ಮಂಗಳೂರು : ಖ್ಯಾತ ರಂಗಕರ್ಮಿ, ನಾಟಕ ರಚನಾಕಾರ, ಸಾಹಿತಿ, ಪತ್ರಕರ್ತ ಶ್ರೀ ಪರಮಾನಂದ ವಿ. ಸಾಲ್ಯಾನ್ ದಿನಾಂಕ 13 ಜುಲೈ 2026 ಸೋಮವಾರ ಮುಂಜಾನೆ 3-30 ಗಂಟೆಗೆ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಶ್ರೀ ಪರಮಾನಂದ ಸಾಲ್ಯಾನ್ ಅವರು ಕರಾವಳಿ ಭಾಗದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಗೌರವಾನ್ವಿತ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದವರು. ಸಸಿಹಿತ್ಲು ಶ್ರೀ ಸರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಮಾಜಿ ಅಧ್ಯಕ್ಷರಾಗಿದ್ದು, ದೇವಾಲಯದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಆಡಳಿತ ಸಮಿತಿಯಲ್ಲಿಯೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದವರು.
ರಂಗಭೂಮಿಯ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಅವರು ಹಲವು ನಾಟಕಗಳನ್ನು ನಿರ್ದೇಶಿಸಿದ್ದು, ‘ರಂಗ ಸುದರ್ಶನ ಸಸಿಹಿತ್ಲು’ ನಾಟಕ ತಂಡದ ಸಂಸ್ಥಾಪಕ ಅಧ್ಯಕ್ಷರಾಗಿದ್ದು ಈ ವೇದಿಕೆಯ ಮೂಲಕ ಹಲವಾರು ನಾಟಕಗಳ ಪ್ರದರ್ಶನಗಳನ್ನು ನೀಡಿದ್ದರು. ‘ಅಜೇಯ’ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಇವರು ‘ಮುಂಗಾರು’ ಮತ್ತು ‘ಹೊಸ ದಿಗಂತ’ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಾ, ‘ಬಿಲ್ಲವರ ವಿಶ್ವವಾಣಿ’ ಮತ್ತು ‘ಯುವವಾಹಿನಿ’ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ರಂಗ ಸುದರ್ಶನ, ಪರಮ ಪದ್ಮ ಕಲಾವಿದರು, ಸುದರ್ಶನ್ ಕ್ರಿಯೇಶನ್ಸ್ ಎಂಬ ಸಂಸ್ಥೆಗಳ ನಿರ್ದೇಶಕರಾಗಿ ದುಬೈ, ಅಬುದಾಬಿ ಮಾತ್ರವಲ್ಲದೆ ದೇಶದ ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ನೀಡಿ ಜನ ಮೆಚ್ಚುಗೆ ಪಡೆದಿದ್ದ ಇವರು ಕರಾವಳಿ ಕರ್ನಾಟಕ ಮತ್ತು ಮುಂಬೈನ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಲ್ಲಿ ಅವರು ಚಿರಪರಿಚಿತರಾಗಿದ್ದರು.
‘ಬಾರೆರ್ ಬೀರೆರ್’, ‘ದೇಯಿ’, ‘ಅಮ್ಮ ಬತ್ತೆರ್’, ‘ಸಿರಿಗಂಧದ ಕರಿಯಜ್ಜೆರ್’, ‘ಸಸಿಬಿತ್ಲ್ ಉಳ್ಳಾಯನ ಧರ್ಮ ನಡೆ’ ಮುಂತಾದ ಸಾಕ್ಷ್ಯ ಚಿತ್ರಗಳು, ‘ಸೇವೆ ಮತ್ತು ನೋವು’, ‘ನಾಯೆರ್’, ‘ಅರುವದೆ’, ‘ಬೂತಲೆ’, ‘ಮಸಣ’ ಮುಂತಾದ ಕಿರುಚಿತ್ರಗಳು, ‘ಮಾಯದ ದೈಯೊಂಗುಲು’, ‘ಬಾಲೆಗೊಲಿನ ಭ್ರಾಮರಿ’, ‘ಕಡಲ್ ಉರ್ಕರ್ಂಡ್’, ‘ಸೀತೆಗ್ ಇತ್ತೆ ಅರ್ಥಾಂಡ್’, ‘ಲೀಲೆದ ಬಾಲೆ ಗೋಪಾಲೆ’, ‘ಬಲಿದಾನ’, ‘ಚೌತಿದ ಚಂದ್ರೆ’, ‘ಶನಿದೃಷ್ಟಿ’, ‘ಬೃಂದಾ ಮೂಲೆ ತುಳಸಿ’, ‘ಪುಟ್ಟುದ ಗುಟ್ಟು’, ‘ಪಾಂಚಾಲಿ’, ‘ಮಾಯಕದ ಮಾಣಿ’, ‘ವರ್ಣ ಯಾವುದು ಕರ್ಣ ನಿನ್ನ?’, ‘ಶಿವಪ್ರಸಾದ ಬಬ್ಬರ್ಯೆ’, ‘ತೆಡಿಲ ಕಿಡಿ’, ‘ತಿಗಲೆ ಮಂಜಣೆ’, ‘ತಂಕದ ಪೂಂಜೆ’, ‘ಅರುವದ ಬೂತಾಲೆ’, ‘ಅಬ್ಬ ಅಬ್ಬಕ್ಕನೆ’, ‘ಮಡ್ಡಿ ಕಳೆದ್ ಮಡಿ’, ‘ಅಮರ್ ಸಿರಿಕುಲು’, ‘ಒಂಜಿ ಸಿರಿ ರಡ್ಡ್ ಬೊಂಡ’, ‘ದರ್ಪು ದಂಟಿನ ಸಿರಿ’, ‘ಉಳ್ಳಾಯೆ ಮಲ್ಲಾಯೆ’, ‘ಶಿಲುಬೆ ಮತ್ತು ಗಲಭೆ’, ‘ಶಿವದೂತೆ ಗುಳಿಗೆ’ (ಸಂಭಾಷಣೆ), ‘ಮಸ್ತ್ ಮಸ್ತ್ ಮೋಕೆ’, ‘ಮೆಗ್ದಿಗಾದ್’, ‘ಸತ್ಯ ತೆರಿಯೆ’, ‘ಪುರಲ್’, ‘ಒಂಜಿ ರಾತ್ರೆ ಒಂಜಿ ಪಗೆಲ್’, ‘ದಯೆ ಪಿದಡಿಯೆ’ ಹೀಗೆ ನೂರಾರು ಸಾಮಾಜಿಕ, ಐತಿಹಾಸಿಕ ಮತ್ತು ಪೌರಾಣಿಕ ನಾಟಕ, ಕಿರುನಾಟಕ, ಪ್ರಹಸನಗಳನ್ನು ಬರೆದು ನಿರ್ದೇಶನ ಮಾಡಿರುತ್ತಾರೆ.
ಇಂದು ಶಾಶ್ವತವಾಗಿ ಜೀವನ ನಾಟಕರಂಗದ ತೆರೆಯಮರೆಗೆ ಸರಿದ ಪರಮಾನಂದ ವಿ. ಸಾಲ್ಯಾನ್ ಇವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಭಗವಂತನಲ್ಲಿ ಪ್ರಾರ್ಥನೆ.
