ತೆಕ್ಕಟ್ಟೆ : ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಜಂಟಿ ಆಶ್ರಯದಲ್ಲಿ ದಿನಾಂಕ 02 ಮಾರ್ಚ್ 2026ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ರಂಗೋತ್ಸವ ಸಮಾರೋಪದಲ್ಲಿ ಬ್ರಹ್ಮಾವರದ ಎಸ್.ಎಮ್.ಎಸ್. ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ಅಭಿನಯಿಸಿದ ‘ಕಿಟಕಿ ಪಕ್ಕ ನಿಂತ ಹುಡುಗಿ’ ನಾಟಕ ಪ್ರಸ್ತುತಿ ನಡೆಯಿತು.
ಈ ಸಂದರ್ಭದಲ್ಲಿ ರಂಗ ನಿರ್ದೇಶಕ ಸದಾನಂದ ಬೈಂದೂರು ಇವರು ಸಮಾರೋಪ ಭಾಷಣಗೈದು “ಕಿಟಕಿ ಪಕ್ಕ ನಿಂತ ಹುಡುಗಿ ಅದ್ಭುತ ಕಥೆಯನ್ನಾಧರಿಸಿದ ನಾಟಕ. ಎಷ್ಟೋ ಶಿಕ್ಷಕರ ಶಿಕ್ಷಣವನ್ನು ಆಯಾಮಗಳನ್ನು ಬದಲಾಯಿಸಿಕೊಂಡ ಕಥೆ. ಮಕ್ಕಳ ಮೂಲಕ ಡಾ. ಶ್ರೀಪಾದ ಭಟ್ಟರು ಸುಧಾ ಆಡುಕುಳರ ನಾಟಕವನ್ನು ಕೈಗೆತ್ತಿಕೊಂಡು ರಂಗ ಪ್ರಯೋಗಗೊಳಿಸಿದ್ದು ನಿಜಕ್ಕೂ ಸ್ತುತ್ಯರ್ಹ. ರಂಗಭೂಮಿಯ ನಾಟಕಗಳನ್ನು ಕರಾವಳಿಯಲ್ಲಿ ಅತ್ಯಧಿಕ ಸಂಖ್ಯೆ ಸಂಘಟನೆಗಳು ಆಯೋಜಿಸಿಕೊಳ್ಳುತ್ತಿರುವುದು ಸ್ವಾಗತಾರ್ಹ. ಇತ್ತೀಚಿನ ದಿನಗಳಲ್ಲಿ ರಂಗ ಚಟುವಟಿಕೆಗಳು ಯಥೇಚ್ಚವಾಗಿ ಕಂಡುಬರುತ್ತಿರುವುದು ಸಮಾಜದ ಬೆಳವಣಿಗೆ” ಎಂದು ಹೇಳಿದರು.
ಪ್ರಾಂಶುಪಾಲರಾದ ಸುಶೀಲ ಹೊಳ್ಳ, ಲೇಖಕಿ ಶೋಭಾ ಅರಸ್, ಧಮನಿ ಟ್ರಸ್ಟ್ ಅಧ್ಯಕ್ಷೆ ಸುಲೋಚನಾ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ ನಿರೂಪಣೆಗೈದರು. ಶ್ರೀಶ ಭಟ್ ಧನ್ಯವಾದಗೈದರು.
