ಮಂಗಳೂರು : ಕಡಲ ತೀರದ ಭಾರ್ಗವ, ಖ್ಯಾತ ಸಾಹಿತಿ ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ಸಲುವಾಗಿ ಕಾರಂತ ಪ್ರಶಸ್ತಿ ಸಮಿತಿ ಮತ್ತು ಕಲ್ಕೂರ ಪ್ರತಿಷ್ಠಾನದಿಂದ ನೀಡಲಾಗುವ ‘ಕಾರಂತ ಪ್ರಶಸ್ತಿ -2026’ನ್ನು ಹಿರಿಯ ಸಾಹಿತಿ, ಕಾದಂಬರಿಗಾರ್ತಿ, ಕವಯತ್ರಿ ವೈದೇಹಿಯವರಿಗೆ ಪ್ರದಾನ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಾರಂತ ಪ್ರಶಸ್ತಿ ಸಮಿತಿಯ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 10 ಅಕ್ಟೋಬರ್ 2026ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಕೊಡಿಯಾಲ್‌ಬೈಲ್‌ನ ಹೊಟೇಲ್ ಜನತಾ ಡಿಲಕ್ಸ್ ನ ಪತ್ತುಮುಡಿ ಸೌಧದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಜರಗಲಿರುವುದು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕನ್ನಡ ಸಾರಸ್ವತ ಲೋಕದ ನಾಡಿನ ಹಿರಿಯ ಬರಹಗಾರ್ತಿ ಪ್ರತಿಷ್ಠಿತ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿರುವ ‘ವೈದೇಹಿ’ ಕಾವ್ಯನಾಮದಿಂದ ಖ್ಯಾತರಾಗಿರುವ ಜಾನಕಿ ಶ್ರೀನಿವಾಸಮೂರ್ತಿ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರು. ‘ವಾಸಂತಿ’ ಎನ್ನುವುದು ಇವರ ಮೂಲ ಹೆಸರು. ವಿವಾಹದ ಬಳಿಕ ಜಾನಕಿ ಎಂಬ ನಾಮಕರಣವಾಯಿತು. ‘ನೀರೆಯರ ಮನ’ ಎಂಬ ಲೇಖನವನ್ನು ಪ್ರಕಟಿಸುವಾಗ ‘ವೈದೇಹಿ’ ಎಂಬ ಕಾವ್ಯನಾಮವನ್ನು ರೂಢಿಸಿಕೊಂಡರು. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಇವರು ಬರೆದಿರುವ ಕಥೆಗಳು, ಕವನಗಳು, ವೈಚಾರಿಕ ಲೇಖನಗಳು ಪ್ರಕಟಗೊಂಡಿವೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎಂ.ಕೆ. ಇಂದಿರಾ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಅಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿ ಸಹಿತ ಅನೇಕಾನೇಕ ಪ್ರಶಸ್ತಿಗಳನ್ನು ಪಡೆದಿರುವ ವೈದೇಹಿಯವರು ‘ಕಥಾ ಸಂಕಲನಗಳು’, ಕವನ ಸಂಗ್ರಹಗಳು, ಮಕ್ಕಳ ಸಾಹಿತ್ಯ, ಪ್ರಬಂಧಗಳು, ಅನುವಾದ ಸಾಹಿತ್ಯ, ಕಾದಂಬರಿಗಳನ್ನು ಬರೆದಿರುವರು. ಇವರು ಬರೆದಿರುವ ‘ಅಸ್ಪೃಶ್ಯರು’ ಕಾದಂಬರಿ ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯಪುಸ್ತಕವಾಗಿದೆ. ಸಣ್ಣಕಥೆಗಳು ಬೆಂಗಳೂರು ವಿಶ್ವವಿದ್ಯಾಲಯದ ತರಗತಿಗಳಿಗೆ ಪಠ್ಯವಾಗಿದೆ. ಈ ಬಾರಿಯ ಮೈಸೂರು ದಸರಾ ಕವಿಗೋಷ್ಠಿ ವೈದೇಹಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
