ಮಂಗಳೂರು : ಸಂತ ಅಲೋಶಿಯಸ್ ಕಾಲೇಜು ಕೊಂಕಣಿ ಸಂಸ್ಥೆಯ ನೇತೃತ್ವದಲ್ಲಿ ಸಾಹಿತ್ಯ ಅಕಾಡೆಮಿ, ನವದಿಲ್ಲಿ ವಿಶ್ವ ಕೊಂಕಣಿ ಕೇಂದ್ರ ಶಕ್ತಿನಗರ, ಮೈಕಲ್ ಡಿ’ಸೋಜಾ ವಿಶನ್ ಕೊಂಕಣಿ, ರಾಕ್ಣೊ ವಾರಪತ್ರಿಕೆಯ ಸಹಯೋಗದಲ್ಲಿ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದಿನಾಂಕ 21-11-2023ರಂದು ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕೊಂಕಣಿಯ ಹಿರಿಯ ಸಾಹಿತಿ ಎಡ್ವಿನ್ ಜೆ.ಎಫ್. ಡಿ’ಸೋಜಾರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಕಾಲೇಜು ಪ್ರಾಂಶುಪಾಲ ವಂ| ಡಾ| ಪ್ರವೀಣ್ ಮಾರ್ಟಿಸ್ ಇವರು ಮಾತನಾಡಿ ‘ಕೊಂಕಣಿ ಸಾಹಿತ್ಯಕ್ಕೆ 33ಕ್ಕಿಂತಲೂ ಹೆಚ್ಚು ಕಾದಂಬರಿ, ನೂರಕ್ಕಿಂತ ಹೆಚ್ಚು ಸಣ್ಣಕಥೆಗಳನ್ನು ನೀಡಿರುವ ಎಡ್ವಿನ್ ಡಿ’ಸೋಜಾರ ಕೊಡುಗೆಯನ್ನು ಕೊಂಕಣಿಗರು ಸ್ಮರಿಸುವುದರೊಂದಿಗೆ ಅವರ ಅಪಾರ ಸಾಹಿತ್ಯವನ್ನು ಓದುವ ಮೂಲಕ ಎಡ್ವಿನ್ ಡಿ’ಸೋಜಾ ಅವರನ್ನು ಎಂದೆಂದೂ ಜೀವಂತವಾಗಿರಿಸೋಣ’ ಎಂದು ಹೇಳಿದರು.
ಎಡ್ಡಿನ್ ಡಿ’ಸೋಜಾ ಅವರ ಸಾಹಿತ್ಯದ ಅಧ್ಯಯನದ ಮೂಲಕ ಅವರನ್ನು ಹೇಗೆ ಜೀವಂತವಾಗಿರಿಸಬಹುದು ಎನ್ನುವ ಬಗ್ಗೆ ಕೊಂಕಣಿ ಸಾಹಿತಿ ಕಿಶೂ ಬಾರ್ಕೂರ್ ಮತ್ತು ಎಡ್ವಿನ್ ಡಿ’ಸೋಜಾ ಇವರ ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕೃತಿ ‘ಕಾಳೆಂ ಭಾಂಗಾರ್’ ಮತ್ತು ‘ಹಾಂವ್ ಜಿಯೆತಾಂ’ ಬಗ್ಗೆ ಗೋವಾ ವಿಶ್ವವಿದ್ಯಾನಿಲಯದ ಕೊಂಕಣಿ ವಿಭಾಗದ ವಿಶ್ರಾಂತ ಮುಖ್ಯಸ್ಥೆ ಡಾ. ಚಂದ್ರಲೇಖಾ ಡಿ’ಸೋಜಾ ಮಾತನಾಡಿದರು.
ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ ಮೆಲ್ವಿನ್ ರೊಡ್ರಿಗಸ್, ವಿಶ್ವ ಕೊಂಕಣಿ ಕೇಂದ್ರದ ಡಾ. ಬಿ. ದೇವದಾಸ್ ಪೈ, ಪ್ರಮುಖರಾದ ಸುನಿಲ್ ಕುಂದರ್, ಡಾ. ಆಲ್ವಿನ್ ಡೆಸಾ, ರೊನಾಲ್ಡ್ ಸಿಕ್ವೇರಾ ಮೊದಲಾದವರು ಉಪಸ್ಥಿತರಿದ್ದರು. ಕೊಂಕಣಿ ಸಂಸ್ಥೆಯ ನಿರ್ದೇಶಕ ವಂ| ಡಾ. ಮೆಲ್ವಿನ್ ಪಿಂಟೊ ವಂದಿಸಿ, ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ ಕಾರ್ಯಕ್ರಮ ನಿರೂಪಿಸಿದರು.