ನಟನೊಬ್ಬ ಶೂನ್ಯ ದೃಷ್ಟಿಯ ಮೂಲಕ ಜನರನ್ನೇ ದಿಟ್ಟಿಸಿ ನೋಡುತ್ತಾ ತೆಂಬರೆ ಬಾರಿಸುವುದರೊಂದಿಗೆ ನಾಟಕ ಆರಂಭವಾಗುತ್ತದೆ. ಕುದ್ರೋಳಿ ಗೋಕರ್ಣನಾಥೇಶ್ವರ ಕಾಲೇಜು ವಿದ್ಯಾರ್ಥಿಗಳಿಂದ ಜರ್ನಿಥೇಟರ್ ಮಂಗಳೂರು ಇವರ ಸಹಯೋಗದೊಂದಿಗೆ ಕಾಲೇಜಿನ ರಂಗಮಂಟಪದಲ್ಲಿ ಸಂಪನ್ನಗೊಂಡ ನಾಟಕವಿದು.
ನಾಟಕ ರಚನೆಕಾರ ವಿಧೇಯನ್ ರಚಿಸಿರುವ ಈ ನಾಟಕದ ಹೆಸರು “ಉತ್ಥಾನ ಪರ್ವ” ಈ ಹೆಸರಿನಂತೆ ನಾಟಕದುದ್ದಕ್ಕೂ ಎರಡು ಹುಡುಕಾಟಗಳು ನಿರಂತರವಾಗಿ ಸಾಗುತ್ತವೆ. ಒಂದು ಹುಡುಕಾಟವು ಜಗದ ನಿಯಮಗಳಿಗೆ ಬಲಿಯಾದ ಮಗುವಿಗಾಗಿ ತಾಯಿಯ ಹುಡುಕಾಟವಾದರೆ ಮತ್ತೊಂದು ವಾಸ್ತವ ಜಗದ ಒಳಗೆ ಇರದೇ ಇರುವ ಅಸ್ತಿತ್ವದ ಅತೀ ಬಯಕೆಗಳಿಗಾಗಿ ನಡೆಯುವ ದೇವರ ಹುಡುಕಾಟ. ಈ ನಾಟಕದ ಒಳಗೆ ಎರಡು ಕಥೆಗಳಲ್ಲಿ ಹೆಣೆಯಲಾಗಿದೆ. ಅದು ಮಲಯಾಳಂ ಮೂಲದ ಜಿ. ಶಂಕರ್ ಪಿಳ್ಳೆಯರು ರಚಿಸಿದ “ಕರುತ್ತ ದೈವತ್ತೆ ತೇಡಿ” ಮತ್ತು ತುಳುವ ನಾಡಿನ ದೈವ ಕೊರಗಜ್ಜನ ಕಥೆ. ಇವೆರಡು ಕಥೆಗಳನ್ನು ಎರಡೂ ಕಥೆಗಳಿಗೂ ತೊಡಕು ಬಾರದ ರೀತಿಯಲ್ಲಿ ಹೆಣೆದಿರುವ ನಾಟಕ ರಚನೆಕಾರರನ್ನು ಮೆಚ್ಚಲೇಬೇಕು. ನಾಟಕದ ನಿರ್ದೇಶಕರಾದ ವಿದ್ದು ಉಚ್ಚಿಲರು ಈ ನಾಟಕವನ್ನು ಅತೀ ಸುಂದರವಾಗಿ ತೆರೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ದೇವರನ್ನು ಹುಡುಕುವವರ ಜೊತೆಯಾಗಿ ಸಾಗುವ ಅವರ ಹೊರೆ ಹೊರುವ ಆಳು ಮಗನಾದ ಮೂಗ ಮತ್ತು ದೇವಸ್ಥಾನಕ್ಕೆ ಹೊರೆಕಾಣಿಕೆ ಹೊತ್ತು ಸಾಗುವ ಮಗುವಿನ ಪರಸ್ಪರ ಮುಖಾಮುಖಿಯ ದೃಶ್ಯ ನಾಟಕದ ಎರಡೂ ಕಥೆಗಳನ್ನು ಒಂದಾಗಿಸುವುದರಲ್ಲಿ ಯಶಸ್ವಿಯಾಗುತ್ತದೆ. ನಾಟಕದ ಒಂದೇ ಪಾತ್ರವನ್ನು ಅನೇಕರು ನಟಿಸುವ ಮೂಲಕ ಜನರಿಗೆ ಅರ್ಥೈಸುವ ಬಗೆಯಲ್ಲಿ ನಿರ್ದೇಶಕರ ಛಾಪು ಎದ್ದು ಕಾಣುತ್ತದೆ.
