ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಯಡಾಡಿ, ಮತ್ಯಾಡಿ ಗ್ರಾಮದ ಶ್ರೀಮತಿ ಚೆನ್ನು ಹಾಗೂ ದೇವ ದಂಪತಿಯರ ಮಗನಾಗಿ 01.06.1975ರಂದು ವೆಂಕಟೇಶ್ ಗುಡ್ಡೆಯಂಗಡಿ ಅವರ ಜನನ. ಸುಬ್ರಾಯ ಮಲ್ಯ ಹಳ್ಳಾಡಿ (1 ವರ್ಷ 1992), ಪ್ರಸಾದ್ ಕುಮಾರ್ ಮೊಗೆಬೆಟ್ಟು (2016 ರಿಂದ) ಇವರ ಯಕ್ಷಗಾನ ಗುರುಗಳು.
ಬಾಲ್ಯದಿಂದಲೂ ಯಕ್ಷಗಾನದ ಮೇಲೆ ಪ್ರೀತಿ. ಗಣಪತಿ ಪೂಜೆಗೂ ಮುನ್ನ ಯಕ್ಷಗಾನಕ್ಕೆ ಹಾಜರಿ. ಯಕ್ಷಗಾನದಲ್ಲಿ ವೇಷ ಮಾಡಬೇಕು ಎನ್ನುವುದಕ್ಕೆ ನನಗೆ ನಾನೇ ಪ್ರೇರಣೆ; ಕಾರಣ ಬಡತನ. ನಾನು ಚೆಂದವಾಗಿ ಯಕ್ಷಗಾನ ಪದ ಹೇಳುವುದನ್ನು ಕೇಳಿ ನನ್ನ ಪ್ರೀತಿಯ ಗುರುಗಳಾದ ಸರ್ವೋತ್ತಮ ಹೆಗ್ಡೆ ಕೊಳ್ಕೆಬೈಲ್ ಇವರು ದ್ರೌಪದಿ ಪ್ರತಾಪದ ಬಲರಾಮನ ವೇಷ ಕೊಟ್ಟರು. ಅದರಲ್ಲಿನ ಯಶಸ್ಸಿನಿಂದ ಸುಬ್ರಾಯ ಮಲ್ಯರು ನನ್ನನ್ನು ಬಲರಾಮ ಎಂದೇ ಕರೆಯುತ್ತಿದ್ದರು.
ಈಗ ದಕ್ಷ ಗುರುಗಳಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ತುಂಬಾ ಪ್ರೇರಣೆ ಕೊಡುತ್ತಿದ್ದಾರೆ, ಅಲ್ಲದೇ ಮಕ್ಕಳಾದ ಹರ್ಷಿತ್ ಹಾಗೂ ಸುಮಂತ್ ಇಬ್ಬರೂ ನನ್ನಂತೆ ಯಕ್ಷಗಾನದಲ್ಲಿ ಭಾಗವಹಿಸುತ್ತಿದ್ದಾರೆ. ನಾವೆಲ್ಲರೂ ಹವ್ಯಾಸಿ ಯಕ್ಷಗಾನ ಕಲಾವಿದರು. ಮಕ್ಕಳೂ ಉತ್ತಮ ವೇಷಧಾರಿಗಳಾಗಿದ್ದಾರೆ. ಕಾರಣ ಪ್ರಸಾದ್ ಕುಮಾರ್ ಮೊಗೆಬೆಟ್ಟುರವರ ದಕ್ಷ ನಿರ್ದೇಶನ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ಒಂದು ಪ್ರಸಂಗದ ಬಗ್ಗೆ ಆಳವಾಗಿ ಅಧ್ಯಯನ ಮಾಡುವುದು, ಪ್ರಸಂಗದ ಸನ್ನಿವೇಶಗಳಲ್ಲಿ ಸಂದೇಹ ಬಂದರೆ ಗುರುಗಳಾದ ಮೊಗೆಬೆಟ್ಟರ ಹತ್ತಿರ ಕೇಳಿ ತಿಳಿದುಕೊಂಡು, ನನ್ನೊಂದಿಗೆ ಬರುವ ಪಾತ್ರಧಾರಿಗಳಿಗೂ ಸೂಕ್ತವಾಗಿ ಪ್ರಸಂಗದ ಬಗ್ಗೆ ಕಥೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ತಯಾರಿಯನ್ನು ಮಾಡಿಕೊಳ್ಳುತ್ತೇನೆ.
