ತೆಕ್ಕಟ್ಟೆ: ಕರಾವಳಿಯ ಅಭಿಮಾನದ ಕಲಾಸಂಸ್ಥೆಯಾದ ಯಶಸ್ವೀ ಕಲಾವೃಂದದ ಆಶ್ರಯದಲ್ಲಿ ಇನ್ನು ಮುಂದೆ ಬಡಗಿನ ಹಿಮ್ಮೇಳದೊಂದಿಗೆ ತೆಂಕುತಿಟ್ಟು ಹಿಮ್ಮೇಳ ತರಗತಿಯೂ ನಡೆಯಲಿದೆ. ತಾಳ ಮದ್ದಳೆಯೊಂದಿಗೆ ಜಾಗಟೆಯ ಮಧುರ ಮೈತ್ರಿ ಬಯಸುವ ಕಲಾಸಕ್ತರಿಗೆ ಬೆಳ್ಳಿ ಹಬ್ಬದ ಸಂಸ್ಥೆ ನೀಡಿದ ಸುವರ್ಣ ಅವಕಾಶವಿದು. ಒಂದೇ ಕಲಿಕಾ ಕೇಂದ್ರದಲ್ಲಿ ಯಕ್ಷಗಾನ ಕಲಾಮಾತೆಯ ಯುಗ್ಮ ನಯನಗಳಂತಿರುವ ಎರಡು ತಿಟ್ಟುಗಳ ಸಶಕ್ತ ಶಿಕ್ಷಣ ಸಿಗುವುದೆಂದರೆ ನಿಜಕ್ಕೂ ಕಲಾಭ್ಯಾಸಿಗಳ ಭಾಗ್ಯವೆನ್ನಬೇಕು. ಯಶಸ್ವೀ ಕಲಾವೃಂದದ ಕಲಾತ್ಮಕ ಯೋಚನೆಯ ಮಹತ್ವಪೂರ್ಣ ನಡೆಯಿದು. ತೆಂಕು ತಿಟ್ಟಿನ ಅಗ್ರಮಾನ್ಯ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಗುರುತನದಲ್ಲಿ ತರಗತಿಗಳು ನಡೆಯುವ ಸಂಗತಿ ಅತ್ಯಂತ ಸಂತೋಷ ಕೊಡುತ್ತದೆ. ಸಿರಿಬಾಗಿಲು ರಾಮಕೃಷ್ಣ ಮಯ್ಯರು, ಪಟ್ಲ ಸತೀಶ ಶೆಟ್ಟಿಯವರಂತಹ ಘಟಾನುಘಟಿ ಕಲಾ ದಿಗ್ಗಜ ಶಿಷ್ಯರ ಗುರುಗಳಾದ ಮಾಂಬಾಡಿಯವರ ಗುರುತನ ಕರಾವಳಿಗೂ ಸುಲಲಿತವಾಗಿ ದಕ್ಕಲಿದೆ. 11 ಜನವರಿ 2025 ರಂದು ಬೆಳಿಗ್ಗೆ ಘಂಟೆ 10.00ಕ್ಕೆ ತೆಕ್ಕಟ್ಟೆ ಹಯಗ್ರೀವದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಉದ್ಘಾಟಕರಾಗಿ ಆಗಮಿಸುವ ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ತಿಳಿಸಿದ್ದಾರೆ.