ಕಾಸರಗೋಡು : ಡಾ. ವಾಮನ್ ರಾವ್ ಬೇಕಲ್ ಸಾರಥ್ಯದ ‘ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ಸಾಂಸ್ಕೃತಿಕ ಘಟಕ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಆಯೋಜಿಸುತ್ತಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2026’ ದಿನಾಂಕ 11 ಅಕ್ಟೋಬರ್ 2026ರಂದು ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದ ಎಡನೀರು ಶ್ರೀಗಳು “ತ್ರಿಶಕ್ತಿ ಸ್ವರೂಪಿಣಿ ದುರ್ಗೆಯನ್ನು ಸರ್ವ ವಿದದಿಂದ ಆರಾಧಿಸುವುದೇ ನವರಾತ್ರಿ ಮಹೋತ್ಸವ. ದಸರಾ ನಾಡಹಬ್ಬ ಕನ್ನಡಿಗರ ಹೆಮ್ಮೆಯ ಅಸ್ಮಿತೆ. ಕನ್ನಡಿಗರ ಭಾಷೆ, ಸಾಹಿತ್ಯ, ವಿವಿಧ ಪ್ರಕಾರದ ಕಲೆ, ಭಜನೆ, ಸಂಕೀರ್ತನೆ, ವೈದಿಕ, ಧಾರ್ಮಿಕ ಆಚರಣೆ, ಅಲಂಕಾರ ಕಲೆ, ಉತ್ಸವ, ಮಹೋತ್ಸವ, ಭಕ್ತಿ, ಶರಣಾಗತಿ ಹೀಗೆ ವಿವಿಧ ಭಕ್ತಿ, ಸಂಸ್ಕೃತಿ ಪ್ರಧಾನವಾದ ಆಚರಣೆ, ಅನಾವರಣೆಯೇ ದಸರಾ ಹಬ್ಬ. ಕಾಸರಗೋಡು ದಸರಾ ಆಚರಣೆಯ ಮೂಲಕ ಪಾಂಗೋಡು ಕ್ಷೇತ್ರದಲ್ಲಿ ಹತ್ತು ದಿನಗಳ ಕಾಲ ನಿರಂತರ ಈ ಸಾಂಸ್ಕೃತಿಕೋತ್ಸವ ನಡೆಯುವುದು ಕಾಸರಗೋಡು ಜಿಲ್ಲೆಗೆ ಹೆಮ್ಮೆ. ಕನ್ನಡ ಭವನ ಕಳೆದ 2013ರಿಂದ ನಿರಂತರ ಈ ಕಾರ್ಯವನ್ನು ಮಾಡುತ್ತಿರುವುದು ಅನುಕರಣೀಯ” ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಲಬಾರ್ ದೇವಸ್ವಮ್ ಬೋರ್ಡ್ ಸದಸ್ಯರು ಎ.ಕೆ. ಶಂಕರ್ ಆದೂರು, ಕ.ಸಾ.ಪ. ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೋಟ್ಟೆತೋಡಿ, ಕನ್ನಡ ಪತ್ರಕರ್ತ ಸಂಘ ಅಧ್ಯಕ್ಷ ರವಿ ನಾಯ್ಕಾಪು, ಪಾಂಗೋಡು ಕ್ಷೇತ್ರ ಸಮಿತಿ ಅಧ್ಯಕ್ಷ ನಾಗೇಶ್ ಪಿ. ನಾಯಕ್, ಸಾಂಸ್ಕೃತಿಕ ಘಟಕ ಅಧ್ಯಕ್ಷ ಹಾಗೂ ಪಾತ್ರಿಗಳಾದ ಪಾಂಗೋಡು ಪ್ರವೀಣ್ ನಾಯ್ಕ್, ಪತ್ರಕರ್ತ, ದಸರಾ ಸಂಚಾಲಕ ಜಗನ್ನಾಥ್ ಪಿ.ಕೆ., ಕಾಸರಗೋಡು ನಗರ ಸಭಾ ಕೌನ್ಸಿಲರ್ ಗಳಾದ ಸುಧಾರಾಣಿ ಶರತ್ ಅನಂಗೂರ್, ದಿವ್ಯಾ ಸಂದೀಪ್ ನಾಗರಕಟ್ಟೆ ಮುಂತಾದವರು ದಸರಾ ಬಗ್ಗೆ ಮಾತನಾಡಿದರು. ಹಿರಿಯ ಸಾಹಿತಿ ಶ್ರೀ ವಿ.ಬಿ. ಕುಲಮರ್ವ ದಸರಾ ಬಗ್ಗೆ ವಿವರಿಸಿದರು.
ಇದೇ ವೇದಿಕೆಯಲ್ಲಿ ‘ಕಾಸರಗೋಡು ದಸರಾ ಸಂಕೀರ್ತನ ದಷಾಹ’ವನ್ನು ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ತಾಲೂಕು ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸಿ ಉದ್ಘಾಟಿಸಿದರು. ಗೌರವ ಅಧ್ಯಕ್ಷ ಭಜನಾ ಗುರು ಶ್ರೀ ಜಯಾನಂದ ಕುಮಾರ್ ಹೊಸದುರ್ಗ ಸಂಕೀರ್ತನೆ ಹಾಡಿ ಚಾಲನೆ ನೀಡಿದರು. ವಿಶ್ವಕರ್ಮ ಭಜನಾ ಸಂಘ ಕರಂದಕ್ಕಾಡ್ ಹಾಗೂ ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ಮಹಿಳಾ ಭಜನಾ ಸಂಘ ಕೊರಕ್ಕೊಡ್ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಭವನ ನಿರ್ದೇಶಕರಾದ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಭವನದ ಸಂದ್ಯಾ ರಾಣಿ ಟೀಚರ್ ಸ್ವಾಗತಿಸಿ, ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು. ಕನ್ನಡ ಭವನ ಸ್ಥಾಪಕರು ಹಾಗೂ ಕಾಸರಗೋಡು ದಸರಾ ಪ್ರದಾನ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದರು, ಸಂಚಾಲಕರಾದ ಅಖಿಲೇಶ್ ನಗುಮುಖಮ್, ತಾರಾನಾಥ್ ರೈ ಬದಿಯಡ್ಕ, ಪ್ರದೀಪ್ ನಾಯ್ಕ್ ನಾಗರಕಟ್ಟೆ, ನವೀನ್ ನಾಯ್ಕ್ ಸಹಕರಿಸಿದರು. ಎಲ್ಲ ಅತಿಥಿ, ಅಭ್ಯಾಗತರಿಗೆ ‘ಕಾಸರಗೋಡು ದಸರಾ ಸಾಧಕ’ ಸನ್ಮಾನ ನೀಡಲಾಯಿತು, ಭಜನಾ ತಂಡದ ಎಲ್ಲ ಸದಸ್ಯರನ್ನು ಸಾಧಕ ಸನ್ಮಾನ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
