ಯಕ್ಷಗಾನ ಕಲೆ ಒಂದು ದೈವಿಕ ಕಲೆ. ಇಂತಹ ದೈವಿಕ ಕಲೆಯಲ್ಲಿ ಅನೇಕ ಮಹಿಳಾ ಕಲಾವಿದರು ತಮ್ಮ ಪ್ರತಿಭೆಯನ್ನು ಕಲಾ ಪ್ರಪಂಚದಲ್ಲಿ ತೋರ್ಪಡಿಸುತ್ತಿದ್ದಾರೆ. ಅದರಲ್ಲೂ ಮಹಿಳಾ ಕಲಾವಿದರು ಯಕ್ಷಗಾನದ ಆಟ ಕೂಟ ಎರಡು ವಿಭಾಗದಲ್ಲಿಯೂ ಇರುವುದು ಬಹು ವಿರಳ. ಇಂತಹ ಕೆಲವು ಮಹಿಳಾ ಕಲಾವಿದರ ಸಾಲಿನಲ್ಲಿ ಆಟ ಕೂಟ ಎರಡು ವಿಭಾಗದಲ್ಲಿ ಮಿಂಚುತ್ತ ಯಕ್ಷಗಾನದ ಯಾವುದೇ ಹಿನ್ನಲೆ ಇಲ್ಲದೆ ಶಾಲಾ ವಾರ್ಷಿಕೋತ್ಸವದ ದಿನ ಪ್ರಥಮ ಹೆಜ್ಜೆ ಕಲಿತು ವೇಷ ಮಾಡಿ ನಂತರ ಇನ್ನೂ ಕಲಿಯಬೇಕು ಎನ್ನುವ ಆಸಕ್ತಿಯಿಂದ ಯಕ್ಷಗಾನ ತರಬೇತಿ ಕೇಂದ್ರಕ್ಕೆ ಸೇರಿ ಯಕ್ಷಗಾನ ಕಲಿತು ಮೇಳದಲ್ಲಿಯು ಅತಿಥಿಯಾಗಿ (ಮಡಾಮಕ್ಕಿ) ಭಾಗವಹಿಸಿದ ಕಲಾವಿದೆ ಸುಪ್ರಿಯಾ ಬಳ್ಕೂರು.

ಉಡುಪಿ ಜಿಲ್ಲೆಯ ಕುಂದಾಪುರದ ಬಳ್ಕೂರಿನ ಅನಿತಾ ಮತ್ತು ಸಂಜೀವ ಇವರ ಮಗಳಾಗಿ 4 ಆಗಸ್ಟ್ 2002ರಂದು ಸುಪ್ರಿಯಾ ಬಳ್ಕೂರು ಅವರ ಜನನ. ಬಿಕಾಂ ಇವರ ವಿದ್ಯಾಭ್ಯಾಸ.
ವಿಠ್ಠಲ ಆಚಾರ್ಯ, ಚಂದ್ರ ಕುಲಾಲ್ ಆವರ್ಸೆ ಮತ್ತು ನವೀನ್ ಕೋಟ ಇವರ ಯಕ್ಷಗಾನ ಗುರುಗಳು.
ನೆಚ್ಚಿನ ಪ್ರಸಂಗಗಳು :-
ಶ್ವೇತ ಕುಮಾರ ಚರಿತ್ರೆ, ವೀರಮಣಿ ಕಾಳಗ, ಪಟ್ಟಾಭಿಷೇಕ, ಅಭಿಮನ್ಯು ಕಾಳಗ, ಕರ್ಣ ಬೇಧನ, ದೇವಿ ಮಹಾತ್ಮೆ, ಬ್ರಹ್ಮಕಪಾಲ.
ನೆಚ್ಚಿನ ವೇಷಗಳು :-
ಶ್ವೇತಕುಮಾರ, ಕೃಷ್ಣ, ರುಕ್ಮಾಂಗ, ಮನ್ಮಥ, ಲಕ್ಷ್ಮಣ, ತಾರಾವಳಿ, ಮಾಲಿನಿ, ಅಂಬೆ.
ಯಕ್ಷಗಾನದ ಪೌರಾಣಿಕ ಪ್ರಸಂಗದಲ್ಲಿ ಇವರನ್ನು ಹೆಚ್ಚು ಪ್ರಭಾವಿಸಿದ್ದು ಪುರುಷ ವೇಷ.

