ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ ಮತ್ತು ಕನಕದಾಸ ಸಂಶೋಧನಾ ಕೇಂದ್ರ ಮತ್ತು ಶ್ರೀ ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜಿನ ಸಹಯೋಗದೊಂದಿಗೆ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಸಭಾಂಗಣದಲ್ಲಿ ದಿನಾಂಕ : 14-06-2023ರಂದು ನಡೆದ ಒಂದು ದಿನದ ‘ಕನಕ ಕೀರ್ತನ ಗಾಯನ ಕಮ್ಮಟ’ವನ್ನು ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಇವರು ಉದ್ಘಾಟಿಸಿ ಮಾತನಾಡುತ್ತಾ “ತಮಿಳುನಾಡಿನಿಂದ ಮೊದಲ್ಗೊಂಡು ಕನ್ನಡ ನಾಡಿನ ಮೂಲಕ ಉತ್ತರ ಭಾರತ ಕಡೆಗೆ ವ್ಯಾಪಿಸಿದ ಭಕ್ತಿಲತೆ ಭಾರತದ ಬದುಕನ್ನು ಪೋಷಿಸಿದೆ. ಈ ಭಕ್ತಿ ಪರಂಪರೆಯ ವಿಶಿಷ್ಟ ಕವಿ ಕನಕ. ತನ್ನ ಆಧ್ಯಾತ್ಮಿಕ ಮತ್ತು ಸಾಮಾಜಿಕ ರಚನೆಗಳಲ್ಲಿ ಕನಕದಾಸರು ಚಿಕಿತ್ಸಕ ಗುಣದ ಕವಿಯಾಗಿ ಮೂಡಿಬಂದಿದ್ದಾರೆ. ವಿಜಯನಗರ ಸಾಮ್ರಾಜ್ಯದ ಪಾಳೆಯಗಾರ, ಶುದ್ಧಾಂಗ ಸೈನಿಕನಾಗಿದ್ದ ಕನಕ, ತಿರುಪತಿ ತಿಮ್ಮಪ್ಪ, ವಿಶಿಷ್ಟಾದ್ವೈತ ಮತ್ತು ದ್ವೈತ ಸಿದ್ಧಾಂತದ ಮೂಲಕ ಕಂಡುಕೊಂಡ ದಿವ್ಯಾನುಭವ ಅವರ ಕೀರ್ತನೆಗಳಲ್ಲಿ ಅಭಿವ್ಯಕ್ತಗೊಂಡಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಮಕುಂಜೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ರಾಧಾಕೃಷ್ಣ ಕೆ.ಎಸ್. ಕುವೆಚ್ಚಾರು ಅಧ್ಯಕ್ಷತೆ ವಹಿಸಿದ್ದರು. ಆಶಯ ಭಾಷಣ ಮಾಡಿದ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಅವರು “ಸಾಹಿತ್ಯ, ಸಂಗೀತ, ಕಲೆ ಮತ್ತು ಅಧ್ಯಾತ್ಮಿಕ ಪರಂಪರೆ ಒಂದು ಭಾವ ಭಾರತವನ್ನು ರೂಪಿಸಿದೆ. ಆ ಪರಂಪರೆಯ ಕೊಂಡಿಯಾಗಿರುವ ಕನಕದಾಸರು ಸಂಗೀತ ಮತ್ತು ಭಕ್ತಿಯ ಅನುಸಂಧಾನದ ಮೂಲಕ ಅಪೂರ್ವ ಸಾಧನೆ ಮಾಡಿದರು” ಎಂದರು.
ಪ್ರಸಿದ್ಧ ಗಾಯಕರಾದ ಯಜ್ಞೇಶ್ ಆಚಾರ್ಯ ಸುಬ್ರಹ್ಮಣ್ಯ ಅವರು ಕನಕ ಕೀರ್ತನ ಗಾಯನ ಕಮ್ಮಟವನ್ನು ನಡೆಸಿಕೊಟ್ಟರು. ಶ್ರೀವಾಣಿ ಕಾಕುಂಜೆ ಸಹಗಾಯಕರಾಗಿ, ಸುಹಾಸ್ ಹೆಬ್ಬಾರ್ ಮತ್ತು ರವಿರಾಜ್ ತಬಲ ಮತ್ತು ಹಾರ್ಮೋನಿಯಂನಲ್ಲಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಕಡಬ ತಾಲೂಕಿನ ವಿವಿಧ ಕಾಲೇಜುಗಳ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸುಂದರ ಶೆಟ್ಟಿ ಉಪಸ್ಥಿತರಿದ್ದರು. ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಗಣರಾಜ ಕುಂಬ್ಳೆ ಅವರು ಸ್ವಾಗತಿಸಿದರು. ರಾಮಕುಂಜ ಲಲಿಕಲಾ ಸಂಘದ ಸಂಯೋಜಕರಾದ ಜಯಶ್ರೀ ಭಟ್ ಅವರು ವಂದಿಸಿದರು.