ಸುರತ್ಕಲ್: ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಮತ್ತು ನಾಗರಿಕ ಸಲಹಾ ಸಮಿತಿ (ರಿ), ಸುರತ್ಕಲ್ ಆಯೋಜಿಸುತ್ತಿರುವ ಸರಣಿ ಕಾರ್ಯಕ್ರಮ ‘ಉದಯರಾಗ – 55’ ದಿನಾಂಕ 01 ಸೆಪ್ಟೆಂಬರ್ 2024ರಂದು ಸುರತ್ಕಲ್ ಮೇಲು ಸೇತುವೆಯ ತಳಭಾಗದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಬ್ಯಾಂಕ್ ಪ್ರಬಂಧಕ ಮತ್ತು ರೋಟರಿ ಕ್ಲಬ್ ಸುರತ್ಕಲ್ ಇದರ ಸಾಮಾಜಿಕ ಸೇವಾ ವಿಭಾಗದ ನಿರ್ದೇಶಕ ರಾಮಚಂದ್ರ ಬಿ. ಕುಂದರ್ ಮಾತನಾಡಿ “ಸಂಗೀತವನ್ನು ಆಲಿಸಿದಾಗ ಮನಸ್ಸಿಗೆ ಸಂತೋಷವಾಗುವುದರೊಂದಿಗೆ ಮಾನಸಿಕ ಸಮಸ್ಯೆಗಳನ್ನು ಹೋಗಲಾಡಿಸಲೂ ಸಾಧ್ಯವಿದೆ. ಔದ್ಯೋಗಿಕ ಒತ್ತಡ ನಿವಾರಣೆಗೆ ಸಂಗೀತ ಅತ್ಯಂತ ಉಪಯುಕ್ತವಾದದ್ದು. ಸಂಗೀತದ ಆಸ್ವಾದಿಸುವಿಕೆಯಿಂದ ಕಾರ್ಯಕ್ಷಮತೆಯನ್ನು ವರ್ಧಿಸಲು ಸಾಧ್ಯ.” ಎಂದು ನುಡಿದರು.
ಕಾರ್ತಿಕ್ ರಾವ್ ಇಡ್ಯಾ ಇವರ ನಿರ್ದೇಶನದಲ್ಲಿ ‘ಗಾಯನ ಮಿತ್ರರು ಸುರತ್ಕಲ್’ ಇವರಿಂದ ನಾಮ ಸಂಕೀರ್ತನ ಕಾರ್ಯಕ್ರಮ ನಡೆಯಿತು. ಹಾಡುಗಾರಿಕೆಯಲ್ಲಿ ಸಂಪತ್ ಎಸ್. ಬಿ. ಮತ್ತು ಶ್ರೀನಿಧಿ ರಾವ್, ಸಹಗಾಯನದಲ್ಲಿ ಸೌರವ್ ಶ್ರೀಯಾನ್, ಶೈಲೇಶ್ ಬೈಕಂಪಾಡಿ ಮತ್ತು ಲಕ್ಷ್ಮೀಶ ಸೂರಿಂಜೆ, ಹಾರ್ಮೋನಿಯಂನಲ್ಲಿ ವಿಜಯ್ ಆಚಾರ್ಯ ಕುಳಾಯಿ, ತಬಲಾದಲ್ಲಿ ಪ್ರಥಮ್ ಚೇಳಾಯ್ರು ಸಹಕರಿಸಿದರು.
ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಇದರ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿದರು. ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್ ಸುರತ್ಕಲ್, ರೋಟರಿ ಕ್ಲಬ್ ಇದರ ಸದಸ್ಯರಾದ ಸಚ್ಚಿದಾನಂದ ರಾವ್, ಪ್ರೊ. ಪಿ. ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.