ಆಧುನಿಕ ಯುಗದಲ್ಲಿ ಧಾವಂತದ ಬದುಕಿನೊಂದಿಗೆ ಧಾವಿಸುತ್ತಿರುವಾಗ ವೃತ್ತಿ ಜೊತೆಗೆ ಹವ್ಯಾಸಗಳ ಕಡೆಗೆ ಗಮನ ಹರಿಸುವುದನ್ನೇ ಮರೆತು ಬಿಡುತ್ತೇವೆ. ಅಂತಹ ಹವ್ಯಾಸವನ್ನು ಜೀವಂತವಾಗಿರಿಸಿಕೊಂಡು ವೃತ್ತಿ ಜತೆಗೆ ಪ್ರವೃತ್ತಿಯನ್ನು ಜತನದಿಂದ ಬೆಳೆಸಿಕೊಂಡು ಬರುತ್ತಿರುವ ಕಲಾವಿದ ವಿದ್ವಾನ್ ಗಣೇಶ ಭಟ್ಟ ಸುಂಕಸಾಳ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳದಲ್ಲಿ 08.02.1995 ರಂದು ಲಕ್ಮ್ಷೀ ಮತ್ತು ಸತ್ಯನಾರಾಯಣ ಭಟ್ಟ ಇವರ ಮಗನಾಗಿ ಜನನ. (ಅಲಂಕಾರ ಶಾಸ್ತ್ರದಲ್ಲಿ ವಿದ್ವತ್) ಎಂ. ಎ, ಬಿ. ಎಡ್ ಇವರ ವಿದ್ಯಾಭ್ಯಾಸ.
ನಾನು ತಾಳಮದ್ದಳೆಯ ಅರ್ಥಧಾರಿ ಅಷ್ಟೆ. ಹೆಜ್ಜೆಯಾಗಲಿ – ಹಿಮ್ಮೇಳದ ಯಾವುದೇ ವಿಭಾಗವೂ ಗೊತ್ತಿಲ್ಲ. ಆದರೆ ನನ್ನಲ್ಲಿ ಒಬ್ಬ ಅರ್ಥಧಾರಿಯನ್ನು ಗುರುತಿಸಿ, ಮೊದಲು ಅವಕಾಶ ಕೊಟ್ಟವರು ಖ್ಯಾತ ಅರ್ಥಧಾರಿಗಳಾದ ಜಬ್ಬಾರ್ ಸಮೋ ಇವರು. ನಂತರ ರಾಧಾಕೃಷ್ಣ ಕಲ್ಚಾರರು, ರಂಗಾಭಟ್ಟರು, ಸಂಕದಗುಂಡಿಯವರು, ಅಜಿತ್ ಕಾರಂತರೇ ಆದಿಯಾಗಿ ಅನೇಕ ಹಿರಿಯ ಕಲಾವಿದರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನನ್ನನ್ನು ತಿದ್ದಿದ್ದಾರೆ. ಹಾಗಾಗಿ ಹಿರಿಯ ಕಲಾವಿದರನೇಕರು ನನ್ನ ಗುರುಗಳೇ.
ಬಾಲ್ಯದಲ್ಲಿ ಓದಿದ ಏ.ಆರ್ ಕೃಷ್ಣಶಾಸ್ತ್ರಿಗಳ ವಚನಭಾರತ ಪುಸ್ತಕ ಪುರಾಣದ ರುಚಿ ಹತ್ತಿಸಿತು. ತದನಂತರ ಯಕ್ಷಗಾನ ಸೆಳೆಯಿತು, ತಾಳಮದ್ದಳೆಯಲ್ಲಿ ಶೇಣಿ – ತೆಕ್ಕಟ್ಟೆ, ಆನಂದ ಮಾಸ್ತರರ ಅರ್ಥ ಮತ್ತು ಜಬ್ಬಾರ್ – ಕಲ್ಚಾರ್, ರಂಗಾಭಟ್ಟರು – ಸಂಕದಗುಂಡಿ ಹೀಗೆ ಜೋಡಿ ಸಂವಾದದ ಅರ್ಥಗಳು ಹೆಚ್ಚಾಗಿ ಕೇಳಿ ಈ ಕ್ಷೇತ್ರದಲ್ಲಿ ಆಸಕ್ತಿ ಮೂಡಿತು ಎಂದು ಹೇಳುತ್ತಾರೆ ಸುಂಕಸಾಳ.
