ಪೆರ್ಲ : ಕನ್ನಡ ಸಾರಸ್ವತ ಲೋಕದ ದಿಗ್ಗಜರಾದ ಪ್ರೊ. ಕೆ.ವಿ. ತಿರುಮಲೇಶ್, ಪ್ರೊ. ಟಿ. ಕೇಶವ ಭಟ್ಟ ಮತ್ತು ಪ್ರೊ. ಕೆ.ಟಿ. ಗಟ್ಟಿ ಇವರ ಸ್ಮರಣಾರ್ಥ ಶಂಪಾ ಪ್ರತಿಷ್ಠಾನ ಬೆಂಗಳೂರು ವತಿಯಿಂದ ‘ಸಾಹಿತಿ-ಸಾಹಿತ್ಯ-ಸಂಸ್ಮರಣೆ’ ಎಂಬ ವಿಶೇಷ ಕಾರ್ಯಕ್ರಮವನ್ನು ದಿನಾಂಕ 31 ಅಕ್ಟೋಬರ್ 2026ರಂದು ಬೆಳಗ್ಗೆ 10-00 ಗಂಟೆಗೆ ಚೇವಾರು ಕುಡ್ತಡ್ಕ ಕುಡಾಲ್ ಮೇರ್ಕಳ ಪೊಸಡಿಗುಂಪೆ ರಸ್ತೆಯ ನಿಸರ್ಗಧಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿದ್ವಾಂಸ ಡಾ. ತಾಳ್ತಜೆ ವಸಂತ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪ್ರೊ. ಪಿ.ಎನ್. ಮೂಡಿತ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಎ.ಆರ್ . ಸುಬ್ಬಯ್ಯಕಟ್ಟೆ ಅಚ್ಯುತ ಚೇವಾರು ಮತ್ತು ರವಿ ನಾಯ್ಕಾಪು ಉಪಸ್ಥಿತರಿರಲಿದ್ದಾರೆ. ಈ ಸಮಾವೇಶದಲ್ಲಿ ಮೂರು ಉಪನ್ಯಾಸಗಳು ಜರುಗಲಿದ್ದು, ಬೆಳಗ್ಗೆ ಗಂಟೆ 11.20ರಿಂದ ‘ಕನ್ನಡ ಸಾಹಿತ್ಯಕ್ಕೆ ಪ್ರೊ. ಕೆ.ವಿ. ತಿರುಮಲೇಶ್ ಕೊಡುಗೆ” ಎಂಬ ವಿಷಯದ ಕುರಿತು ಡಾ. ವರದರಾಜ ಚಂದ್ರಗಿರಿ ಮತ್ತು 12-20ರಿಂದ ‘ಜನಪದ ಸಾಹಿತ್ಯ-ಶಾಸ್ತ್ರ ಕ್ಷೇತ್ರಗಳಿಗೆ ಪ್ರೊ. ಟಿ. ಕೇಶವ ಭಟ್ಟರ ಕೊಡುಗೆ’ ಎಂಬ ವಿಷಯದ ಬಗ್ಗೆ ಡಾ. ಪಾದೇಕಲ್ಲು ವಿಷ್ಣು ಭಟ್ಟ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 1-30ರಿಂದ ‘ಪ್ರೊ. ಕೆ.ಟಿ. ಗಟ್ಟಿ ಅವರ ಕಾದಂಬರಿಗಳು’ ಎಂಬ ವಿಷಯದ ಕುರಿತು ಶ್ರೀಮತಿ ಕವಿತಾ ಕೂಡ್ಲು ವಿಶ್ಲೇಷಣೆ ನಡೆಸಲಿದ್ದಾರೆ. ಮಧ್ಯಾಹ್ನ ಗಂಟೆ 3-30ರಿಂದ ಸಮಾರೋಪ ಸಮಾರಂಭ ಆರಂಭವಾಗಲಿದ್ದು, ರಾಜೇಂದ್ರ ಬಜಕೂಡ್ಲು ಸಮಾರೋಪ ಭಾಷಣ ಮಾಡಲಿದ್ದಾರೆ. ಡಾ. ರಮಾನಂದ ಬನಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಸುಭಾಷ್ ಪೆರ್ಲ ಮತ್ತು ಟಿ.ಎನ್. ಖಂಡಿಗೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

