ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಗ್ರಾಮ ಪಂಚಾಯತ್ ಬಲ್ನಾಡು ಹಾಗೂ ಕನ್ನಡ ಸಂಘ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಬಲ್ನಾಡು ಇವರ ಸಹಕಾರದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇವರ ಸಂಯೋಜನೆಯೊಂದಿಗೆ ಹಾಗೂ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಅವರ ಮಹಾಪೋಷಕತ್ವದಲ್ಲಿ “ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ” ಅಭಿಯಾನದ ಅಂಗವಾಗಿ ನಡೆಯುತ್ತಿರುವ ‘ಗ್ರಾಮ ಸಾಹಿತ್ಯ ಸಂಭ್ರಮ’ ಸರಣಿ–22ರ ಅಂತಿಮ ಕಾರ್ಯಕ್ರಮವು ದಿನಾಂಕ 02 ಅಕ್ಟೋಬರ್ 2026ರಂದು ಬಲ್ನಾಡಿನಲ್ಲಿ ನಡೆಯಲಿದೆ.
ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ನಾರಾಯಣ ಕುಂಬ್ರ ಅವರ ನೇತೃತ್ವದಲ್ಲಿ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದಿಂದ ಆರಂಭಗೊಂಡ ಈ ಸಾಹಿತ್ಯ ಪಯಣವು ಕಳೆದ ಐದು ವರ್ಷಗಳಲ್ಲಿ ತಾಲೂಕಿನ 31 ಗ್ರಾಮಗಳನ್ನು ತಲುಪಿದ್ದು, ಇದೀಗ 32ನೇ ಹಾಗೂ ಅಂತಿಮ ಗ್ರಾಮವಾದ ಬಲ್ನಾಡಿನಲ್ಲಿ ಕಾರ್ಯಕ್ರಮ ನಡೆಯುವ ಮೂಲಕ ಪುತ್ತೂರು ತಾಲೂಕಿನ 32 ಗ್ರಾಮಗಳಲ್ಲೂ ಗ್ರಾಮ ಸಾಹಿತ್ಯ ಸಂಭ್ರಮ ಪೂರ್ಣಗೊಳ್ಳಲಿದೆ.
ದಿನಾಂಕ 02 ಅಕ್ಟೋಬರ್ 2026ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಕೋಟ ಶಿವರಾಮ ಕಾರಂತ ಸಭಾಂಗಣ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು, ಉಜ್ರುಪಾದೆ, ಬಲ್ನಾಡು ಇಲ್ಲಿ ಕಾರ್ಯಕ್ರಮ ನಡೆಯಲಿದೆ. ಗ್ರಾಮ ಸಾಹಿತ್ಯ ಸಂಭ್ರಮವು ಮಕ್ಕಳ ಸಾಹಿತ್ಯ ಸಮ್ಮೇಳನದ ಸ್ವರೂಪದಲ್ಲಿ ನಡೆಯುವ ವಿಶಿಷ್ಟ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳ ಸಾಹಿತ್ಯಿಕ ಹಾಗೂ ಸೃಜನಶೀಲ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಕಳೆದ ಐದು ವರ್ಷಗಳಿಂದ ಗ್ರಾಮ ಗ್ರಾಮದಲ್ಲಿ ನಡೆಸಿರುವ ಈ ಕಾರ್ಯಕ್ರಮಗಳಲ್ಲಿ 6,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ವೇದಿಕೆ ಕಲ್ಪಿಸಲಾಗಿದೆ. ಕವಿಗೋಷ್ಠಿ, ಕಥಾಗೋಷ್ಠಿ, “ನನ್ನ ನೆಚ್ಚಿನ ಶಿಕ್ಷಕ/ಶಿಕ್ಷಕಿ”, “ನನ್ನ ಆಪ್ತಮಿತ್ರ” ಹಾಗೂ ಪ್ರವಾಸ ಕಥನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವರಚಿತ ಬರಹ ಹಾಗೂ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.
