ಬೆಂಗಳೂರು : ಥಿಯೇಟರ್ ಲ್ಯಾಬ್ ಆಯೋಜಿಸಿದ ಮಕ್ಕಳ ರಂಗ ಪ್ರಯೋಗ ಶಾಲೆಯ ಈ ವರ್ಷದ ವಿದ್ಯಾರ್ಥಿಗಳಿಂದ ‘ಮೊಬೈಲ್ ಕಿರಿಕಿರಿ’ ಎಂಬ ಬೀದಿ ನಾಟಕ ದಿನಾಂಕ 03-09-2023ರ ಬೆಳಗ್ಗೆ 9.30ಕ್ಕೆ ಆರ್.ಆರ್.ನಗರದ ಮುನಿವೆಂಕಟಯ್ಯ ಬಯಲು ರಂಗಮಂದಿರದ ಅವರಣದಲ್ಲಿ ಪ್ರದರ್ಶನಗೊಳ್ಳಲಿದೆ. ಡಾ.ಎಸ್.ವಿ. ಕಶ್ಯಪ್ ನಿರ್ದೇಶನದ ಈ ನಾಟಕಕ್ಕೆ ಡಾ. ಬೃಂದಾ ಇವರು ಸಹ ನಿರ್ದೇಶಕಿಯಾಗಿ ಸಹಕರಿಸಿದ್ದಾರೆ.
ನಾಟಕದ ಬಗ್ಗೆ :
ಜಂಗಮವಾಣಿ ಇಂದು ನಮ್ಮ ಮನೆ ಮನಗಳನ್ನು ಆವರಿಸಿದೆ. ಅದು ನಮ್ಮ ಮಿತ್ರನೋ ಇಲ್ಲ ಶತ್ರುವೋ ? ಎಂಬ ಪ್ರಶ್ನೆ ನಮಗೆ ಎದುರಾಗಿದೆ. ಕೊರೋನಾ ಕಾಲದಲ್ಲಿ ಮಕ್ಕಳ ಕೈಗಳಿಗೆ ಮೊಬೈಲ್ ತಲುಪಿತು. ಅದರ ಸಾಧಕ ಬಾಧಕಗಳು ಮಕ್ಕಳ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿವೆ. ಎದುರಿಗಿರುವ ವ್ಯಕ್ತಿಗಿಂತ ಜೇಬಿನಲ್ಲಿರುವ ಮೊಬೈಲ್ ಮುಖ್ಯವಾಗಿದೆ. ಇಂಥ ಹತ್ತು ಹಲವಾರು ವಿಷಯಗಳ ಬಗ್ಗೆ ಮತ್ತು ಮೊಬೈಲ್ ಬಳಕೆಯ ಶಿಷ್ಟಾಚಾರದ ಬಗ್ಗೆ ಇರುವ ನಾಟಕ “ಮೊಬೈಲ್ ಕಿರಿಕಿರಿ ”
ರಂಗ ಪ್ರಯೋಗಶಾಲೆಯ ಬಗ್ಗೆ :
ಮಕ್ಕಳಲ್ಲಿ ರ೦ಗಪ್ರೀತಿ ಬೆಳೆಸಿ ರ೦ಗ ಮುಖೇನ ವ್ಯಕ್ತಿತ್ವ ವಿಕಸನ ಮಾಡುತ್ತಾ 8 ವರ್ಷಗಳಿಂದ ಮಕ್ಕಳ ರಂಗಭೂಮಿಯಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಡಾ.ಕಶ್ಯಪ್ ಮತ್ತು ಡಾ.ಬೃಂದಾ ಅವರ ಕನಸಿನ ಕೂಸಾದ ರಂಗ ಪ್ರಯೋಗ ಶಾಲೆ ಪುಟ್ಟ ಪ್ರತಿಭೆಗಳ ಅನಾವರಣ ಮಾಡುತ್ತಾ ಮಕ್ಕಳ ಮನೋವಿಕಾಸವನ್ನೇ ತನ್ನ ಧ್ಯೇಯವನ್ನಾಗಿಸಿಕೊಂಡು ಮುನ್ನಡೆಯುತ್ತಿದೆ.