ಮಂಗಳೂರು : ಶ್ರೀ ನಾಟ್ಯಾoಜಲಿ ಕಲಾ ಅಕಾಡೆಮಿ ಸುರತ್ಕಲ್ ಸಂಸ್ಥೆಯ ‘ನಾಟ್ಯಾಂಜಲಿ ಕಲೋತ್ಸವ’ವು ಮಂಗಳೂರು ಪುರಭವನದಲ್ಲಿ ದಿನಾಂಕ 16-12-2023 ಮತ್ತು 17-12-2023ರಂದು ಎರಡು ದಿನಗಳ ಕಾಲ ಸಂಭ್ರಮಿಸಿತು. ಹಿರಿಯ ನೃತ್ಯ ಗುರು ಉಳ್ಳಾಲ ಶ್ರೀ ಮೋಹನ್ ಕುಮಾರ್ ಇವರು ಎರಡೂ ದಿನಗಳ ಕಲೋತ್ಸವವನ್ನು ದೇವತಾ ಜ್ಯೋತಿ ಪ್ರಜ್ವಲನ ಮಾಡಿ ಉದ್ಘಾಟಿಸಿದರು.
ಮೊದಲ ದಿನ ಹಿರಿಯ ಚಿತ್ರಕಲಾವಿದ ದಿ. ಪಿ. ಪುರುಷೋತ್ತಮ ಕಾರಂತರ ಸ್ಮರಣಾರ್ಥ ‘ವರ್ಣ ಕಾವ್ಯ ನರ್ತನ’ ಎಂಬ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರರು, ಚಿತ್ರ ಕಲಾವಿದ ಬಿ. ಗಣೇಶ್ ಸೋಮಯಾಜಿ ಉಪಸ್ಥಿತರಿದ್ದರು. ಚಿತ್ರ ಕಲಾವಿದೆ ಶ್ರೀಮತಿ ಕೆ. ಮನೋರಂಜನಿ ರಾವ್ ಇವರಿಗೆ ‘ಪುರುಷೋತ್ತಮ ವರ್ಣಾಂಜಲಿ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿ. ಸುಮಂಗಲ ರತ್ನಾಕರ್ ರಾವ್, ವಿ. ವಿದ್ಯಾಶ್ರೀ ರಾಧಾಕೃಷ್ಣ, ಡಾ. ಶ್ರೀವಿದ್ಯಾ ಮುರಳೀಧರ್, ವಿದ್ವಾನ್ ಸೂರ್ಯ ಎನ್. ರಾವ್ ಇವರುಗಳ ಏಕವ್ಯಕ್ತಿ ಭರತನಾಟ್ಯ ಹಾಗೂ ಶ್ರೀ ನಾಟ್ಯಾoಜಲಿ ಕಲಾ ಅಕಾಡೆಮಿ, ಕಲಾವಟಿಕ ಡಾನ್ಸ್ ಅಕಾಡೆಮಿ ಬೆಂಗಳೂರು, ನೃತ್ಯ ಸುಧಾ ಸಂಸ್ಥೆ ಹಾಗೂ ನಾಟ್ಯಾರಾಧನಾ ಕಲಾಕೇಂದ್ರ ತಂಡದವರು ಸಮೂಹ ಭರತನಾಟ್ಯ ಕಾರ್ಯಕ್ರಮವನ್ನು ನೀಡಿದರು.
ಎರಡನೇ ದಿನದ ಕಾರ್ಯಕ್ರಮದಲ್ಲಿ ಅಮೇರಿಕಾದ ಕಾವೇರಿ ನಾಟ್ಯ ಯೋಗ ಸಂಸ್ಥೆಯವರಿಂದ ಡಾ. ಶ್ರೀಧರ್ ಅಕ್ಕಿಹೆಬ್ಬಾಳು ಇವರ ನಿರ್ದೇಶನದಲ್ಲಿ ಕಲಾವಿದೆಯರಾದ ಅನುಸೂಯ ಪೂಂಜಾ, ಅನುರಾಧ ರಾಮಚಂದ್ರ, ಶ್ರೀಲಕ್ಷ್ಮಿ ನಾಗರಾಜ್ ಹಾಗೂ ದಿವ್ಯ ವಾರಿಯರ್ ಇವರಿಂದ ‘ಶತಕ ತ್ರಯ’ ಎಂಬ ನೃತ್ಯವು ಸೊಗಸಾಗಿ ಮೂಡಿ ಬಂದಿತು. ನಾಗಭೂಷಣ ಕಶ್ಯಪ್ ನಿರೂಪಿಸಿ, ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ಕೆ. ಚಂದ್ರಶೇಖರ ನಾವಡ ಸ್ವಾಗತಿಸಿ, ಧನ್ಯವಾದವನ್ನು ನೀಡಿದರು.