್ಕೃತಿಯ ಸಂಘರ್ಷ ಪ್ರಸ್ತುತ ಕಾಲಮಾನಕ್ಕೆ ಹೊಂದುತ್ತದೆ. ಬಿಗಿಯಾದ ಕತೆ ಹಾಗೂ ಭಾಷಾ ನಿರೂಪಣೆಯಲ್ಲಿ ಸಾಮಾಜಿಕ ಪಲ್ಲಟ, ತಲೆಮಾರುಗಳ ನಡುವಿನ ಸಂಘರ್ಷವನ್ನು ಸಮರ್ಥವಾಗಿ ಕಟ್ಟಿಕೊಡಲಾಗಿದೆ. ಈ ನಿಟ್ಟಿನಲ್ಲಿ ಇದು ಅತ್ಯಂತ ಮೌಲಿಕ ಕೃತಿ. ಸನ್ನಿವೇಶವನ್ನು ನಿರೂಪಿಸುವುದು ಕತೆಯಾದರೆ, ಪಾತ್ರಗಳ ನಡವಳಿಕೆ, ವರ್ತನೆಯ ಕಾರಣವನ್ನು ವಿವರವಾಗಿ ಶೋಧಿಸುವುದು ಕಾದಂಬರಿ. ಕತೆಯನ್ನು ಸೂಕ್ಷ್ಮಗೊಳಿಸಿ ವೇದಿಕೆಗೆ ತಕ್ಕಂತೆ ನಾಟಕೀಯ ರೂಪ ಕೊಟ್ಟು, ಸಂಘರ್ಷವನ್ನು ನೇರವಾಗಿ ಮುಖಾಮುಖಿಯಾಗಿಸುವುದು ನಾಟಕ. ಈ ನಿಟ್ಟಿನಲ್ಲಿ ಕತೆ, ಸಂಭಾಷಣೆ, ನಿರೂಪಣೆಯಲ್ಲಿ ‘ಗುತ್ತೊಂಜಿ ಕತೆಯಾಂಡ್’ ಯಶಸ್ವಿ ಕೃತಿಯಾಗಿದೆ” ಎಂದು ಹೇಳಿದರು.

ಸಾಹಿತಿ, ರಂಗಕರ್ಮಿ, ನಿರ್ದೇಶಕ ಶಶಿರಾಜ್ ರಾವ್ ಕಾವೂರು ಪುಸ್ತಕ ಪರಿಚಯ ಮಾಡಿ ‘ಗುತ್ತೊಂಜಿ ಕತೆಯಾಂಡ್’ ನಾಟಕದಲ್ಲಿ ತುಳುನಾಡಿನ ಮಣ್ಣಿನ ಸೊಗಡಿದೆ. ಕತೆ ಕಟ್ಟಿಕೊಟ್ಟಿರುವ ಶೈಲಿ ರಂಗಪ್ರಯೋಗಕ್ಕೆ ಪೂರಕವಾಗಿದೆ. ಪಾತ್ರಗಳನ್ನು ಅಯಾಯ ಆಯಾಮದಲ್ಲಿ ನಿಂತು ಚಿತ್ರಿಸಿರುವುದು ಲೇಖಕರ ಸೃಜನಶೀಲತೆಗೆ ಸಾಕ್ಷಿ. ಕತೆಯ ಆಯ್ಕೆ, ಸಂಭಾಷಣೆಯ ಏರಿಳಿತ ಗಮನಾರ್ಹ. ಈ ಕೃತಿ ತುಳು ಸಾಹಿತ್ಯ ಕ್ಷೇತ್ರಕ್ಕೆ ಅಪೂರ್ವ ಕೊಡುಗೆಯಾಗಿದೆ” ಎಂದು ವಿವರಿಸಿದರು. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಬಿ.ಎನ್., ಕೃತಿಕಾರ ರಾಜೇಶ್ ಶೆಟ್ಟಿ ದೋಟ ಉಪಸ್ಥಿತರಿದ್ದರು. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.

‘ಗುತ್ತೊಂಜಿ ಕತೆಯಾಂಡ್’ ನಾಟಕ ಕೃತಿಯ ಪ್ರತಿಗಾಗಿ 94812 21239 ರಾಜೇಶ್ ಶೆಟ್ಟಿ ದೋಟ ಇವರನ್ನು ಸಂಪರ್ಕಿಸಿರಿ.

