ಸಾಲಿಗ್ರಾಮ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಜಂಟಿ ಆಶ್ರಯದಲ್ಲಿ ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಸಹಯೋಗದೊಂದಿಗೆ ತಿಂಗಳ ಸರಣಿ ತಾಳಮದ್ದಳೆ ಕಾರ್ಯಕ್ರಮ ಅರ್ಥಾಂಕುರ ದಿನಾಂಕ 13 ಜೂನ್ 2026ರಂದು ಸಾಲಿಗ್ರಾಮದಲ್ಲಿ ಚಾಲನೆಗೊಂಡಿತು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಸಿದ್ಧ ಅರ್ಥದಾರಿ ಪ್ರೊ. ಪವನ್ ಕಿರಣ್ ಕೆರೆ ಮಾತನಾಡಿ “ತಾಳಮದ್ದಳೆ ಕಾರ್ಯಕ್ರಮಗಳು ಬಡಗಿನ ಪ್ರಾಂತ್ಯದಲ್ಲಿ ಅತೀ ವಿರಳವಾಗುತ್ತಿರುವ ಕಾಲಘಟ್ಟದಲ್ಲಿ ಪ್ರತೀ ತಿಂಗಳು ಗುರುನರಸಿಂಹ ದೇಗುಲ ಸಾಲಿಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಿಕೊಂಡು ಎಷ್ಟೋ ಕಲಾವಿದರಿಗೆ ತಾಳಮದ್ದಳೆಯಲ್ಲಿ ಅರ್ಥ ಹೇಳಿಸುವಲ್ಲಿ ಅಭಿರುಚಿ ಮೂಡಿಸುತ್ತಿರುವ ವಿಚಾರ ಸಂತೋಷದಾಯಕವಾದದ್ದು. ಅರ್ಥಾಂಕುರ ನಿಜಕ್ಕೂ ಅರ್ಥಪೂರ್ಣ. ನಿರಂತರ ಕಾರ್ಯಕ್ರಮದ ಕಾರಣದಿಂದ ಪ್ರೇಕ್ಷಕ ವರ್ಗವೂ ದಿನೇ ದಿನೇ ಬೆಳೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅವಕಾಶ ಕಲ್ಪಿಸುತ್ತಿರುವ ದೇಗುಲದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೂ ಅಭಿನಂದನೆ ಸಲ್ಲಿಸಿಕೊಳ್ಳೋಣ” ಎಂದು ಅಭಿಪ್ರಾಯಪಟ್ಟರು.

ದೇವಳದ ಸಮಿತಿ ಸದಸ್ಯ ತಾರಾನಾಥ ಹೊಳ್ಳ, ಆ್ಯಂಡ್ರು ಡಿಸಿಲ್ವ, ಲಂಬೋದರ ಹೆಗಡೆ, ಎನ್.ಜಿ. ಹೆಗಡೆ ಉಪಸ್ಥಿತರಿದ್ದರು. ದೇವಳದ ಸಿಬ್ಬಂದಿ ನಾಗಾರಾಜ ಹಂದೆ ಅತಿಥಿಗಳನ್ನು ಅಭಿನಂದಿಸಿದರು. ಉಪನ್ಯಾಸಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಳಿಕ ತಾಳಮದ್ದಳೆ ‘ಶರಸೇತು ಬಂಧ’ ರಂಗ ಪ್ರಸ್ತುತಿಗೊಂಡಿತು.
