ಮಂಗಳೂರು : ತುಳು ಕೂಟ ಕುಡ್ಲ ಮತ್ತು ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇವರ ವತಿಯಿಂದ ನಡೆಯುತ್ತಿರುವ ಮರೋಳಿ ಬಿ. ದಾಮೋದರ ನಿಸರ್ಗ ಸಂಸ್ಮರಣೆ-ತುಳು ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭವು ದಿನಾಂಕ 13 ಡಿಸೆಂಬರ್ 2025ರಂದು ಮಂಗಳೂರಿನ ಕಂಕನಾಡಿ ಗರೋಡಿ ದೇವಿ ಬೈದೆತಿ ಬಾವಡಿಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರೂ, ಧರ್ಮದರ್ಶಿಗಳೂ ಆದ ಡಾ. ಪುನರೂರು “ತುಳುವಿಗಾಗಿ ಈ ಹಿಂದೆಯೂ ಅನೇಕ ಹೋರಾಟಗಳು ನಡೆದಿವೆ. ಹಳ್ಳಿಯಿಂದ ದಿಲ್ಲಿಯವರೆಗೂ ಸಾಗಿದ್ದೇವೆ. ಅದರಲ್ಲೆಲ್ಲಾ ದಾಮೋದರ ನಿಸರ್ಗರೂ ಇದ್ದರು. ಇಂದು ಅವರ ನೆನಪಿನಲ್ಲಿ ಸಂಸ್ಮರಣಾ ಸಪ್ತಾಹ ನಡೆಸಿರುವುದು ಸಾಮಯಿಕವೇ ಆಗಿದೆ. ತುಂಬು ಅಭಿಮಾನದ ಕಾರ್ಯಕ್ರಮವಿದು” ಎಂದು ಹೇಳಿದರು.


ತುಳು ಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗರು ಸಪ್ತಾಹವನ್ನು ಯಶಸ್ವಿಗೊಳಿಸಿದವರನ್ನು ಅಭಿನಂದಿಸುತ್ತಾ ನಿವೃತ್ತ ಬ್ಯಾಂಕ್ ಉದ್ಯೋಗಿ ರೊ. ಜೆ.ವಿ. ಶೆಟ್ಟರನ್ನು ತುಳು ಕೂಟ ಹಾಗೂ ಸರಯೂ ಬಳಗದ ವತಿಯಿಂದ ಸನ್ಮಾನಿಸಿದರು. ಹಿರಿಯರಾದ ಶ್ರೀ ಗಂಗಾಧರ ಶಾಂತಿ, ಯೋಗೀಶ್ ಶೆಟ್ಟಿ ಜೆಪ್ಪು, ತೋನ್ಸೆ ಪುಷ್ಕಳ ಕುಮಾರ್, ನಾರಾಯಣ ಬಿ.ಡಿ., ಹೇಮಂತ್ ಗರೋಡಿ, ಮಮತಾ ಪ್ರವೀಣ್, ದಯಾಮಣಿ ವಿ. ಕೋಟ್ಯಾನ್ ಉಪಸ್ಥಿತರಿದ್ದರು. ಚಂದ್ರಪ್ರಭಾ ದಿವಾಕರ್ ಸನ್ಮಾನ ಪತ್ರ ವಾಚಿಸಿದರು. ನಾಗೇಶ್ ದೇವಾಡಿಗ ಕದ್ರಿ ವಂದಿಸಿದರು. ಬಳಿಕ ಯಕ್ಷಗುರು ರವಿ ಅಲೆವೂರಾಯ ವರ್ಕಾಡಿಯವರ ನೇತೃತ್ವದಲ್ಲಿ ‘ಮಾಯಾಕೊದ ಬಿನ್ನೆದಿ’ ಎಂಬ ತುಳು ಬಯಲಾಟ ಜರಗಿತು.
