ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಸಹಯೋಗದಲ್ಲಿ ಹೋಟೆಲ್ ಮೋತಿಮಹಲ್ ಸಭಾಂಗಣದಲ್ಲಿ ದಿನಾಂಕ 03-08-2023ರಂದು ‘ಭಾರತೀಯ ಭಾಷಾ ಲಿಪಿ’ ಬಗ್ಗೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಷಾ ತಜ್ಞ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸಕಾರ ಡಾ. ಕೆ.ಪಿ. ರಾವ್ ಅವರು ಮಾತನಾಡುತ್ತಾ “ಪ್ರತಿಯೊಬ್ಬರೂ ತಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿ ಅದರ ಉಳಿವಿಗೆ ಪ್ರಯತ್ನಿಸಬೇಕು. ಇಂದು ಅದೆಷ್ಟೋ ಭಾಷೆಗಳು ನಶಿಸಿ ಹೋಗುತ್ತಿರುವುದು ಖೇದಕರ. ಪ್ರತಿಯೊಂದು ಭಾಷೆಯ ಬೆಳವಣಿಗೆಗೆ ನಮ್ಮಿಂದಾದಷ್ಟು ಕೊಡುಗೆ ನೀಡಬೇಕು. ವಿದ್ಯಾರ್ಥಿಗಳು ಮಾತೃ ಭಾಷೆಯ ಕುರಿತು ಅಭಿಮಾನ ಮತ್ತು ಗೌರವ ಹೆಚ್ಚಿಸಿ, ಭಾಷಾಭಿಮಾನ ಬೆಳೆಸಿಕೊಳ್ಳಬೇಕು.” ಎಂದು ಹೇಳಿದರು.
ರೋಟರಿ ಅಧ್ಯಕ್ಷ ಕಿಶನ್ ಕುಮಾರ್ ಮಾತನಾಡಿ “ಸಿಂಧೂ ಲಿಪಿಯನ್ನು ಕಂಪ್ಯೂಟರ್ ಬಳಸಿ ಮುದ್ರಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ ವಹಿಸಿದ್ದವರಲ್ಲಿ ಡಾ.ಕೆ.ಪಿ. ರಾವ್ ಅಗ್ರಗಣ್ಯರು. ಉಚ್ಛಾರಣಾತ್ಮಕ ತರ್ಕ ಬಳಸಿದ ಮೊದಲ ಕೀಬೋರ್ಡ್ ವಿನ್ಯಾಸವನ್ನು ಸೃಷ್ಟಿಸಿ ಇದೇ ತರ್ಕ ಬಳಸಿ ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಕೆ ಇವರ ಸಾಧನೆಯ ಗರಿ” ಎ೦ದರು.
ರೋಟರಿ ವತಿಯಿಂದ ಡಾ. ಕೆ.ಪಿ. ರಾವ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ಮಾಜಿ ಅಧ್ಯಕ್ಷ ಯತೀಶ್ ಬೈಕಂಪಾಡಿ, ಶ್ರೀಕಾಂತ್ ಕಾಮತ್, ಡಾ.ವಿದ್ಯಾಧರ ಶೆಟ್ಟಿ, ಕಾರ್ಯದರ್ಶಿ ಡಾ.ಸಿದ್ಧಾರ್ಥ ಶೆಟ್ಟಿ, ಉಪಾಧ್ಯಕ್ಷ ಪುರಾನ್ ಚಂದ್ ಅತ್ತಾವರ, ನಿಕಟಪೂರ್ವ ಅಧ್ಯಕ್ಷ ಆರ್.ಕೆ. ಭಟ್ ಮತ್ತಿತರರು ಉಪಸ್ಥಿತರಿದ್ದರು. ಡಾ.ನರೇಂದ್ರ ಕಾಮತ್ ವಂದಿಸಿದರು.