ಬಡಗುತಿಟ್ಟು ಯಕ್ಷಗಾನ ರಂಗದ ಅಭಿಜಾತ ಕಲಾವಿದ; ಅಭಿಮನ್ಯು, ಬಬ್ರುವಾಹನದಂತಹ ಪುಂಡು ವೇಷಗಳಲ್ಲಿ ಮೆರೆದು ಕ್ರಾಂತಿ ಮೂಡಿಸಿ ಯಕ್ಷರಂಗದ ಅಭಿಮನ್ಯು, ಯಕ್ಷಗಾನದ ಸಿಡಿಲಮರಿ, ಚಿರಯುವಕ ಎಂಬಿತ್ಯಾದಿ ಬಿರುದು ಪಡೆದು ಪುಂಡುವೇಷದಲ್ಲಿ ವಿಶಿಷ್ಟ ಹೆಸರು ಮಾಡಿದ ಕಲಾವಿದರು ಶ್ರೀಯುತ ತೀರ್ಥಹಳ್ಳಿ ಗೋಪಾಲ ಆಚಾರ್ಯ.
ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ:
ಯಕ್ಷಗಾನದ ಉಭಯತಿಟ್ಟುಗಳಿಗೆ ಮಹಾನ್ ಕಲಾವಿದರನ್ನು ನೀಡಿದ ಮಲೆನಾಡಿನ ತೀರ್ಥಹಳ್ಳಿ ಗೋಪಾಲಾಚಾರ್ಯರ ಹುಟ್ಟೂರಾದರೂ ಅವರ ಯಕ್ಷಗಾನ ಕಾರ್ಯಕ್ಷೇತ್ರ ಉಡುಪಿ ಜಿಲ್ಲೆ. ಬಹಳ ಹಿಂದಿನಿಂದಲೂ ಕುಂದಾಪುರ ತಾಲೂಕಿನ ನಾಯ್ಕನಕಟ್ಟೆಯಲ್ಲಿ ನೆಲೆನಿಂತ ಇವರು ತೀರ್ಥಹಳ್ಳಿಯ ವಾಸುದೇವ ಆಚಾರ್ಯ ಹಾಗೂ ಸುಲೋಚನಮ್ಮ ದಂಪತಿಗಳ ಐದು ಮಂದಿ ಮಕ್ಕಳಲ್ಲಿ ಎರಡನೆಯವರಾಗಿ ೨೪.೦೨.೧೯೫೬ ರಂದು ಜನಿಸಿದರು. ಕೇವಲ 3ನೇ ತರಗತಿ ವಿದ್ಯಾಭ್ಯಾಸ ಮಾಡಿ ತೀರ್ಥಹಳ್ಳಿ ಕೃಷ್ಣೋಜಿ ರಾವ್ ಬಳಿ ಪ್ರಾಥಮಿಕ ಯಕ್ಷಗಾನ ಅಭ್ಯಾಸ ಮಾಡಿದರೂ ಉಳಿದದ್ದೆಲ್ಲ ಕಂಡುಕೇಳಿ ಕಲಿತದ್ದೇ ಹೆಚ್ಚು.
ಇವರ ಹೆಜ್ಜೆಗಾರಿಕೆಯಲ್ಲಿ ಮಟಪಾಡಿ ವೀರಭದ್ರ ನಾಯಕರ ಹೆಜ್ಜೆಗುರುತನ್ನು ಕಾಣಬಹುದಾಗಿದೆ. ತನ್ನ 14ನೇ ವಯಸ್ಸಿನಲ್ಲಿ ಮಲೆನಾಡಿನ ರಂಜದಕಟ್ಟೆ ಮೇಳದಲ್ಲಿ ಕೋಡಂಗಿಯಾಗಿ ಗೆಜ್ಜೆಕಟ್ಟಿದ ಇವರು ಹಿರಿಯ ಕಲಾವಿದರಂತೆ ಬಾಲಗೋಪಾಲ, ಪೀಠಿಕಾ ಸ್ತ್ರೀವೇಷ, ಒಡ್ಡೋಲಗ ಪುಂಡುವೇಷ, ಪುರುಷವೇಷ ಹೀಗೆ ಹಂತಹಂತವಾಗಿ ಮೇಲೇರಿ ಬಡಗುತಿಟ್ಟು ಯಕ್ಷಗಾನ ರಂಗದ ಬಹುಬೇಡಿಕೆಯ ಕಲಾವಿದನಾಗಿ ಹೊರಹೊಮ್ಮಿದವರು ತೀರ್ಥಹಳ್ಳಿಯವರು.
