ಮಂಗಳೂರು : ಕಲಾಸೂರ್ಯ ನೃತ್ಯಾಲಯ ಮಂಗಳೂರು ಆಯೋಜಿಸುತ್ತಿರುವ ‘ಕಲಾಭವ’ ಮಾಸಿಕ ನೃತ್ಯ ಸರಣಿ-06ರ ಕಾರ್ಯಕ್ರಮವು ದಿನಾಂಕ 22 ಫೆಬ್ರವರಿ 2026ರಂದು ಮಂಗಳೂರಿನ ಸುಬ್ರಹ್ಮಣ್ಯ ಸದನದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇದರ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಇವರ ಸಹೋದರ ಹಾಗೂ ಶಿಷ್ಯ ವಿದ್ವಾನ್ ಬಿ. ಗಿರೀಶ್ ಕುಮಾರ್ ಇವರ ಏಕಾವ್ಯಕ್ತಿ ಭರತನಾಟ್ಯ ಪ್ರಸ್ತುತಿ ಕಲಾಸಕ್ತರ ಮನಸೂರೆಗೊಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಲ. ಸದಾನಂದ ಉಪಾಧ್ಯಾಯ ಇವರು ಇಂದಿನ ಯುವ ಪೀಳಿಗೆ ತಮ್ಮ ಕಲಿಕೆಯ ಜೊತೆಗೆ ಭರತನಾಟ್ಯದಂತಹ ಲಲಿತಕಲೆಗಳಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು, ಸಾಧನೆಯಿಂದ ಏನನ್ನೂ ಸಾಧಿಸಬಹುದು ಎಂದು ವಿವರಿಸಿ ಸಂಸ್ಥೆಗೆ ಶುಭಹಾರೈಸಿದರು.


ಕುಮಾರಿ ಸನ್ನಿಧಿ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಕುಮಾರಿ ತನುಶ್ರೀ ಇವರ ಓಂಕಾರನಾದ, ಶ್ರೀಲಕ್ಷ್ಮಿ ಇವರ ಶಂಖನಾದ, ಕುಮಾರಿ ಸಾನಿಧ್ಯ ಇವರ ಪಂಚಾಂಗ ಪಠಣ, ಕುಮಾರಿ ಸುಹಾನಿ ಇವರಿಂದ ಭರತನಾಟ್ಯ ಮಕ್ಕಳ ಜೀವನದಲ್ಲಿ ಹೇಗೆ ಉಪಯೋಗವಾಗುತ್ತದೆ ಎಂಬ ವಿಷಯ ಮಂಡಣೆ ಹೆಚ್ಚಿನ ಮೆರುಗು ನೀಡಿತು. ಹಿಮ್ಮೇಳದಲ್ಲಿ ಗುರು ವಿದ್ವಾನ್ ದೀಪಕ್ ಕುಮಾರ್ ನಟುವಾಂಗದಲ್ಲಿ, ವಿದುಷಿ ಪ್ರೀತಿಕಲಾ ಹಾಡುಗಾರಿಕೆಯಲ್ಲಿ, ವಿದ್ವಾನ್ ವಿ. ಮನೋಹರ್ ರಾವ್ ಮೃದಂಗದಲ್ಲಿ, ವಿದ್ವಾನ್ ಕೃಷ್ಣಗೋಪಾಲ್ ಪೂಂಜಾಲಕಟ್ಟೆ ಕೊಳಲಿನಲ್ಲಿ ಸಹಕರಿಸಿದರು. ಕುಮಾರಿ ಶ್ರೀಲಕ್ಷ್ಮಿ ಸ್ವಾಗತಿಸಿ, ಸಂಚಾಲಕರಾದ ವಿಕ್ರಮ್ ಪಡುವೆಟ್ನಾಯ ವಂದಿಸಿ, ಕುಮಾರಿ ದಿಯಾ ಕಾರ್ಯಕ್ರಮ ನಿರೂಪಿಸಿದರು.

