ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ರಂಗಸ್ಪಂದನ ಸಂಸ್ಥೆ ಆಯೋಜಿಸಿರುವ ‘ಸಾಂಸ್ಕೃತಿಕ ರಂಗದಿಬ್ಬಣ’ದ ಸರಣಿ ಕಾರ್ಯಕ್ರಮದ ಅಂಗವಾಗಿ ದಿನಾಂಕ : 17-06-2023ರಂದು ಕಾವೂರು ಪದವಿನ ಶ್ರೀ ಗುರುವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಯಕ್ಷವೈಭವ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಶ್ರೀ ಗುರುವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಶ್ರೀ ಕುಸುಮಾಕರ್ ಯಕ್ಷಜ್ಯೋತಿ ಪ್ರಜ್ವಲನೆ ಮಾಡಿ ಶುಭ ಹಾರೈಸುತ್ತಾ “ನಮ್ಮ ನಾಡಿನ ಕಲೆ ಸಂಸ್ಕೃತಿಯನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯ. ಮಕ್ಕಳಲ್ಲಿ ಕಲಾ ಪ್ರತಿಭೆ ಅರಳಿದಾಗಲೇ ಸಂಸ್ಕಾರದ ಅರಿವು ಮೂಡುತ್ತದೆ. ಹಾಗಾಗಿ ರಂಗಸ್ಪಂದನದ ಈ ಕಾರ್ಯ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಜಾನಪದ ವಿದ್ವಾಂಸ ಕೆ.ಕೆ. ಪೇಜಾವರ, ದೈವಸ್ಥಾನ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣ ಸಾಲಿಯಾನ್, ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಶ್ರೀ ಎಂ.ಸಿ. ಕುಮಾರ್ ಹಾಗೂ ತುಳಸಿ ಮಹಾಬಲ ಉಪಸ್ಥಿತರಿದ್ದರು.
ರಂಗಸ್ಪಂದನದ ಸಂಚಾಲಕ ವಿ.ಜಿ. ಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ದಿನಕರ ಎಸ್. ಪಚ್ಚನಾಡಿ ಸ್ವಾಗತಿಸಿ, ಡಾ. ನಿವೇದಿತಾ ಹರೀಶ್ ನಿರೂಪಿಸಿದರು. ಹರೀಶ್ ಕಾವೂರು ವಂದಿಸಿದ ಬಳಿಕ ಕಾವೂರಿನ ಶ್ರೀ ಕಚ್ಚೂರಮಾಲ್ದಿ ಯಕ್ಷಗಾನ ಮಂಡಳಿಯ ಸದಸ್ಯರಿಂದ ಯಕ್ಷ ಗುರು ಡಾ. ದಿನಕರ ಎಸ್. ಪಚ್ಚನಾಡಿ ನಿರ್ದೇಶನದಲ್ಲಿ ‘ಜಾಂಬವತಿ ಕಲ್ಯಾಣ’ ಮತ್ತು ‘ಶ್ರೀದೇವಿ ಮಹಿಷ ಮರ್ದಿನಿ’ ಕಥಾ ಪ್ರಸಂಗದ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.