ಕೃಷ್ಣ ಸಂಧಾನ, ಕರ್ಣಬೇಧನ, ಕರ್ಣಪರ್ವ, ವಾಲಿಮೋಕ್ಷ, ಭೀಷ್ಮವಿಜಯ ಇವರ ನೆಚ್ಚಿನ ಪ್ರಸಂಗಗಳಾದರೆ ಹೊಸ ಹೊಳಹಿಗೆ ಅವಕಾಶವಿರುವ ಮತ್ತು ವಾದಕ್ಕಿಂತಲೂ ಭಾವಪ್ರಧಾನ ಪಾತ್ರಗಳೆಲ್ಲವೂ ಇಷ್ಟವೇ. ಬೇಧನದ ಕುಂತಿ, ಸಂಧಾನದ ದ್ರೌಪದಿ, ಬೇಧನ ಮತ್ತು ಕರ್ಣಪರ್ವದ ಕರ್ಣ, ಜಾಂಬವತಿ ಕಲ್ಯಾಣದ ಎಲ್ಲಾ ಪಾತ್ರಗಳು ಇವರ ನೆಚ್ಚಿನ ವೇಷಗಳು
ಮೂಲ ಮಹಾಭಾರತ ಮತ್ತು ರಾಮಾಯಣ ಅಥವಾ ಪ್ರಸಂಗದ ಮೂಲ ಪುರಾಣಗಳನ್ನು ಓದುವುದು ಮತ್ತು ಹೊಸ ಸಾಧ್ಯತೆಗಳ ಆಲೋಚನೆ. ಪ್ರಸಂಗವನ್ನು ಪೂರ್ತಿಯಾಗಿ ಓದುವುದು, ಪ್ರಸಂಗದ ನಡೆ ತಿಳಿಯಲು ಹಿರಿಯ ಕಲಾವಿದರು ನಿರ್ವಹಿಸಿದ ಒಂದೆರಡು ಪ್ರಸಂಗಗಳನ್ನು ಕೇಳಿ ತಯಾರಿ ಮಾಡಿಕೊಳ್ಳುವುದು ಇವು ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಇವರು ತಯಾರಿ ಮಾಡಿಕೊಳ್ಳುವ ರೀತಿಯಾಗಿತ್ತು.
ಯಕ್ಷಗಾನದ ಇಂದಿನ ಸ್ಥಿತಿ ಗತಿಯ ಬಗ್ಗೆ ಮಾತನಾಡುತ್ತಾ “ಆರ್ಥಿಕ ಭದ್ರತೆಗಳು ಹಿಂದಿಗಿಂತ ಈಗ ಚೆನ್ನಾಗಿ ಇದೆ, ಅದು ಸಂತಸವೇ.. ಒಂದು ರಂಗಕಲೆಯಾಗಿ ಬೆಳವಣಿಗೆಯೂ ಇದೆ, ಆದರೆ ಸಾಧ್ಯತೆಗಳು ಹೆಚ್ಚಬೇಕಿದೆ.. ದಕ್ಷಿಣೋತ್ತರ ಕನ್ನಡ ಜಿಲ್ಲೆಗಳು ಎಲ್ಲವನ್ನೂ ಮೀರಿ ಬೆಳೆಯಬೇಕು – ಬೆಳಗಬೇಕು.” ಎಂದರು.
ಯಕ್ಷರಂಗದಲ್ಲಿ ತಮ್ಮ ಮುಂದಿನ ಯೋಜನೆಯ ಬಗ್ಗೆ ಹೇಳುತ್ತಾ “ಒಳ್ಳೆಯ ಸಮರ್ಥ ಕಲಾವಿದನೆನಿಸಿಕೊಳ್ಳಬೇಕು ಮತ್ತು ತೆಕ್ಕಟ್ಟೆ ಆನಂದ ಮಾಸ್ತರರ ಬಗ್ಗೆ ಒಂದು ಪುಸ್ತಕ ಬರೆಯಬೇಕೆಂಬ ಸಂಕಲ್ಪ ಇದೆ, ನೋಡಬೇಕು.”ಎನ್ನುತ್ತಾ ತಮ್ಮ ಮನದ ಅಭಿಲಾಷೆಯನ್ನು ಪ್ರಕಟಪಡಿಸಿದರು.
ಕನ್ನಡದ ಎಲ್ಲ ತೆರನಾದ ಪುಸ್ತಕವನ್ನು ಓದುವುದು, ಕಥೆ-ಕವನ ಬರೆಯುವುದು, ಹಿಂದೂಸ್ತಾನಿ ಸಂಗೀತ ಕೇಳುವುದು ಇತ್ಯಾದಿ ಹವ್ಯಾಸಗಳನ್ನು ಹೊಂದಿರುವ ಇವರು 17.02.2022ರಂದು ವಿದುಷಿ ಸುಮಾ ಭಟ್ಟ ಇವರನ್ನು ಮದುವೆಯಾಗಿ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿ ಮತ್ತು ಪತ್ನಿಯ ಪ್ರೋತ್ಸಾಹ ಹಾಗೂ ಗುರು-ಹಿರಿಯ ಕಲಾವಿದರ ಮಾರ್ಗದರ್ಶನದಿಂದ ತಾಳಮದ್ದಳೆ ರಂಗದಲ್ಲಿ ಮುನ್ನಡೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ವಿನೀತರಾಗಿ ಹೇಳುತ್ತಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಿ ಶುಭವನ್ನುಂಟು ಮಾಡಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಶುಭ ಹಾರೈಕೆಗಳು.
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.