ನನ್ನ ಮೊದಲ ವೇಷ “ದ್ರೌಪದಿ ಪ್ರತಾಪ”(ಪತಿ ಪರಾಜಯ)ದಲ್ಲಿ ಬಲರಾಮ (1992ರಲ್ಲಿ). ಆ ನಂತರ ಸಂಗೀತದಲ್ಲಿ ಪ್ರೀತಿ ಹುಟ್ಟಿತು. ನಾಟಕಗಳಲ್ಲಿ ಹಾಡುವುದು ನನ್ನ ಹವ್ಯಾಸವಾಯಿತು. ನಾಟಕಗಳಲ್ಲಿ ಅಭಿನಯಿಸಲು ಪ್ರಾರಂಭಿಸಿ ಒಳ್ಳೆಯ ನಾಟಕ ಕಲಾವಿದನಾದೆ. ನಂತರ “ಕ್ರಿಕೆಟ್ ವೀಕ್ಷಕ ವಿವರಣೆ” ನನ್ನ ನೆಚ್ಚಿನ ಹವ್ಯಾಸವಾಯಿತು. ಸುಮಾರು 25 ವರ್ಷಗಳ ಸುದೀರ್ಘ ಅವಧಿ. ಯಕ್ಷಗಾನದಲ್ಲಿ ಮೊದಲು ವೇಷ ಮಾಡಿದ್ದು 1992ರಲ್ಲಿ ಎಸ್ಸೆಸ್ಸೆಲ್ಸಿ ಓದುವಾಗ. ನಂತರ 2016ರಿಂದ ಪ್ರತೀ ವರ್ಷವೂ ವೇಷವನ್ನು ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ ವೆಂಕಟೇಶ್.
ನೆಚ್ಚಿನ ಪ್ರಸಂಗಗಳು:-
ದ್ರೌಪದಿ ಪ್ರತಾಪ, ಭೀಷ್ಮ ವಿಜಯ, ಜಾಂಬವತಿ ಕಲ್ಯಾಣ, ಕಂಸ – ಕಂಸ – ಕಂಸ, ಕನಕಾಂಗಿ ಕಲ್ಯಾಣ, ವೀರಮಣಿ ಕಾಳಗ, ಶ್ವೇತ ಕುಮಾರ ಚರಿತ್ರೆ, ಕುಶಲವ, ಗದಾಯುದ್ಧ, ದೇವಿ ಮಹಾತ್ಮೆ, ಚೂಡಾಮಣಿ, ರತ್ನಾವತಿ ಕಲ್ಯಾಣ, ನಾಗಶ್ರೀ, ಶನೀಶ್ವರ ಮಹಾತ್ಮೆ, ಶ್ರೀ ದೇವಿ ಬನಶಂಕರಿ, ಶೂದ್ರ ತಪಸ್ವಿನಿ, ಚೆಲುವೆ ಚಿತ್ರಾವತಿ, ಭೀಷ್ಮ ಪರ್ವ, ಅಭಿಮನ್ಯು ಕಾಳಗ, ಕರ್ಣಾರ್ಜುನ ಕಾಳಗ ಮುಂತಾದ ಪ್ರಸಂಗಗಳು.
