ಸಾಲಿಗ್ರಾಮ : ತೆಕ್ಕಟ್ಟೆಯ ಕೊಮೆ ಯಶಸ್ವಿ ಕಲಾವೃಂದ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಜಂಟಿ ಆಯೋಜನೆಯಲ್ಲಿ ದಿನಾಂಕ 10 ಅಕ್ಟೋಬರ್ 2026ರಂದು ಅರ್ಥಾಂಕುರ ಕಾರ್ಯಕ್ರಮವು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕಲಾವಿದರನ್ನು ಗೌರವಿಸಿದ ದೇವಳದ ಸದಸ್ಯ ಚಂದ್ರಶೇಖರ ಉಪಾಧ್ಯಾಯ “ತಾಳಮದ್ದಳೆ ಕ್ಷೇತ್ರಕ್ಕೆ ಹಲವು ಕಲಾವಿದರು ಪಾತ್ರದಾರಿಗಳಾಗುವಂತೆ ಉಭಯ ಸಂಸ್ಥೆಗಳು ಕುಂದಾಪುರ ಭಾಗದಲ್ಲಿ ಶ್ರಮಿಸುತ್ತಿದೆ. ತಾಳಮದ್ದಳೆ ಅಪಾರ ಬುದ್ಧಿ ಶಕ್ತಿಯನ್ನು ಕಲ್ಪಿಸುತ್ತದೆ. ಈ ಕ್ಷೇತ್ರಕ್ಕೆ ಕಲಾವಿದರು, ಪ್ರೇಕ್ಷಕರು ಹೆಚ್ಚು ಹೆಚ್ಚು ಬರಬೇಕು. ಪೌರಾಣಿಕ ಜ್ಞಾನವನ್ನು ವೃದ್ಧಿಸುವ ಈ ಕಲಾ ಪ್ರಕಾರ ಪ್ರೇಕ್ಷಕರಿಂದ ಬಡವಾಗಬಾರದು. ಬುದ್ಧಿವಂತ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಬೇಕು” ಎಂದು ಹೇಳಿದರು.

ಗುರುಗಳಾದ ಲಂಬೋದರ್ ಹೆಗಡೆ ನಿಟ್ಟೂರು, ವಾಸುದೇವ ರಂಗ ಭಟ್, ರಾಮದೇವ ಐತಾಳ, ತಾರಾನಾಥ ಹೊಳ್ಳ, ಗೋಪಾಲಕೃಷ್ಣ ಶೆಟ್ಟಿ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಬಳಿಕ ತಾಳಮದ್ದಳೆ ‘ಜಾಂಬವತಿ ಪರಿಣಯ’ ರಂಗ ಪ್ರಸ್ತುತಿಗೊಂಡಿತು
