ಮಂಗಳೂರು : ವಿಶ್ವಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ‘ವರ್ಧನಿ’ ಪ್ರಾಯೋಜಕ್ವದಲ್ಲಿ ಮತ್ತು ಸಾಧನಾ ಬಳಗ ಸಹಕಾರದೊಂದಿಗೆ ದಿನಾಂಕ 11 ಅಕ್ಟೋಬರ್ 2026ರಂದು ಆಯೋಜಿಸಿದ ‘ಬಾಲರಂಗ’ ಮಕ್ಕಳಿಗೆ ನಾಟಕ ತರಬೇತಿ ನೀಡುವ ಮೂರು ದಿವಸಗಳ ಉಚಿತ ಶಿಬಿರವು ಉದ್ಘಾಟನೆಗೊಂಡಿತು.
ಮಂಗಳೂರು ಎಮ್.ಆರ್.ಪಿ.ಎಲ್.ನ ನಿವೃತ್ತ ಅಧಿಕಾರಿ ಡಾ. ನರೇಶ್ ರಾಮದಾಸ ಕಿಣಿ ಇವರು ದೀಪ ಪ್ರಜ್ವಲನೆ ಮಾಡಿ ಈ ಶಿಬಿರವನ್ನು ಉದ್ಘಾಟಿಸಿ “ಸಂಗೀತ, ನಾಟಕ, ನೃತ್ಯ, ರಂಗ ಪರಿಕರ ತಯಾರಿ, ಮುಖವಾಡ ತಯಾರಿ, ರಂಗ ಸಂಗೀತ ಹೀಗೆ ವಿವಿಧ ಕೌಶಲ್ಯ ಕಲೆಗಳ ಅಭ್ಯಾಸವು ಪರೋಕ್ಷವಾಗಿ ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗುವುದು ಮತ್ತು ಈ ಬಗ್ಗೆ ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ತರಬೇತಿ ನೀಡುವ ಕಾರ್ಯ ವಿಶ್ವ ಕೊಂಕಣಿ ಕೇಂದ್ರವು ಕೈಗೆತ್ತಿಕೊಂಡಿರುವುದು ತುಂಬಾ ಉಪಯುಕ್ತವಾಗಿದೆ ಶಿಬಿರದ ಸಂಪೂರ್ಣ ಪ್ರಯೋಜನ ಪಡೆಯಬೇಕು” ಎಂದು ಅಭಿಪ್ರಾಯಪಟ್ಟರು.
ವಿಶ್ವಕೊಂಕಣಿ ಕೇಂದ್ರದ ಕೋಶಾಧಿಕಾರಿ ಶ್ರೀ ಬಿ.ಆರ್. ಭಟ್ ರವರು ನೆರೆದ ಅತಿಥಿ ಗಣ್ಯರನ್ನು ಸ್ವಾಗತಿಸಿ, ವಿಶ್ವಕೊಂಕಣಿ ಕೇಂದ್ರದ ಉಪಾಧ್ಯಕ್ಷ ಶ್ರೀ ವಿಲಿಯಂ ಡಿಸೋಜಾ, ಶ್ರೀ ಡಿ. ರಮೇಶ್ ನಾಯಕ್, ಹೆಸರಾಂತ ನಾಟಕ ತರಬೇತುದಾರ ಜಗನ್ ಪವಾರ, ಸತೀಶ ಪಿ. ನೀನಾಸಂ, ಅರುಣ್ ಪ್ರಕಾಶ ನಾಯಕ, ಅಶೋಕ ಕಾಮತ್, ಪುಷ್ಪಲತಾ ಭಟ್ ಹಾಗೂ ಶಿಬಿರ ಕಾರ್ಯಕ್ರಮದ ಪ್ರಾಯೋಜಕಿ ವರ್ಧನಿಯ ಶ್ರೀಮತಿ ಉಷಾ ನಂದಗೋಪಾಲ ಶೆಣೈ ಕಾಯ್ರಕ್ರಮದಲ್ಲಿ ಉಪಸ್ಥಿತರಿದ್ದರು. ಮೂರು ದಿವಸಗಳ ಸನಿವಾಸದ ಈ ವಿಶೇಷ ಶಿಬಿರದಲ್ಲಿ ಸುಮಾರು 50 ಮಕ್ಕಳು ಉಚಿತ ಊಟೋಪಚಾರ, ವಸತಿ ಸೌಲಭ್ಯದೊಂದಿಗೆ ನಾಟಕದ ವಿವಿಧ ಕಲೆಗಳ ತರಬೇತಿ ಪಡೆಯುವರು ಎಂದು ಸಾಧನಾ ಬಳಗದ ಮುಖ್ಯಸ್ಥ ಶ್ರೀ ಪ್ರಕಾಶ ಶ್ಶೆಣೈ ಶಿಬಿರದ ಸಂಕ್ಷಿಪ್ತ ವಿವರ ನೀಡಿದರು. ಕೇಂದ್ರದ ಉಪಾಧ್ಯಕ್ಷರಾದ ಶ್ರೀ ಡಿ. ರಮೇಶ್ ನಾಯಕ್ ಧನ್ಯವಾದ ಸಮರ್ಪಣೆ ಮಾಡಿದರು. ಕೇಂದ್ರದ ಲಕ್ಷ್ಮೀ ಕಿಣಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸುಚಿತ್ರಾ ಎಸ್. ಶೆಣೈ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿದ್ಯಾರ್ಥಿ ಶೈವಿಕಾ, ಅನ್ವಿತಾ, ಪ್ರಜಕ್ತಾ ಪ್ರಾರ್ಥಿಸಿದರು.