ನೆಚ್ಚಿನ ವೇಷಗಳು:-
ಜಾಂಬವತಿ ಕಲ್ಯಾಣದ ಬಲರಾಮ, ದ್ರೌಪದಿ ಪ್ರತಾಪದ ಬಲರಾಮ ಹಾಗೂ ಸೂರ್ಯವರ್ಮ, ಶ್ರೀದೇವಿ ಬನಶಂಕರಿಯ ಕಟುಕ, ಅಭಿಮನ್ಯು ಕಾಳಗದ ದ್ರೋಣ, ಬ್ರಹ್ಮಕಪಾಲದ ಮಹೋಗ್ರ ಮುನಿ, ಶಾಂಭವಿ ವಿಜಯದ ವಿಷ್ಣು, ಕಂಸ ದಿಗ್ವಿಜಯದ ಕಂಸ, ಕನಕಾಂಗಿ ಕಲ್ಯಾಣದ ಬಲರಾಮ, ವೀರಮಣಿ ಕಾಳಗದ ಹನುಮಂತ, ಕುಶಲವದ ಶತ್ರುಘ್ನ, ದೇವಿ ಮಹಾತ್ಮೆಯ ರಕ್ತಬೀಜ, ಕಂಸ ವಧೆಯ ಕಂಸ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಹಿಂದೆ ಯಕ್ಷಗಾನ ತುಂಬಾ ಬಡತನದಿಂದ ಕೂಡಿದ ಕಲಾವಿದರ ಕಲೆಯಾಗಿತ್ತು. ವೇಷಭೂಷಣ, ಕುಣಿತ ಆ ಮಟ್ಟದ ಉತ್ತುಂಗದ ಸ್ಥಿತಿ ಕಂಡಿರಲಿಲ್ಲ. ವೇಷಭೂಷಣಕ್ಕೆ ಮನೆಯಲ್ಲಿ ಇದ್ದ ಬಟ್ಟೆಯನ್ನೇ ಬಳಸುತ್ತಿದ್ದರು. ಆದರೆ ಇಂದು ಯಕ್ಷಗಾನ ಎಲ್ಲಾ ರೀತಿಯಲ್ಲಿ ಶ್ರೀಮಂತ ಕಲೆಯಾಗಿದೆ. ಕಲಾವಿದರಿಗೆ ಸಂಭಾವನೆ, ಆಹಾರ, ರಂಗಸಜ್ಜಿಕೆ ಚೆನ್ನಾಗಿದೆ. ಆದರೆ ಯಕ್ಷಗಾನದ ಗುಣಮಟ್ಟ ಕಡಿಮೆಯಾಗುತ್ತಿದೆ. ಯಕ್ಷಗಾನ ನಮ್ಮ ದೇಶದಲ್ಲಿ ಅಲ್ಲದೇ ವಿದೇಶದಲ್ಲಿಯೂ ಪ್ರದರ್ಶನ ಕಾಣುತ್ತಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನಕ್ಕೆ ಇಂದು ಪ್ರೇಕ್ಷಕರು ಬರ್ತಾ ಇಲ್ಲ ಎಂಬ ದೊಡ್ಡ ಕೂಗು ಕೇಳಿಸುತ್ತಿದೆ. ಎಲ್ಲಾ ಮೇಳದಲ್ಲಿ. ಪ್ರೇಕ್ಷಕರು ಯಾಕೆ ಬರುತ್ತಿಲ್ಲ ಎಂದು ಹಿರಿಯರನ್ನು ಕೇಳಿದಾಗ ಯಕ್ಷಗಾನದಲ್ಲಿ ಏನು ಇದೆ, ಬರೀ ಕುಣಿಯುತ್ತಾರೆ, ಸಿನಿಮಾ ಕಥೆಯನ್ನು ಮಾಡುತ್ತಾರೆ, ಸಾಹಿತ್ಯದಲ್ಲಿ ಬೆಲೆ ಇಲ್ಲ, ಕಲಾವಿದರಲ್ಲಿ ಸತ್ವ ಇಲ್ಲ. ಹಾಗಾಗಿ ನಾವು ನೋಡುವುದು ಏನು ಇದೆ. ಪ್ರೇಕ್ಷಕರು ಬೇಡಿಕೆ ಇಡುತ್ತಾರೆ. ನಾವು ಏನನ್ನು ಮಾಡಲಿಕ್ಕೆ ಹೋಗುತ್ತೇವೆ ಎಂದರೆ ಅದು ಸರಿ ಅಲ್ಲ. ಹಾಗಾಗಿ ಪ್ರೇಕ್ಷಕರು ಕೂಡ ಕಲಾವಿದರನ್ನು ಆರಾಧಿಸದೆ ಕಲೆಯನ್ನು ಆರಾಧಿಸಬೇಕು.
