ಮಂಗಳೂರು : ಕಲಾಭಿ ಥಿಯೇಟರ್ ಮಂಗಳೂರು, ಕೆನರಾ ಕಲ್ಚರಲ್ ಅಕಾಡೆಮಿಯ ಸಹಕಾರದೊಂದಿಗೆ 9ರಿಂದ 17 ವರ್ಷದ ಮಕ್ಕಳಿಗೆ ಹತ್ತು ದಿನಗಳ ವೃತ್ತಿಪರ ರಂಗಭೂಮಿ ಕಾರ್ಯಾಗಾರವು ದಿನಾಂಕ 11-04-2024ರಿಂದ 21-04-2024ರವರೆಗೆ ಕೊಡಿಯಾಲ್ ಬೈಲಿನ ಕೆನರಾ ಇಂಗ್ಲೀಷ್ ಹೈಯರ್ ಪ್ರೈಮರಿ ಶಾಲೆಯಲ್ಲಿ ‘ಅರಳು 2024’ ನಡೆಯುತ್ತಿದ್ದು, ಈ ಮಕ್ಕಳ ಶಿಬಿರದ ಕೊನೆಯ ದಿನ ‘ಮಕ್ಕಳ ನಾಟಕೋತ್ಸವ’ದಲ್ಲಿ ಅದ್ಭುತವಾದ ಎರಡು ನಾಟಕಗಳು ಮೂಡಿಬರಲಿವೆ.
ಕೆ. ರಾಮಯ್ಯ ರಚಿಸಿರುವ ‘ಹಕ್ಕಿಹಾಡು’ ಎಂಬ ನಾಟಕವು ರಾಜು ಮಣಿಪಾಲ್ ಅವರ ನಿರ್ದೇಶನದಲ್ಲಿ, ಡಾ ಶ್ರೀಪಾದ್ ಭಟ್ ಸಂಗೀತದಲ್ಲಿ ಹಾಗೂ ಪ್ರಶಾಂತ್ ಉದ್ಯಾವರ ಅವರ ನೃತ್ಯ ಸಂಯೋಜನೆಯಲ್ಲಿ ಮೂಡಿಬರಲಿದ್ದು, ಮತ್ತೊಂದು ನಾಟಕವು ಲೀಲಾ ಗರಡಿ ಅವರು ರಚಿಸಿರುವ ‘ಕಪಟ ಸನ್ಯಾಸಿ ಮಾರ್ಜಾಲ ಮತ್ತು ಮೂಷಕ ಕುಲ’ ಆಗಿದ್ದು, ‘ಪ್ರಸಿದ್ಧ ಸನ್ಯಾಸಿ ವೇಷ ಧರಿಸಿದ ಬೆಕ್ಕಿನ ಕಥೆ‘ಯ ಮೇಲೆ ಆಧಾರಿತವಾಗಿದೆ.
ಈ ನಾಟಕವು ರಮೇಶ್ ಕೆ. ಬೆಣಕಲ್ ಅವರ ನಿರ್ದೇಶನದಲ್ಲಿ ಹಾಗೂ ಮನೋಜ್, ವೀಕ್ಷಣ್ ಮತ್ತು ಭುವನ್ ಮಣಿಪಾಲ್ ಅವರ ಸಂಗೀತ ಸಾರಥ್ಯದಲ್ಲಿ ಮೂಡಿಬರಲಿದೆ. ಈ ಎರಡೂ ನಾಟಕಗಳಲ್ಲಿ ಶಿಬಿರದ ಮಕ್ಕಳು ಕಲಾವಿದರಾಗಿ, ದಿನಾಂಕ 21-04-2024ರಂದು ಕೆನರಾ ಪದವಿ ಪೂರ್ವ ಕಾಲೇಜು ಮಂಗಳೂರಿನ, ಬಯಲು ರಂಗಮಂದಿರದಲ್ಲಿ ನಟಿಸಿ ನಿಮ್ಮೆಲ್ಲರನ್ನೂ ರಂಜಿಸಲು ಸಜ್ಜಾಗಿರುತ್ತಾರೆ.