ಶಿರಿಯಾರ ಮಂಜುನಾಯ್ಕರನ್ನು ಅಧಿಕೃತ ಗುರುವಾಗಿರಿಸಿಕೊಂಡ ಇವರಿಗೆ ಸಾಲಿಗ್ರಾಮ ಮೇಳದ ಚೌಕಿಯೇ ಗುರುಕುಲವಾಯಿತು. ನಿರಂತರ ಹತ್ತು ವರ್ಷ ನಾಗಶ್ರೀ, ಚೆಲುವೆ ಚಿತ್ರಾವತಿ, ಶ್ರೀದೇವಿ ಬನಶಂಕರಿ, ರತಿರೇಖಾ ಮುಂತಾದ ಪ್ರಸಂಗಗಳಲ್ಲಿ ಮೂರನೇ ವೇಷಧಾರಿಯಾಗಿ ಮಿಂಚಿದ ಇವರು ಪೌರಾಣಿಕ ಪ್ರಸಂಗಗಳಲ್ಲಿ ಅಭಿಮನ್ಯು, ಬಬ್ರುವಾಹನ, ಕುಶ-ಲವ, ಧರ್ಮಾಂಗದ, ರುಕ್ಮಾಂಗ, ಶುಭಾಂಗ, ಚಿತ್ರಕೇತ ಚಿತ್ರವಾಹನ, ಮೈಂದ-ದಿವಿಧ ಮುಂತಾದ ಪುಂಡುವೇಷದಿಂದ ಬಹುಬೇಗ ಜನಮನಗೆದ್ದರು. ಐರೋಡಿಯವರ ಸಭಾ ಅರ್ಜುನ, ಅರಾಟೆಯವರ ಚಿತ್ರಾಂಗದೆಗೆ ಆಚಾರ್ರ ಬಬ್ರುವಾಹನ ಆ ಕಾಲದ ಮಳೆಗಾಲದ ಪ್ರದರ್ಶನಗಳಲ್ಲಿ ಅಪಾರ ಯಶಸ್ಸು ಗಳಿಸಿತ್ತು. ಸಾಲಿಗ್ರಾಮ ಮೇಳದ ಹತ್ತು ವರ್ಷಗಳ ತಿರುಗಾಟದ ಬಳಿಕ ಶಿರಸಿ ಮೇಳಕ್ಕೆ ಸೇರಿದ ಇವರಿಗೆ ಚಿಟ್ಟಾಣಿ ಬಂಧುಗಳ ಒಡನಾಟ ದೊರೆತು ಬಡಾಬಡಗಿನ ನಾಟ್ಯ ಶೈಲಿಯನ್ನೂ ಕಲಿತು ಎರಡೂ ಶೈಲಿಗಳ ಅಧಿಕೃತ ಪ್ರಾತಿನಿಧಿಕ ಕಲಾವಿದರಾಗಿ ಮೂಡಿಬಂದರು.
1986ರಲ್ಲಿ ವೈ. ಕರುಣಾಕರ ಶೆಟ್ಟಿಯವರ ಯಜಮಾನಿಕೆಯಲ್ಲಿ ಡೇರೆ ಮೇಳವಾಗಿ ಪುನರಾರಂಭಗೊಂಡ ಶ್ರೀ ಪೆರ್ಡೂರು ಮೇಳಕ್ಕೆ ಪುರುಷ ವೇಷಧಾರಿಯಾಗಿ ಸೇರಿ ಒಂದೇ ಮೇಳದಲ್ಲಿ 27 ವರ್ಷ ತಿರುಗಾಟ ಮಾಡಿದ ಕೆಲವೇ ಕೆಲವು ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಸುಬ್ರಹ್ಮಣ್ಯ ಧಾರೇಶ್ವರ, ಸುರೇಶ ಶೆಟ್ಟಿ, ದುರ್ಗಪ್ಪ ಗುಡಿಗಾರ್, ಗಜಾನನ ದೇವಾಡಿಗ ಗಜಗಟ್ಟಿ ಹಿಮ್ಮೇಳದಲ್ಲಿ ನಗರ ಜಗನ್ನಾಥ ಶೆಟ್ಟಿ, ಗೋಡೆ ನಾರಾಯಣ ಹೆಗಡೆ, ಆರ್ಗೋಡು ಮೋಹನದಾಸ ಶೆಣೈ, ಉಪ್ಪುಂದ ನಾಗೇಂದ್ರ, ಮುರೂರು ರಮೇಶ ಭಂಡಾರಿ, ರಾಮ ನಾಯರಿ, ಮುಂತಾದ ಕಲಾವಿದರೊಂದಿಗೆ ಪ್ರಥಮ ವರ್ಷವೇ ದಾಖಲೆ ನಿರ್ಮಿಸಿದ ಶೂದ್ರ ತಪಸ್ವಿನಿ, ಅಲ್ಲದೇ ಪೆರ್ಡೂರು ಮೇಳದ ಖ್ಯಾತಿವೆತ್ತ ಪ್ರಸಂಗಗಳಾದ ಪದ್ಮ ಪಲ್ಲವಿ, ಚಾರುಚಂದ್ರಿಕೆ, ಮಾನಸ-ಮಂದಾರ, ಪುಷ್ಪಾಂಜಲಿ ಶಿವರಂಜಿನಿ, ದಾಮಿನಿ-ಭಾಮಿನಿ, ನಾಗವಲ್ಲಿ ಪ್ರಸಂಗಗಳ ಯಶಸ್ಸಿನಲ್ಲಿ ಆಚಾರ್ರ ಕೊಡುಗೆ ಅಪಾರ. ಅಭಿಮನ್ಯು ಪಾತ್ರಕ್ಕೆ ಗೋಪಾಲಾಚಾರ್ಯರೇ ಸಾಟಿ. ಆಚಾರ್ರು ಅಂದರೆ ಅಭಿಮನ್ಯು. ಅಭಿಮನ್ಯು ಅಂದರೆ ಆಚಾರ್ರು ಅನ್ನುವಷ್ಟು ಅವರಿಗೆ ಖ್ಯಾತಿ ಬರಲು ಬಹುಕಾಲ ಬೇಕಾಗಲಿಲ್ಲ.
ನೆಲ್ಲೂರು ಮರಿಯಪ್ಪಾಚಾರ್, ಮರವಂತೆ ನರಸಿಂಹ ದಾಸ್, ಕಾಳಿಂಗ ನಾವಡ, ಸುಬ್ರಹ್ಮಣ್ಯ ಧಾರೇಶ್ವರರಿಂದ ಇಂದಿನ ಭಾಗವತ ರಾಘವೇಂದ್ರ ಆಚಾರ್ಯರವರೆಗೆ ಸುಮಾರು ಮೂರು ತಲೆಮಾರಿನ ಭಾಗವತರ ಪದ್ಯಕ್ಕೆ ಹೆಜ್ಜೆ ಹಾಕಿದ್ದೂ ಅಲ್ಲದೇ ಮೂರು ತಲೆಮಾರಿನ ಹಿರಿಯ ಕಿರಿಯ ಕಲಾವಿದರೊಂದಿಗೆ ಹೆಜ್ಜೆ ಹಾಕಿದ ಕೀರ್ತಿ ಸಹ ಇವರಿಗಿದೆ.
ರಂಗದ ಚಲನೆ ನಿಲುವಿನಲ್ಲಿ ಸ್ವಂತಿಕೆಯ ಛಾಪು, ಹೆಚ್ಚೂ ಅಲ್ಲದ ಕಡಿಮೆಯೂ ಅಲ್ಲದ ಸಮತೂಕದ ಮಾತು, ಔಚಿತ್ಯಕ್ಕೆ ತಕ್ಕ ಅಭಿನಯ, ಅಧಿಕವಲ್ಲದ ಕುಣಿತ, ರಂಗದ ಅಚ್ಚುಕಟ್ಟು ಸುಸ್ಪಷ್ಟ ಮಾತು, ಅಪಾರ ಪ್ರತ್ಯುತ್ಪನ್ನತಾ ಮತಿತ್ವ, ಶ್ರುತಿಬದ್ಧತೆ, ಶಿಸ್ತುಬದ್ದತೆಯಿಂದ ಅಭಿವ್ಯಕ್ತಿ ಪರಿಣಾಮಕಾರಿಯಾಗುವಂತೆ ನೋಡಿಕೊಳ್ಳುವ ಜಾಗರೂಕತೆಯನ್ನು ಇವರ ವೇಷಗಾರಿಕೆಯಲ್ಲಿ ಖಚಿತವಾಗಿ ಗಮನಿಸಬಹುದು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಕೇಳಿದಾಗ:-
ಯಕ್ಷಗಾನದ ಇಂದಿನ ಸ್ಥಿತಿ ತುಂಬಾ ಉತ್ತಮವಾಗಿದೆ. ಪ್ರೇಕ್ಷಕರ ಬಗ್ಗೆ ಹೇಳುವಷ್ಟು ದೊಡ್ಡವನು ನಾನಲ್ಲ.
ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರಿಗೆ ಸಂದಿರುವ ಪ್ರಶಸ್ತಿ ಹಾಗೂ ಸನ್ಮಾನಗಳು:-
2021 ಕನ್ನಡ ರಾಜ್ಯೋತ್ಸವ ಪ್ರಶಸ್ತಿ.
2020 ಕರ್ನಾಟಕ ಯಕ್ಷಗಾನ ಅಕಾಡಮಿ ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿ.
ಪೇಜಾವರ ಶ್ರೀಗಳಿಂದ ರಾಮವಿಠಲ ಪ್ರಶಸ್ತಿ.
ಬೆಂಗಳೂರು ಅಗ್ನಿ ಸೇವಾ ಟ್ರಸ್ಟ್ ಇವರಿಂದ ಯಕ್ಷರಂಗದ ವೀರಕುವರ ಪ್ರಶಸ್ತಿ.
ತೀರ್ಥಹಳ್ಳಿಯಲ್ಲಿ ಮಲೆನಾಡ ನಾಟ್ಯ ಮಯೂರ ಪ್ರಶಸ್ತಿ.
ಯಕ್ಷಗಾನ ಕಲಾರಂಗ ಉಡುಪಿ ರಂಗಸ್ಥಳ ಪ್ರಶಸ್ತಿ.
ನೂರಾಲು ಬೆಟ್ಟು ಕಾರ್ಕಳ ಯಕ್ಷ ತೀರ್ಥ ಪ್ರಶಸ್ತಿ.
ಪೆರ್ಡೂರು ಮೇಳದ ವೇದಿಕೆಯಲ್ಲಿ ಕುಂದಾಪುರದಲ್ಲಿ ಯಕ್ಷರತ್ನ ಪ್ರಶಸ್ತಿ.
ಸಿದ್ಧಕಟ್ಟೆಯಲ್ಲಿ ನಾಟ್ಯಶ್ರೀ ಪ್ರಶಸ್ತಿ.
2022 – 23 ನೇ ಸಾಲಿನ ಸಾಲಿಗ್ರಾಮ ಮೇಳದ ವೇದಿಕೆಯಲ್ಲಿ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ.
2022- 23 ನೇ ಸಾಲಿನ ಜಲವಳ್ಳಿ ವೆಂಕಟೇಶ ರಾವ್ ಪ್ರಶಸ್ತಿ.
ಅಲ್ಲದೆ ತೃಪ್ತಿ ಸುಂದರ ಅಭಿಕರ್ ಅವರ ಚಿತ್ರಕಥೆ, ನಿರ್ದೇಶನ ಮಾಡಿ ಬೆಂಗಳೂರು ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ “ನಲ್ಕೆ” ಚಿತ್ರದಲ್ಲಿ ಯಕ್ಷಗಾನದ ಪಾತ್ರವನ್ನು ಮಾಡಿರುತ್ತಾರೆ ಶ್ರೀಯುತ ತೀರ್ಥಹಳ್ಳಿ ಗೋಪಾಲ ಆಚಾರ್ಯರು.
ತೀರ್ಥಹಳ್ಳಿಯವರು ರಂಜದ ಕಟ್ಟೆ ಮೇಳ 2 ವರ್ಷ, ನಾಗರ ಕೊಡಿಗೆ ಮೇಳ 2 ವರ್ಷ, ಗೋಳಿಗರಡಿ ಮೇಳ 4 ವರ್ಷ, ಸಾಲಿಗ್ರಾಮ ಮೇಳ 10 ವರ್ಷ, ಶಿರಸಿ ಮೇಳ 2 ವರ್ಷ, ಪೆರ್ಡೂರು ಮೇಳದಲ್ಲಿ 27 ವರ್ಷ ತಿರುಗಾಟ ಮಾಡಿ ಸದ್ಯ ನಿವೃತ್ತ ಜೀವನ ನಡೆಸುತ್ತಿದ್ದಾರೆ.
ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರು ಮಂಜುಳ ಅವರನ್ನು ೧೮.೦೬.೧೯೮೮ ರಂದು ಮದುವೆಯಾಗಿ ಮಗ ನಿಧೀಶ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos by:- Ganapti hegde, Praveen Perdoor Photography, Pradeep Hudgod, Sudarshan Mandrathi, Sudeep Hudgod, Dheeraj Udupa Photography, Vijay Kumar Yalanthur.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.