ಬಲ್ನಾಡು ಗ್ರಾಮದಲ್ಲಿಯೂ ಸ. ಪ್ರೌಢಶಾಲೆ ಬೆಳಿಯೂರುಕಟ್ಟೆ, ಸ. ಪ. ಪೂ. ಕಾಲೇಜು ಬೆಳಿಯೂರುಕಟ್ಟೆ, ಸ. ಹಿ. ಪ್ರಾ. ಶಾಲೆ ಉಜ್ರುಪಾದೆ ಬಲ್ನಾಡು, ಸ. ಹಿ. ಪ್ರಾ. ಶಾಲೆ ಸಾಜ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಪ.ಪೂ. ಕಾಲೇಜು ಬಲ್ನಾಡು ಹಾಗೂ ಶ್ರೀ ವಾಲ್ಮೀಕಿ ಆಶ್ರಮಶಾಲೆ ಬಲ್ನಾಡು ಸೇರಿದಂತೆ ಆರು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ವಿವಿಧ ಸಾಹಿತ್ಯಿಕ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಶ್ರೀ ವಾಲ್ಮೀಕಿ ಆಶ್ರಮಶಾಲೆ ಈ ಹಿಂದೆ ಬಲ್ನಾಡಿನಲ್ಲಿದ್ದು, ಪ್ರಸ್ತುತ ಉಪ್ಪಿನಂಗಡಿಗೆ ಸ್ಥಳಾಂತರಗೊಂಡಿದ್ದರೂ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಬಾರದು ಎಂಬ ಹಿನ್ನೆಲೆಯಲ್ಲಿ ಈ ಸಾಹಿತ್ಯಿಕ ಚಟುವಟಿಕೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಬಲ್ನಾಡು ಗ್ರಾಮದ ವಿವಿಧ ಕ್ಷೇತ್ರಗಳಲ್ಲಿ ಸೇವೆ, ಸಾಧನೆ ಹಾಗೂ ವಿಶೇಷ ಕೊಡುಗೆ ನೀಡಿರುವ 22 ಸಾಧಕರು ಹಾಗೂ ಕಲಾ/ಸಂಘ ಸಂಸ್ಥೆಗಳಿಗೆ ಗ್ರಾಮ ಸಾಹಿತ್ಯ ಪುರಸ್ಕಾರದ ಮೂಲಕ ಗೌರವ ಸಲ್ಲಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಸಾಧಕರನ್ನು ಪರಿಚಯಿಸುವುದು ಮತ್ತು ಮುಂದಿನ ಪೀಳಿಗೆಗೆ ಅವರ ಬದುಕು ಪ್ರೇರಣೆಯಾಗುವಂತೆ ಮಾಡುವ ಪ್ರಯತ್ನವಾಗಿ ಒಟ್ಟು 189 ಸಾಧಕರನ್ನು ಗೌರವಿಸಿದ ಹೆಗ್ಗಳಿಕೆ ಗ್ರಾಮ ಸಾಹಿತ್ಯ ಸಂಭ್ರಮಕ್ಕೆ ಸಲ್ಲುತ್ತದೆ. 