ಮಂಗಳೂರು : ಹಿರಿಯ ಲೇಖಕಿ, ಸಾಹಿತ್ಯ ಸಂಘಟಕಿ, ಸುರತ್ಕಲ್ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಲೀಲಾವತಿ ಎಸ್. ರಾವ್ (83) ಮೈಸೂರಿನಲ್ಲಿ ದಿನಾಂಕ 16 ಸೆಪ್ಟೆಂಬರ್ 2026ರಂದು ನಿಧನ ಹೊಂದಿದರು. ಅವರು ಪತಿ ಎಂ.ಸಿ.ಎಫ್. ನಿವೃತ್ತ ಎಂಜಿನಿಯರ್ ಪಿ. ಶ್ರೀನಿವಾಸ ರಾವ್ ಹಾಗೂ ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಆಗಲಿದ್ದಾರೆ.
ಹಾಸನದ ಎ.ವಿ.ಕೆ. ಕಾಲೇಜ್‌ನಲ್ಲಿ ಎರಡು ವರ್ಷಗಳ ಕಾಲ ಉಪನ್ಯಾಸಕಿಯಾಗಿ ಅನಂತರ ಮೈಸೂರು ವಿ.ವಿ.ಯಲ್ಲಿ ಎರಡು ವರ್ಷ ಹರಿದಾಸ ಸಾಹಿತ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕಿಯಾಗಿ ಅವರು ಸೇವೆ ಸಲ್ಲಿಸಿದ್ದು, 1972ರಲ್ಲಿ ಸುರತ್ಕಲ್‌ನ ಗೋವಿಂದ ದಾಸ ಕಾಲೇಜ್ ಉಪನ್ಯಾಸಕಿಯಾಗಿ ಸೇರಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ 2001ರಲ್ಲಿ ನಿವೃತ್ತಿ ಹೊಂದಿದರು. ಗೋವಿಂದ ದಾಸ ಕಾಲೇಜ್ ಸಾಹಿತ್ಯ ಸಂಘದ ಅಧ್ಯಕ್ಷೆಯಾಗಿ, ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘದ ಸ್ಥಾಪಕ ಸದಸ್ಯೆಯಾಗಿ, ಅಧ್ಯಕ್ಷೆಯಾಗಿ ಸಾಹಿತ್ಯ ಚಟುವಟಿಕೆಗಳಿಗೆ ಪ್ರೇರಕ ಶಕ್ತಿಯಾಗಿದ್ದರು. ‘ದಾಸ ಸಾಹಿತ್ಯದ ಕೆಲವು ನೋಟಗಳು’, ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಮಹಿಳೆ’, ‘ಏರುವ ಬಾ ಕೇದಾರ ಶಿಖರ’, ‘ಕಿರಿಯರಿಗೆ ಹಿರಿಯರ ಕತೆಗಳು’ ಇವರ ಪ್ರಮುಖ ಕೃತಿಗಳು, ‘ಹೆಳವನಕಟ್ಟೆ ಗಿರಿಯಮ್ಮನ ಕೀರ್ತನೆಗಳು’, ‘ನಿಡಗುರುಕಿ ಜೀವೂಬಾಯಿಯವರ ಕೀರ್ತನೆಗಳು’ ಇವು ಇವರ ಸಂಪಾದಿತ ಕೃತಿಗಳು. ಕುಳಾಯಿಯಲ್ಲಿ ನಡೆದ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕನ್ನಡ ಸಾಹಿತ್ಯ ಪರಿಷತ್‌ನ ಕೃತಿ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು. ಕಾಳಜಿ ಸಾಹಿತ್ಯ ಸಂಘಟನೆಯ ಗೌರವ ಅಧ್ಯಕ್ಷತೆ, ಮಂಗಳೂರು ವಿವಿ ಕನ್ನಡ ಶೈಕ್ಷಣಿಕ ಮಂಡಳಿ, ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
