ಕಾಸರಗೋಡು : ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕಿರೀಕ್ಕಾಡು ಸ್ಮಾರಕ ಸಭಾಭವನದಲ್ಲಿ ದಿನಾಂಕ 04 ಜುಲೈ 2026ರಂದು ‘ಶರಸೇತುಬಂಧ’ ಯಕ್ಷಗಾನ ತಾಳಮದ್ದಳೆ ಜರಗಿತು.
ಸ್ಥಳ ಸಾನಿಧ್ಯ ಶ್ರೀ ಗೋಪಾಲಕೃಷ್ಣ ದೇವರ ಪೂಜೆ ಭಗವದ್ಗೀತೆ ಪಾರಾಯಣದೊಂದಿಗೆ ನೆರವೇರಿದ ಬಳಿಕ ಯಕ್ಷಗಾನ ತಾಳಮದ್ದಳೆ ಯಕ್ಷಗುರು ವಿಶ್ವವಿನೋದ ಬನಾರಿ ಇವರ ಮಾರ್ಗದರ್ಶನ ನಡೆಯಿತು. ನಿತೀಶ್ ಕುಮಾರ್ ಎಂಕಣ್ಣಮೂಲೆ ಹಾಗೂ ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ ಭಾಗವತರಾಗಿದ್ದರು. ಚೆಂಡೆ ಮದ್ದಳೆವಾದಕರಾಗಿ ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ಶ್ರೀಧರ ಆಚಾರ್ಯ ಈಶ್ವರಮಂಗಲ, ವಿಷ್ಣು ಶರಣ ಬನಾರಿ, ಶ್ರೀದೇವ್ ಈಶ್ವರಮಂಗಲ ಸಹಕರಿಸಿದರು. ಅರ್ಥದಾರಿಗಳಾಗಿ ಕೀರಿಕ್ಕಾಡು ಗಣೇಶ ಶರ್ಮ, ರಾಮಣ್ಣ ಮಾಸ್ತರ್ ದೇಲಂಪಾಡಿ, ಬೆಳ್ಳಿಪ್ಪಾಡಿ ಹಳೆಮನೆ ವೆಂಕಪ್ಪ ಗೌಡ ಭಾಗವಹಿಸಿದ್ದರು. ಶಶಿಕಲಾ ಜಿ. ಭಟ್ ಇವರಿಂದ ಸೇವಾರೂಪವಾಗಿ ನಡೆಸಲ್ಪಟ್ಟ ಈ ಕಲಾ ಕಾರ್ಯಕ್ರಮದ ಮೊದಲಿಗೆ ಇತ್ತೀಚೆಗೆ ನಿಧನರಾದ ಹಿರಿಯ ಕಲಾ ಚೇತನ ಕೆ.ಸಿ. ಪಾಟಾಳಿ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಈಶ್ವರಿ ಪೆರುಂಬಾರು, ನಂದಕಿಶೋರ ಬನಾರಿ, ಶಾಂತಕುಮಾರಿ ಚೆಂಡೆಮೂಲೆ, ಪೂರ್ಣಿಮಾ ಬನಾರಿ ಸಹಕರಿಸಿದರು. ವಿಷ್ಣುಕೀರ್ತಿ ಬನಾರಿ ವಂದಿಸಿದರು.

