ತೀರ್ಥಹಳ್ಳಿ : ದಸರಾ ಉತ್ಸವ ಸಮಿತಿ ಆಶ್ರಯದಲ್ಲಿ ದಿನಾಂಕ 10 ಅಕ್ಟೋಬರ್ 2024ರಂದು ತೀರ್ಥಹಳ್ಳಿಯಲ್ಲಿ ಜರಗಿದ ಅಂತರ ಜಿಲ್ಲಾ ದಸರಾ ಕವಿಗೋಷ್ಟಿಯಲ್ಲಿ ತೀರ್ಥಹಳ್ಳಿಯ ಶಿಕ್ಷಕಿ ಜಿ.ಎಸ್. ನಾಗರತ್ನ ನಿಲ್ಸಿಕಲ್ ಅವರು ಪ್ರಥಮ ಸ್ಥಾನದೊಂದಿಗೆ ರೂ.5,000/- ನಗದು ಬಹುಮಾನ ಪಡೆದರು. ದ್ವಿತೀಯ ಸ್ಥಾನವನ್ನು ಚಿಕ್ಕಮಗಳೂರಿನ ಪ್ರವೀಣ್ ಕುಮಾರ್, ತೃತೀಯ ಸ್ಥಾನವನ್ನು ತೀರ್ಥಹಳ್ಳಿಯ ಡಾ. ಮುರುಳೀಧರ ಕಿರಣಕೆರೆ ಹಾಗೂ ನಾಲ್ಕನೇ ಬಹುಮಾನವನ್ನು ಭದ್ರಾವತಿಯ ಪದ್ಮಶ್ರೀ ಗೋವಿಂದರಾಜ್ ತಮ್ಮದಾಗಿಸಿಕೊಂಡರು. ಎಲ್ಲಾ ನಾಲ್ವರು ವಿಜೇತರಿಗೂ ನಗದು ಬಹುಮಾನ ಹಾಗೂ ಫಲಕವನ್ನು ನೀಡಲಾಯಿತು.
ಹಿರಿಯ ಸಾಹಿತಿ ಹಾಗೂ ಯಕ್ಷಗಾನ ತಾಳಮದ್ದಲೆ ಕಲಾವಿದ ನಿಟ್ಟೂರು ಶಾಂತರಾಮ ಪ್ರಭು ಹಾಗೂ ದಸರಾ ಸಾಂಸ್ಕೃತಿಕ ಸಮಿತಿಯ ಸದಸ್ಯರು ಬಹುಮಾನಗಳನ್ನು ವಿತರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ದಸರಾ ಉತ್ಸವ ಸಮಿತಿ ಸಂಚಾಲಕ ಸಂದೇಶ್ ಜವಳಿ ಮುಂತಾದವರು ಪಾಲ್ಗೊಂಡಿದ್ದರು. ಹಿರಿಯ ಸಾಹಿತಿ ನಿಟ್ಟೂರು ಶಾಂತರಾಮ ಪ್ರಭು ಕವಿಗೋಷ್ಟಿಯನ್ನು ಉದ್ಘಾಟಿಸಿದರು.
ದಸರಾ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾನ್ ರಾಮಣ್ಣ, ಸಮಿತಿಯ ಜ್ಯೋತಿ ಮೋಹನ್, ವಿಭಾ ಪ್ರಕಾಶ್, ನಯನ ಜಯಪ್ರಕಾಶ್ ಶೆಟ್ಟಿ, ಜ್ಯೋತಿ ದಿಲೀಪ್, ಅನಸೂಯ ಶೆಟ್ಟಿ ಮುಂತಾದವರು ಈ ಅಂತರ ಜಿಲ್ಲಾ ಕವಿಗೋಷ್ಟಿಯನ್ನು ಉತ್ತಮವಾಗಿ ನಿರ್ವಹಿಸಿ ಯಶಸ್ವಿಯಾಗಿ ಸಮಾಪನಗೊಳ್ಳುವಲ್ಲಿ ಶ್ರಮಿಸಿದರು. ಕವಿಗೋಷ್ಟಿಯ ತೀರ್ಪುಗಾರರಾಗಿ ಸಾಹಿತಿಗಳಾದ ಶ್ರೀಮತಿ ಉಮಾದೇವಿ ಉರಾಳ್, ನವೀನ್ ಕುಮಾರ್ ಮತ್ತು ಬಿ. ಗಣಪತಿ ಅವರು ಕಾರ್ಯನಿರ್ವಹಿಸಿದರು. ಮಂಗಳೂರು, ಉಡುಪಿ, ಮಂಜೇಶ್ವರ ಸೇರಿದಂತೆ ಅನೇಕ ಜಿಲ್ಲೆಗಳಿಂದ ಕವಿಗಳು ಈ ಗೋಷ್ಟಿಯಲ್ಲಿ ಭಾಗವಹಿಸಿದ್ದರು.