ಮಂಗಳೂರು : ಉರ್ವದಲ್ಲಿರುವ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಇದರ ತ್ರಿಂಶೋತ್ಸವ ಸಂಭ್ರಮದ ಅಂಗವಾಗಿ ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿ ಇದರ ಸಹಯೋಗದೊಂದಿಗೆ ಅರ್ಪಿಸುವ ಸರಣಿ ನೃತ್ಯ ಕಾರ್ಯಕ್ರಮ ‘ನೃತ್ಯಾಮೃತ -7’ದಲ್ಲಿ ದಿನಾಂಕ 21-07-2024ರಂದು ಮಧ್ಯಾಹ್ನ ಗಂಟೆ 1-30ರಿಂದ ‘ಜ್ಞಾನಸುಧಾ’ ವಿಚಾರ ಸಂಕಿರಣ ಸಂವಾದವು ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷಾರಾದ ಡಾ. ಎಂ.ಬಿ. ಪುರಾಣಿಕ್ ಇವರು ಉದ್ಘಾಟಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ರವಿಶಂಕರ್ ರಾವ್ ಇವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದು, ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
‘ನೃತ್ಯ ಸಂಯೋಜನಾ ತಂತ್ರಗಾರಿಕೆ’ ಎಂಬ ವಿಷಯದ ಬಗ್ಗೆ ಸಂವಾದ ಸಹಿತ ಉಪನ್ಯಾಸ ಮತ್ತು ‘ಭರತನಾಟ್ಯ / ಅಭಿನಯ ಪ್ರಸ್ತುತಿಯಲ್ಲಿ ಪ್ರಸ್ತುತತೆ’ ಎಂಬ ವಿಷಯದ ಕುರಿತು ಸಂವಾದಾತ್ಮಕ ಪ್ರಾತ್ಯಕ್ಷಿಕೆಯಿಂದ ಕೂಡಿದ ವಿಚಾರ ಸಂಕಿರಣ ನಡೆಯಲಿದೆ. ಬೆಂಗಳೂರಿನ ಪ್ರಸಿದ್ಧ ಭರತನಾಟ್ಯ ಕಲಾವಿದ ವಿದ್ವಾನ್ ಪಾರ್ಶ್ವನಾಥ್ ಉಪಾಧ್ಯೆ ಇವರು ಸಂಪನ್ಮೂಲ ವ್ಯಕ್ತಿಯಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಶಿಬಿರದಲ್ಲಿ ಭಾಗವಹಿಸಲು ಕನಿಷ್ಠ ಭರತನಾಟ್ಯ ಸೀನಿಯರ್ ಹಂತದ ಅಭ್ಯಾಸ ಮಾಡುತ್ತಿರುವವರು ನೋಂದಾವಣೆಗೆ ಅರ್ಹರೆಂದು ನಾಟ್ಯಾರಾಧನಾ ಕಲಾಕೇಂದ್ರದ ಟ್ರಷ್ಠಿಗಳಾದ ವಿದುಷಿ ಸುಮಂಗಲಾ ರತ್ನಾಕರ್ ರಾವ್, ಶ್ರೀ ಬಿ. ರತ್ನಾಕರ ರಾವ್, ತ್ರಿಂಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಮತ್ತು ಶ್ರೀ ಶಶಿರಾಜ ರಾವ್ ಕಾವೂರ್ ತಿಳಿಸಿದ್ದಾರೆ.