ಮೈಸೂರು : ‘ಮೈಸೂರು ಸಾಹಿತ್ಯ ಸಂಭ್ರಮ’ವು ದಶಮಾನೋತ್ಸವದ ಸಂಭ್ರಮದಲ್ಲಿದ್ದು, 10ನೇ ಆವೃತ್ತಿಯ ಕಾರ್ಯಕ್ರಮವನ್ನು ದಿನಾಂಕ 04 ಮತ್ತು 05 ಜುಲೈ 2026ರಂದು ಮೈಸೂರಿನ ಸದರನ್ ಸ್ಟಾರ್ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲಕ್ಕೆ ವಿವಿಧ ಗೋಷ್ಠಿ-ಚರ್ಚೆಗಳು ನಡೆಯಲಿವೆ.
ಮೈಸೂರು ಲಿಟರರಿ ಫೋರಂ ಮತ್ತು ಚಾರಿಟಬಲ್ ಟ್ರಸ್ಟ್, ಮೈಸೂರು ಬುಕ್ ಕ್ಲಬ್ ಚಾರಿಟಬಲ್ ಟ್ರಸ್ಟ್ ಆಯೋಜಿಸಿರುವ ಕಾರ್ಯಕ್ರಮದ ಎರಡೂ ದಿನ ಸಾಹಿತ್ಯದ ಜೊತೆಗೆ ಸಮಕಾಲೀನ ಸಮಾಜದ ವಿವಿಧ ವಿಚಾರಗಳ ಕುರಿತು ಆಸಕ್ತಿಕರ ಚರ್ಚೆ, ಎಂಟು ಕೃತಿಗಳು ಬಿಡುಗಡೆ ಹಾಗೂ ದಶಮಾನೋತ್ಸವದ ನೆನಪಿಗೆ ‘ಬರಹ ಬಾಗಿನ’ ಎನ್ನುವ ಕೃತಿಯೂ ಅನಾವರಣಗೊಳ್ಳಲಿದೆ ಎಂದು ಟ್ರಸ್ಟಿನ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ಮಾಹಿತಿ ನೀಡಿದ್ದಾರೆ.
ದಿನಾಂಕ 04 ಜುಲೈ 2026ರಂದು ಬೆಳಿಗ್ಗೆ ಗಂಟೆ 10-00ಕ್ಕೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಉದ್ಘಾಟಿಸಲಿದ್ದು, ಲೇಖಕರಾದ ಅಮೇಶ್ ತ್ರಿಪಾಟಿ, ಅರುಣ್‌ರಾಮನ್, ಕಲಾವಿದ ಬಾದಲ್ ನಂಜುಂಡಸ್ವಾಮಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಪುಸ್ತಕ ಪ್ರೇಮಿ ಅಂಕೇಗೌಡರನ್ನು ಸನ್ಮಾನಿಸಲಾಗುವುದು. ನಾಡಿನ ಹಿರಿಯ-ಕಿರಿಯ ಸಾಹಿತಿಗಳು ಸಾಹಿತ್ಯಾಸಕ್ತರು ಪಾಲ್ಗೊಳ್ಳಲಿದ್ದಾರೆ.