ನಾಟಕದಲ್ಲಿ ಹಾಸ್ಯದಲ್ಲಿ ಬಹಳ ಮೆಚ್ಚುಗೆ ಗಳಿಸಿದ್ದೇನೆ. ಹುಣಸೆಮಕ್ಕಿ ನಾಟಕ ತ್ಯಾಗಿಯಲ್ಲಿ ಅಪಾರ ಜನರ ಪ್ರೀತಿ ಗಳಿಸಿದೆ. ಕಾರಣ ನಮ್ಮೂರಿನಲ್ಲಾದ ಅಣ್ಣ ತಂಗಿ ನಾಟಕದ ಹಾಸ್ಯ ಪಾತ್ರ. ಕ್ರಿಕೆಟ್ ನಲ್ಲಿ ಅತೀ ಹೆಚ್ಚು (95%)ಕನ್ನಡ ಬಳಸಿ ಕನ್ನಡದ ಶ್ರೇಷ್ಠತೆಯನ್ನು ಕಾಪಾಡಬೇಕು ಎನ್ನುವ ಹಂಬಲ. ಯಕ್ಷಗಾನ ಕಲಾವಿದರೇ ಕನ್ನಡದ ಆಸ್ತಿ.
26 ವರುಷಗಳಿಂದ ಕ್ರಿಕೆಟ್ ವೀಕ್ಷಕ ವಿವರಣೆ ಹೇಳುತ್ತಿದ್ದೇನೆ. ಅಪರೂಪಕ್ಕೆ ಎಂಬಂತೆ ನಮ್ಮೂರಿನಲ್ಲಿ ಸ್ವಲ್ಪ ವಾಲಿಬಾಲ್ ವೀಕ್ಷಕ ವಿವರಣೆ ಹೇಳಿದ್ದೇನೆ. ಇದುವರೆಗೆ ಯಾವುದೇ ಸನ್ಮಾನಗಳು ಆಗಿಲ್ಲ. ಯಕ್ಷಗಾನ ಪ್ರಶಸ್ತಿ ದೊರೆತಿಲ್ಲ. ಆದರೆ ಕಾರ್ಯಕ್ರಮ ನಿರೂಪಣೆ, ಆಶು ಭಾಷಣ, ಭಾಷಣ, ಮಿಮಿಕ್ರಿ, ಆಟೋಟ ಸ್ಪರ್ಧೆ, ಕ್ರಿಕೆಟ್ ವೀಕ್ಷಕ ವಿವರಣೆಯಲ್ಲಿ ಬೇಕಾದಷ್ಟು ಜನ ಮನ್ನಣೆ ಗಳಿಸಿದ್ದೇನೆ. ಕ್ರಿಕೆಟ್ ವೀಕ್ಷಕ ವಿವರಣೆ ಯೂಟ್ಯೂಬ್ ನಲ್ಲಿ ಇವೆ. ಯಕ್ಷಗಾನ ವೃತ್ತಿ ಕಲಾವಿದರ ಆಟದ ವಿವರಣೆಯೂ ಇದೆ. ವಿವರಣೆಯ ಸುಮಾರು ಸ್ಮರಣಿಕೆಗಳು ನೂರಾರು ಸಂಖ್ಯೆಯಲ್ಲಿದೆ.
13.05.1999ರಂದು ವೆಂಕಟೇಶ್ ಗುಡ್ಡೆಯಂಗಡಿ ಅವರು ಮಂಜುಳಾ ಅವರನ್ನು ಮದುವೆಯಾಗಿ ಮಕ್ಕಳಾದ ಹರ್ಷಿತ್ ಹಾಗೂ ಸುಮಂತ್ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿಯ, ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ವೆಂಕಟೇಶ್ ಗುಡ್ಡೆಯಂಗಡಿ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು