ಮಂಗಳೂರು : ಮನಸ್ವಿನಿ ಮಹಿಳಾ ವೇದಿಕೆಯ ‘ಮನೆ ಮನೆ ಸಾಹಿತ್ಯ’ ಅಭಿಯಾನದ ಎರಡನೆಯ ಕಾರ್ಯಕ್ರಮವು ದಿನಾಂಕ 05 ಜುಲೈ 2026ರಂದು ಹಿರಿಯ ಸಾಹಿತಿ ಲಕ್ಷ್ಮೀ ವಿ. ಭಟ್ ಮಂಜೇಶ್ವರ ಇವರ ಮುಡಿಪು ಇಲ್ಲಿರುವ ‘ಸ್ವಸ್ತಿ ಶ್ರೀ’ ನಿವಾಸದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರಾಗಿ ಭಾಗವಹಿಸಿ ‘ಜೀವನದಲ್ಲಿ ಸವಾಲುಗಳನ್ನು ಎದುರಿಸಿ ಮುನ್ನಡೆಯುವುದು ಹೇಗೆ’ ಎನ್ನುವುದರ ಕುರಿತು ಮೌಲಿಕ ಸಂದೇಶವನ್ನು ನೀಡಿದ ಬೆಸೆಂಟ್ ಮಹಿಳಾ ಕಾಲೇಜು ಮಂಗಳೂರು ಇಲ್ಲಿನ ವಿಶ್ರಾಂತ ಪ್ರಾಧ್ಯಾಪಕರು ಡಾ. ಮೀನಾಕ್ಷಿ ರಾಮಚಂದ್ರ “ಜೀವನದಲ್ಲಿ ಸವಾಲುಗಳನ್ನು ಕಂಡು ಹಿಂಜರಿಯಬಾರದು. ಒತ್ತಡ, ಸಮಸ್ಯೆಗಳು ಬದುಕಿನ ಅವಿಭಾಜ್ಯ ಅಂಗ. ಸಮಸ್ಯೆಗಳೇ ಬರಬಾರದು ಎನ್ನುವುದಕ್ಕಿಂತ ಸಮಸ್ಯೆಗಳನ್ನೇ ಸವಾಲುಗಳನ್ನಾಗಿ ಸ್ವೀಕರಿಸಿ ಸಂಗಾತಿಯನ್ನಾಗಿ ಪ್ರೀತಿಸಬೇಕು” ಎಂದು ಮಹತ್ವದ ಸಲಹೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ, ಕಾಸರಗೋಡಿನ ವಿಶ್ರಾಂತ ವಿದ್ಯಾಧಿಕಾರಿ ಲಲಿತಾಲಕ್ಷ್ಮೀ ಕುಳಮರ್ವ ಇವರು ಶುಭಾಶಯ ಗೀತೆಯ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿ, ತಾವು ಬೆಳೆದು ಮತ್ತೊಬ್ಬರನ್ನು ಬೆಳೆಸುವ ಮನಸ್ವಿನಿ ಮಹಿಳಾ ವೇದ ಸಾಹಿತ್ಯ ಕೈಂಕರ್ಯವನ್ನು ಮುಕ್ತ ಮನಸ್ಸಿನಿಂದ ಕೊಂಡಾಡಿದರು.

‘ತಿಳಿ ನೀಲ ಗಗನದಲ್ಲಿ ಒಂದು ಸುತ್ತು’ ವಿಶೇಷ ಉಪನ್ಯಾಸದ ಮೂಲಕ ಭೂಮಿ ಮತ್ತು ಗಗನದ ಮಧ್ಯೆ ಇರುವ ಗುರುತ್ವಾಕರ್ಷಣ ಇಲ್ಲದ ವಲಯದಲ್ಲಿ ತೇಲಾಡುವ ಉಪಗ್ರಹಗಳ ಕುರಿತು ಅತ್ಯಂತ ರೋಚಕ ಮತ್ತು ಕುತೂಹಲಕಾರಿ ಸಂಗತಿಗಳನ್ನು ನಿಖರವಾದ ಅಂಕಿ ಅಂಶಗಳ ಮೂಲಕ ವಿಶ್ರಾಂತ ಅಧ್ಯಾಪಿಕೆ ಜಯಲಕ್ಷ್ಮಿ ಕಾರಂತ ಇವರು ಅತಿಥಿ ಅಭ್ಯಾಗತರಾಗಿ ವಿಸ್ತ್ರತವಾಗಿ ಉಲ್ಲೇಖಿಸಿದರು. ಇದೇ ಸಂದರ್ಭದಲ್ಲಿ ಲಲಿತಾಲಕ್ಷ್ಮೀ ಕುಳಮರ್ವ, ಡಾ. ಮೀನಾಕ್ಷಿ ರಾಮಚಂದ್ರ, ಜಯಲಕ್ಷ್ಮಿ ಕಾರಂತ ಹಾಗೂ ರತ್ನಾವತಿ ಜೆ. ಬೈಕಾಡಿ ಇವರುಗಳನ್ನು ಅಭಿಮಾನ ಪೂರ್ವಕವಾಗಿ ಗೌರವಿಸಲಾಯಿತು.