ಅಜ್ಜಿಯ ಪಾತ್ರದಲ್ಲಿ ನಟಿಸಿದ ವಿನೀತ, ನಯನಾರವರು ಪಾತ್ರಕ್ಕೆ ತಕ್ಕುದಾಗಿ ನಟಿಸಿರುತ್ತಾರೆ. ಮೂಗನ ನಟನೆಯ ನಟನಾದ ರಿತೇಶ್ ಪಾತ್ರಕ್ಕೆ ತಕ್ಕುದಾಗಿ ನಟಿಸಿದ್ದು ಮಗುವಿನ ಪಾತ್ರವು ಕೂಡ ಅದ್ಭುತವಾಗಿ ಮೂಡಿಬಂದಿದ್ದು ಮಗುವಿನ ಪಾತ್ರಕ್ಕೆ ತಕ್ಕುದಾದ ಮುಗ್ಧತೆಯನ್ನು ಹುರುಪು ಉತ್ಸಾಹವನ್ನು ನಟರಾದ ಹಿತೇಶ್, ಧನುಷ್, ರಾಜೇಶ್ ತಂದುಕೊಟ್ಟಿರುತ್ತಾರೆ. ತಿಳಿದವರ ಪಾತ್ರದಲ್ಲಿ ನಟಿಸಿದ ಅಕ್ಷಯ್‌ಕುಮಾರ್ ಕಿರಣ್‌ರವರು ತಮ್ಮ ಮೋಡಿಗೊಳಿಸುವ ಮಾತಿನ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.
ಮನೋಜ್ ವಾಮಂಜೂರರ ಸಾಹಿತ್ಯಕ್ಕೆ ಸಂಗೀತ ನೀಡಿದ ಮೇಘನಾ ಕುಂದಾಪುರ ನಾಟಕದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದ್ದು. ಮೇಘನಾ ಕುಂದಾಪುರ ಮತ್ತು ಶರಣ್ಯ ಭಟ್‌ರವರ ಹಾಡು ಜನರನ್ನು ನಾಟಕದ ನೋಟದಲ್ಲಿ ಲೀನಗೊಳಿಸುವುದರಲ್ಲಿ ಯಶಸ್ವಿಯಾಗಿದೆ. ನಾಟಕದುದ್ದಕ್ಕೂ ಕ್ರಮಬದ್ಧವಾಗಿ ಚರ್ಮವಾದ್ಯ ನುಡಿಸುತ್ತಾ ಜನಪದೀಯ ಲೋಕದ ಕಥಾ ಹಂದರದ ದೃಶ್ಯಗಳ ನಡುವಿನ ಶೂನ್ಯತೆಯನ್ನು ಕೂಡ ಮರೆಮಾಚಿದ ಗಣೇಶ್ ಆಚಾರ್ಯ ಮತ್ತು ಬೆಳಕಿನ ವಿನ್ಯಾಸ ಮಾಡಿದ ಮನೀಶ್ ಪಿಂಟೋ ಮತ್ತು ಸಹಕರಿಸಿದ ಸುದೇಶ್ ಕೂಡ್ಲುರವರನ್ನು ಕೂಡ ನೆನೆಯಲೇಬೇಕು.
ನಾಟಕದ ಕಥೆಗೆ ತಕ್ಕುದಾದ ರಂಗವಿನ್ಯಾಸವನ್ನು ಆಂಮ್ರಿನ್ ಕ್ರಿಸ್ಟನ್ ನಿರ್ಮಿಸಿದ್ದು ರಂಗ ವಿನ್ಯಾಸವು ಸರಳವಾಗಿ ಅತೀ ಸುಂದರವಾಗಿ ಮೂಡಿಬಂದಿದೆ. ನಾಟಕದ ವಸ್ತ್ರವಿನ್ಯಾಸ ಮತ್ತು ಪ್ರಸಾದನವನ್ನು ಜನಪದೀಯ ಕಥೆಗೆ ತಕ್ಕುದಾಗಿ ಶಿವರಾಮ್ ಕಲ್ಮಡ್ಕ ನಡೆಸಿರುತ್ತಾರೆ.
ಒಟ್ಟಿನಲ್ಲಿ ಗೋಕರ್ಣನಾಥೇಶ್ವರ ಕಾಲೇಜು ವಿದ್ಯಾರ್ಥಿಗಳ ಚೊಚ್ಚಲ ಪ್ರದರ್ಶನವು ಒಂದು ಹಂತದ ಯಶಸ್ವಿ ಪ್ರದರ್ಶನವಾದರೂ ಕೂಡಾ ನಾಟಕದ ಅನೇಕ ಕಲಾವಿದರನ್ನು ಸಂಭಾಷಣೆಯಲ್ಲಿ ಪಳಗಿಸುವ ಕಾರ್ಯ ನಡೆಯಬೇಕಿದೆ. ಮತ್ತು ನಾಟಕದ ಅನೇಕ ಕಡೆಗಳಲ್ಲಿ ಕೆಲವು ನಟರು ಕೈಕಾಲುಗಳನ್ನು ಕಲ್ಲಿನಂತಾಗಿಸಿಕೊಂಡು ನಟಿಸುತ್ತಿದ್ದು ಇಂತಹ ನಟರಿಗೆ ಇನ್ನಷ್ಟು ತರಬೇತಿಯನ್ನು ನೀಡಿ ನಟನೆಯ ನಾಜೂಕುತನದ ಅರಿವು ನೀಡಿದರೆ ಈ ನಾಟಕವು ಕೂಡಾ ಇನ್ನಷ್ಟು ಪರಿಪೂರ್ಣಗೊಂಡು ಜನಮಾನಸಕ್ಕಿಳಿಯುವುದರಲ್ಲಿ ಅನುಮಾನವೇ ಇಲ್ಲ.
ಮನುವಿ
ಮಂಗಳೂರು