ತಾಳಮದ್ದಲೆ / ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ :-
ಪ್ರಸಂಗ ನಡೆ, ಹಿರಿಯ ಕಲಾವಿದರ ಅನುಸರಣೆ, ಎದುರು ಕಲಾವಿದರೊಂದಿಗೆ, ಭಾಗವತರೊಂದಿಗೆ ಮುಕ್ತವಾಗಿ ಮಾತನಾಡಿಕೊಂಡು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಸುಪ್ರಿಯಾ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಕಲೆ ನಿರಂತರ. ಅದಕ್ಕೆ ಅಳಿವು ಇಲ್ಲ, ಆದರೆ ಕಾಲ ಬದಲಾದ ಹಾಗೆ ಯಕ್ಷಗಾನದ ಸ್ವರೂಪವು ಕೂಡ ಗಣನೀಯವಾಗಿ ಬದಲಾಗುತ್ತಾ ಸಾಗುತ್ತಿದೆ. ಕೆಲವೊಂದು ಬದಲಾವಣೆ ಅಗತ್ಯ ಹಾಗೂ ಸ್ವಾಗತಾರ್ಹ. ಆದಷ್ಟು ಪೌರಾಣಿಕ ಪ್ರದರ್ಶನಗಳನ್ನೇ ಆಡಿಸುವುದು ಉತ್ತಮ. ಯಕ್ಷಗಾನಕ್ಕೆ ಅಗತ್ಯ ಅಲ್ಲ ಅನಿಸುವ ಕೆಲವು ವೇಷಗಳು, ಪದ್ಯಗಳ (ಸಿನಿಮೀಯ ಪದ್ಯಗಳು) ಬಳಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು ಎಂದು ಹೇಳುತ್ತಾರೆ ಸುಪ್ರಿಯಾ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ :-
ಪ್ರಜ್ಞಾವಂತ ಪ್ರೇಕ್ಷಕರ ಕೊರತೆ ಕಾಣುತ್ತಿದೆ. ಕಲಾ ಆರಾಧನೆ ಬಿಟ್ಟು ಕಲಾವಿದರ ಆರಾಧನೆ ಮಾಡುತ್ತಿರುವುದು ಕಂಡು ಬರುತ್ತ ಇದೆ. ಯಕ್ಷಗಾನ ಸಮಷ್ಟಿ ಕಲೆ ಎಲ್ಲವನ್ನೂ ಸಮಾನ ದೃಷ್ಟಿಯಿಂದ ನೋಡಬೇಕು. ಕೇವಲ ಒಂದು ವಿಭಾಗವನ್ನು ಮಾತ್ರ ಪೋಶಿಸುವುದು ಸೂಕ್ತವಲ್ಲ.
ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು :-
ಹವ್ಯಾಸಿ ಕಲಾವಿದೆಯಾಗಿ ಮುಂದುವರೆಯುವ ಬಯಕೆ ಮತ್ತು ಪೌರಾಣಿಕ ಪ್ರಸಂಗಗಳಿಗೆ ಆದ್ಯತೆ. ಯಕ್ಷಗಾನ ಕಲಾರಾಧನೆ ಆಗಬೇಕು ಹೊರತು ಕಲಾವಿದರ ಆರಾಧನೆ ಆಗಬಾರದು.

ಮಹಿಳಾ ಯಕ್ಷಗಾನದಲ್ಲಿ ನೀವು ಕಂಡುಕೊಂಡ ಸಾಧಕ ಹಾಗೂ ಬಾಧಕಗಳು :-
ಪ್ರತಿಭೆಯನ್ನು ಗುರುತಿಸಿ ಉತ್ತಮ ಅವಕಾಶ, ದೂರ ಪ್ರದರ್ಶನಗಳಿಗೆ ಪ್ರಯಾಣ ಕಠಿಣ ಎಂದು ಹೇಳುತ್ತಾರೆ ಸುಪ್ರಿಯಾ.
ಮುಂದಿನ ಯುವ ಪೀಳಿಗೆಗಳಿಗೆ ನಮ್ಮ ಸಂಸ್ಕೃತಿಯನ್ನು ಹಾಗೂ ಯಕ್ಷಗಾನವನ್ನು ಹೇಳಿಕೊಡಬೇಕು ಎಂಬ ಯೋಜನೆ ಇದೆ ಎಂದು ಹೇಳುತ್ತಾರೆ ಸುಪ್ರಿಯಾ.

ಸನ್ಮಾನ ಹಾಗೂ ಪ್ರಶಸ್ತಿ :-
2026-27 ಸಾಲಿನಲ್ಲಿ ಡಾಕ್ಟರ್ ಶಿವರಾಮ ಕಾರಂತರ ಪ್ರಶಸ್ತಿ.
ಯಕ್ಷ ಸಿಂಚನ ಪ್ರಶಸ್ತಿ, ಅಂಬೇಡ್ಕರ್ ಕಲಾರತ್ನ ಪ್ರಶಸ್ತಿ.
ಯಕ್ಷಗಾನ, ತಾಳಮದ್ದಳೆ, ಭಜನೆ, ನೃತ್ಯ ಇವರ ಹವ್ಯಾಸಗಳು.
ತಂದೆ, ತಾಯಿ ಅವರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎನ್ನುತ್ತಾರೆ ಸುಪ್ರಿಯಾ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

ಶ್ರವಣ್ ಕಾರಂತ್ ಕೆ.
‘ಸುಪ್ರಭಾತ’, ಶಕ್ತಿನಗರ, ಮಂಗಳೂರು.
+91 8317463705