ಹಿರಿಯ ಸಾಹಿತಿ ಲಕ್ಷ್ಮೀ ವಿ. ಭಟ್ ಮಂಜೇಶ್ವರ ಇವರು ಸ್ವಾಗತಿಸಿದರು. ಶಿಕ್ಷಕಿ ಸುಶೀಲಾ ಪದ್ಯಾಣ ಪ್ರಸ್ತಾವನೆಗೈದರು. ಕುಮಾರಿ ಧನ್ಯಶ್ರೀ ಮೂಳೂರು ಪ್ರಾರ್ಥನೆಗೈದರು. ಕವಯಿತ್ರಿ ಪ್ರಮೀಳಾ ಚುಳ್ಳಿಕಾನ ಧನ್ಯವಾದ ಸಮರ್ಪಿಸಿದರು. ಕವಯಿತ್ರಿ ಜ್ಯೋತ್ಸ್ನಾ ಕಡಂದೇಲು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಹಿರಿಯ ಸಾಹಿತಿ, ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಯಕ್ಷಗಾನ ಕಲಾವಿದೆಯೂ ಆಗಿರುವ ರತ್ನಾ ಕೆ. ಭಟ್ ತಲಂಜೇರಿ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಹಿರಿಯ ಸಾಹಿತಿ ವಿ.ಬಿ. ಕುಳಮರ್ವ, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಸೀತಾಲಕ್ಷ್ಮಿ ವರ್ಮ, ಪ್ರಮೀಳಾ ಚುಳ್ಳಿಕಾನ, ಸುಶೀಲಾ ಪದ್ಯಾಣ, ಜ್ಯೋತ್ಸ್ನಾ ಕಡಂದೇಲು, ನಿರ್ಮಲ ಶೇಷಪ್ಪ ಖಂಡಿಗೆ, ಪ್ರಭಾವತಿ ಕೆದಿಲಾಯ, ಕುಮಾರಿ ಧನ್ಯಶ್ರೀ ಮೂಳೂರು, ಪಂಕಜಾ ರಾಮ್ ಭಟ್, ಲಕ್ಷ್ಮೀ ವಿ. ಭಟ್ ಮಂಜೇಶ್ವರ ಇವರುಗಳು ಕವಿಗಳಾಗಿ ಭಾಗವಹಿಸಿ ಸ್ವ-ರಚಿತ ಕವನ ವಾಚಿಸಿದರು. ಹಿರಿಯ ಸಾಹಿತಿ ರತ್ನಾವತಿ ಜೆ. ಬೈಕಾಡಿ ಭಾವಗಾನಗೈದರು.
ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲಾ ಕವಿಗಳ ರಚನೆಗಳ ಒಳತಿರುಳನ್ನು ಬಹಳ ಸಂಕ್ಷಿಪ್ತವಾಗಿ ವಿಶ್ಲೇಷಣೆಗೈದ ಕವಿಗೋಷ್ಠಿ ಅಧ್ಯಕ್ಷರಾದ ರತ್ನಾ ಕೆ. ಭಟ್ ಸಾಹಿತ್ಯದಲ್ಲಿ ಮಹಿಳೆ ತೊಡಗಿಸಿಕೊಂಡು ಸ್ವಸ್ಥ ಸಮಾಜವನ್ನು ನಿರ್ಮಿಸುವಲ್ಲಿ ಯಾವ ರೀತಿ ಸೇವೆ ಸಲ್ಲಿಸಬಹುದು ಎನ್ನುವುದರ ಕುರಿತು ಅರ್ಥಪೂರ್ಣ ಸಲಹೆಯನ್ನು ನೀಡಿದರು.