1. ಶ್ರೀ ಸುರೇಶ್ ಬಲ್ನಾಡು – ಕೃಷಿ ಸಂಶೋಧನಾ ಕ್ಷೇತ್ರ, 2. ಶ್ರೀಮತಿ ಸಫಿಯಾ ಬಲ್ನಾಡು – ನಾಟಿ ವೈದ್ಯಕೀಯ ಕ್ಷೇತ್ರ, 3. ಶ್ರೀಮತಿ ಸೀತು – ಹಿರಿಯ ಸೂಲಗಿತ್ತಿ ಹಾಗೂ ನಾಟಿ ವೈದ್ಯಕೀಯ ಕ್ಷೇತ್ರ, 4. ಶ್ರೀ ಪರಮೇಶ್ವರ ಗೌಡ ಕಟ್ಟೆಮನೆ – ದೈವಾರಾಧನಾ ಕ್ಷೇತ್ರ, 5. ಶ್ರೀ ಶರತ್ ಆಳ್ವ ಚನಿಲ – ಕಲೆ ಮತ್ತು ಸಾಹಿತ್ಯ ಕ್ಷೇತ್ರ, 6. ಶ್ರೀ ಗಣೇಶ್ ಪಾಲೆಚ್ಚಾರು – ಯಕ್ಷಗಾನ ಕ್ಷೇತ್ರ, 7. ಶ್ರೀ ಎ. ಅಂಬ್ರೋಸ್ ಡಿ. ಸೋಜ – ಶ್ವಾನ ಸಂರಕ್ಷಣೆ ಹಾಗೂ ಹೈನುಗಾರಿಕೆ ಕ್ಷೇತ್ರ, 8. ಕು.ನಂದಿತಾ ಕೂಟೇಲು – ಯಕ್ಷಗಾನ ಕ್ಷೇತ್ರ, 9. ಶ್ರೀ ಚಿದಾನಂದ ಬೈಲಾಡಿ – ಕಾನೂನು ಸೇವಾ ಸೇವೆ, 10. ಶ್ರೀ ಪ್ರಕಾಶ್ ಕಿಲ್ಲಾಡಿ – ಸಮಾಜ ಸೇವೆ, 11. ಶ್ರೀ ಮಾಧವ ಗೌಡ ಕಾಂತಿಲ – ಸಾಮಾಜಿಕ ಕ್ಷೇತ್ರ, 12. ಶ್ರೀಮತಿ ಶೃತಿ ಬಲ್ನಾಡು – ಯಕ್ಷಗಾನ ಕ್ಷೇತ್ರ, 13. ಶ್ರೀ ಶೀನಪ್ಪ ಗೌಡ – ದೇಶ ಸೇವಾ ಕ್ಷೇತ್ರ, 14. ಶ್ರೀ ಸತೀಶ್ ಗೌಡ – ತರಕಾರಿ ಕೃಷಿ ಕ್ಷೇತ್ರ, 15. ಶ್ರೀ ಪ್ರಸನ್ನ ಭಟ್ ಎನ್. ಬಲ್ನಾಡು – ನಿರ್ಮಾಣ ತಾಂತ್ರಿಕ ಕ್ಷೇತ್ರ, 16. ಶ್ರೀಮತಿ ಪರಮೇಶ್ವರಿ ಬಬ್ಬಿಲಿ – ಸಾಮಾಜಿಕ ಕ್ಷೇತ್ರ, 17. ಶ್ರೀ ಕುಸುಮಾಧರ್ ಎಸ್.ಕೆ. – ಸಹಕಾರ ಕ್ಷೇತ್ರ, 18. ಡಾ. ಅನುಪಮಾ ರವಿ ಡಿ – ವೈದ್ಯಕೀಯ ಕ್ಷೇತ್ರ, 19. ಶ್ರೀ ಸುಂದರ ಸಾರ್ಯ – ಸಾಹಿತ್ಯ ಕ್ಷೇತ್ರ, 20. ಶ್ರೀ ಕುಟ್ಟಿ ನಲಿಕೆ –ಜನಪದ ಕಲಾ ಪರಂಪರೆ, 21. ಸಂಸಾರ ಕಲಾವಿದರು , ಬಲ್ನಾಡು – ಕಲಾತಂಡ, 22. ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.), ಬಲ್ನಾಡು – ಸಂಘ ಸಂಸ್ಥೆ ವಿಭಾಗ. ಸಾಧಕರನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಶ್ರೀ ಚನಿಲ ತಿಮ್ಮಪ್ಪ ಶೆಟ್ಟಿ ಅವರು ಅಭಿನಂದಿಸಿ ಗೌರವಿಸಲಿದ್ದಾರೆ.
