ಬೆಂಗಳೂರು : ಬೆಂಗಳೂರಿನ ಮಲತ್ತಹಳ್ಳಿಯ ಕಲಾ ಗ್ರಾಮ ಸಮುಚ್ಚಯ ಭವನದಲ್ಲಿ ‘ಪದ’ ಪ್ರಸ್ತುತ ಪಡಿಸಿದ ‘ಕರ್ನಾಟಕ ಜಾನಪದ ಉತ್ಸವ’ದ ಎರಡನೇ ದಿನದ ಕಾರ್ಯಕ್ರಮವು ದಿನಾಂಕ 20-02-2024ರಂದು ನಡೆಯಿತು. ಸುಮಾ ಆರ್. ಕಂಠಿ ನಿರ್ದೇಶನದ ಜಾನಪದ ನೃತ್ಯ ನಡೆಯಿತು. ಜಾನಪದ ನೃತ್ಯ ಹಳೆಯ ಮೂಲ ಜಾನಪದಗಳ ಮೆಲುಕು ಸೊಗಡು ನೋಡುಗರ ಮನ ತುಂಬಿತು.
ದಿನಾಂಕ 21-02-2024ರಂದು ನಡೆದ ಜಾನಪದ ಉತ್ಸವದಲ್ಲಿ ಮೂಲ ಜಾನಪದ ಗಾಯನವನ್ನು ಪದ ದೇವರಾಜ್ ಶಂಕರ್, ಭಾರತಿಪುರ ಮಂಜುನಾಥ್ ಕೆ.ಎಸ್., ರಾಜೇಶ್ವರಿ ದಿವ್ಯ ಬಸವರಾಜ್, ಜಯಂತಿ ಶ್ರೀನಿವಾಸ್ ಹಾಗೂ ಚನ್ನಯ್ಯ ಗಾಯನವನ್ನು ಪ್ರಸ್ತುತಪಡಿಸಿದರು. ಸಮಾರೋಪ ನುಡಿಯನ್ನು ಡಾ. ಅಪ್ಪುಗೆರೆ ತಿಮ್ಮರಾಜು ಮಾತನಾಡಿ “ಪ್ರತಿ ಜಿಲ್ಲೆಗೊಬ್ಬರು ಜನಪದಗೋಸ್ಕರವಾಗಿ ದುಡಿದಂತಹ ಮಹನೀಯರಿದ್ದಾರೆ. ಅವರೆಲ್ಲ ಈಗ ಕಣ್ಮರೆಯಾಗಿದ್ದಾರೆ. ಸೋಬಾನೆ ಚಿಕ್ಕಮ್ಮನಂತವರು ಇಂದು ನಮ್ಮ ಜೊತೆ ಇಲ್ಲ. ಅನೇಕ ಜನರು ಜನಮನಗಳಿಂದ ದೂರವಾದ ಜನಪದ ಆಗಿದ್ದಾರೆ. ಸರ್ಕಾರಗಳು ಮಾಡಬೇಕಾದ ಕೆಲಸವನ್ನು ‘ಪದ’ ದೇವರಾಜ್ ಮಾಡುತ್ತಿದ್ದಾರೆ. ಸರ್ಕಾರಗಳು ಈಗಾಗಲೇ ಜನಪದಕ್ಕೆ ನೀಡಬೇಕಾದ ಸೌಲತ್ತುಗಳನ್ನು ನೀಡದೆ ವಂಚಿಸಿದೆ. ಜಿಲ್ಲೆಗಳಲ್ಲಿ ಜನಪದ ಉತ್ಸವಗಳಾಗಬೇಕು, ಜನಪದ ಪ್ರಾಧಿಕಾರವಾಗಬೇಕು, ಜನಪದರು ಅಧ್ಯಯನಶೀಲರಾಗಬೇಕು, ನಾಡಿನಿಂದ ನಾಡಿಗೆ ಜಿಲ್ಲೆಯಿಂದ ಜಿಲ್ಲೆಗೆ ಜಾನಪದದ ಸೊಗಡು ಬದಲಾಗುತ್ತದೆ, ಬದಲಾದ ಸೊಗಡನ್ನು ಒಂದುಗೂಡಿಸಬೇಕು ಆ ಕಾರ್ಯವಾಗಬೇಕಾದರೆ ಮೊದಲು ಅಕಾಡೆಮಿ ಪ್ರಾಧಿಕಾರಗಳು ರಚನೆಯಾಗಬೇಕು, ಅದಕ್ಕೆ ಅತ್ಯುತ್ತಮರನ್ನು ಅಧ್ಯಕ್ಷರನ್ನಾಗಿ ಸದಸ್ಯರನ್ನಾಗಿ ನೇಮಿಸಬೇಕು” ಎಂದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಮಾಜಿ ಸದಸ್ಯ ಆನಂದ ಮಾದಲಗೆರೆ ಮಾತನಾಡಿ “ಜನಪದ ನಮ್ಮ ಉಸಿರು. ಅದರ ಉಳಿವಿಗೆ ನಾವೆಲ್ಲರೂ ಸಿದ್ಧ. ನಮ್ಮ ಕ್ಷೇತ್ರಗಳಲ್ಲಿ ಅನೇಕರು ಪ್ರಯೋಗಶೀಲರಿದ್ದಾರೆ. ಅಂತಹವರನ್ನು ಹುಡುಕಿ ವೇದಿಕೆ ಕಲ್ಪಿಸಬೇಕು. ಈ ಕಾರ್ಯಕ್ರಮವು ಬಹಳ ಅದ್ಭುತವಾಗಿ ಮೂಡಿ ಬರಲು ಶ್ರಮಿಸಿದ ‘ಪದ’ ದೇವರಾಜ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದರು. ಕಾರ್ಯಕ್ರಮದಲ್ಲಿ ಕಲಾಗ್ರಾಮ ವ್ಯವಸ್ಥಾಪಕರಾದ ನರೇಂದ್ರಬಾಬು ಎಸ್. ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ. ಅಪ್ಪುಗೆರೆ ತಿಮ್ಮರಾಜು ಅವರಿಗೆ ಪದ ಗೌರವ ನೀಡಲಾಯಿತು.