ಸಮಾರೋಪ ಭಾಷಣವನ್ನು ಗ್ರೀನ್ ವ್ಯೂ ಶಾಲೆಯ ವಿದ್ಯಾರ್ಥಿ ಮಾಡಲಿದ್ದಾರೆ. “ಕನ್ನಡದಲ್ಲೂ ಐಎಎಸ್ ಬರೆಯಿರಿ” ಅಭಿಯಾನದ ಅಂಗವಾಗಿ, ಪುತ್ತೂರಿನ ಸಹಾಯಕ ಆಯುಕ್ತರಾದ ಕು. ಸ್ಟೆಲ್ಲಾ ವರ್ಗಿಸ್, ಕೆ.ಎ.ಎಸ್. ಅವರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಅವಕಾಶಗಳು ಹಾಗೂ ತಯಾರಿ ಕುರಿತು ಮಾಹಿತಿ ನೀಡಲಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಈ ಅಭಿಯಾನದ ಮೂಲಕ 50,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ತಲುಪಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕು. ಸ್ಟೆಲ್ಲಾ ವರ್ಗಿಸ್, ಕೆ.ಎ.ಎಸ್., ಸಹಾಯಕ ಆಯುಕ್ತರು, ಪುತ್ತೂರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ಕು. ಪೂರ್ಣಶ್ರೀ, ದ್ವಿತೀಯ ಪಿಯುಸಿ, ಮೊರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜು, ಬಲ್ನಾಡು ವಹಿಸಲಿದ್ದು, ಸಭಾಧ್ಯಕ್ಷತೆಯನ್ನು ಪುತ್ತೂರು ಉಮೇಶ್ ನಾಯಕ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಪುತ್ತೂರಿನ ಕಾರ್ಯನಿರ್ವಹಣಾಧಿಕಾರಿ ಶ್ರೀ ನವೀನ್ ಭಂಡಾರಿ, ಬಲ್ನಾಡು ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿ ಡಾ. ದೀಪಕ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಸುರೇಶ್ ಡಿ., ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಸುನೀತಾ, ಬಲ್ನಾಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ದೇವಪ್ಪ ಪಿ.ಆರ್., ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಸಹಜ ರಾಧಾಕೃಷ್ಣ ಆಳ್ವಾ,ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಸಾದ್ ಹಾಗೂ ಶ್ರೀಮತಿ ಶಾಲಿನಿ ಬಿ. ಶೆಟ್ಟಿ,ಯುವ ಕವಯತ್ರಿ ಮಂಜುಳಾ ಮುರಳೀಕೃಷ್ಣ ಹಸಂತಡ್ಕ,ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಅರುಣ್ ನಾಯ್ಕ್, ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ಶ್ರೀ ನಾರಾಯಣ ಕುಂಬ್ರ, ಬಲ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಮೊರಾರ್ಜಿ ದೇಸಾಯಿ ವಸತಿ ಶಾಲಾ -ಕಾಲೇಜು ಪೋಷಕರ ಸಮಿತಿ ಅಧ್ಯಕ್ಷರು ಉಪಸ್ಥಿತರಿರಲಿದ್ದಾರೆ.
ಐದು ವರ್ಷಗಳ ಕಾಲ ಪುತ್ತೂರು ತಾಲೂಕಿನ ಗ್ರಾಮ ಗ್ರಾಮಗಳನ್ನು ಸುತ್ತಿ ಸಾಹಿತ್ಯವನ್ನು ವಿದ್ಯಾರ್ಥಿಗಳ ಬಳಿಗೆ ಕೊಂಡೊಯ್ದ ಈ ವಿಶಿಷ್ಟ ಅಭಿಯಾನವು ಬಲ್ನಾಡಿನಲ್ಲಿ ಸಮಾರೋಪಗೊಳ್ಳುತ್ತಿರುವುದು ಕಾರ್ಯಕ್ರಮದ ಪ್ರಮುಖ ಮೈಲಿಗಲ್ಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು, ಗ್ರಾಮಗಳ ಸಾಧಕರನ್ನು ಗುರುತಿಸಿ ಗೌರವಿಸಿ, ಸಾಹಿತ್ಯವನ್ನು ಗ್ರಾಮೀಣ ಬದುಕಿನೊಂದಿಗೆ ಬೆಸೆದ ಈ ಮಾದರಿ ಕಾರ್ಯಕ್ರಮವು ಕರ್ನಾಟಕದಲ್ಲೇ ಒಂದು ವಿನೂತನ ಸಾಹಿತ್ಯಿಕ ಪ್ರಯೋಗವಾಗಿ ಗುರುತಿಸಿಕೊಳ್ಳುವಂತಾಗಿದೆ.


