ಉಡುಪಿ : ಪರ್ಕಳ ಸರಿಗಮ ಭಾರತಿ ಸಂಗೀತ ವಿದ್ಯಾಲಯ ವತಿಯಿಂದ ‘ವಿದ್ಯಾದಶಮಿ ಸಂಗೀತೋತ್ಸವ–2026’ ಕಾರ್ಯಕ್ರಮವನ್ನು ದಿನಾಂಕ 21 ಅಕ್ಟೋಬರ್ 2026ರಂದು ಬೆಳಗ್ಗೆ ಗಂಟೆ 7-40ಕ್ಕೆ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದು, ಭರತನಾಟ್ಯ, ಶಾಸ್ತ್ರೀಯ ಸಂಗೀತ ಕಛೇರಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗ್ಗೆ 7-40ಕ್ಕೆ ಡಾ. ದಾಮೋದರ ಹೆಗ್ಡೆ ಇವರಿಂದ ಹಿಂದೂಸ್ತಾನಿ ಗಾಯನ ನಡೆಯಲಿದ್ದು, ತಬಲಾದಲ್ಲಿ ಶ್ರೀವತ್ಸ ಶರ್ಮ ಪಡುಬಿದ್ರಿ ಹಾಗೂ ಹಾರ್ಮೋನಿಯಂನಲ್ಲಿ ಶಶಿಕಿರಣ್ ಮಣಿಪಾಲ ಸಹಕರಿಸಲಿದ್ದಾರೆ. ಬೆಳಗ್ಗೆ 9-20ಕ್ಕೆ ಸರಿಗಮ ಭಾರತಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಪಿಳ್ಳಾರಿ ಗೀತೆಗಳ ಗಾಯನ ನಡೆಯಲಿದೆ. ಬೆಳಗ್ಗೆ 9-35ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಮನ್ವಿ ಭಟ್ ನೆಲೆಕ್ಕಳ ಅವರು ಪ್ರಾರ್ಥನೆ ನೆರವೇರಿಸಲಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಪರ್ಕಳ ದ ಮಂಜುನಾಥ ಉಪಾಧ್ಯ, ಪಂಡಿತ್ ರವಿಕಿರಣ್ ಮಣಿಪಾಲ ಭಾಗವಹಿಸಲಿದ್ದಾರೆ. ನೃತ್ಯಗುರು ವಿದುಷಿ ವೀಣಾ ಎಂ. ಸಾಮಗ, ಮಣಿಪಾಲ ಕೆ.ಎಂ.ಸಿ. ಪ್ರಾಧ್ಯಾಪಕರಾದ ಡಾ. ಕವಿತಾ ಸರವು, ವಿದುಷಿ ಸಂಗೀತಾ ಬಾಲಚಂದ್ರ, ವಿದುಷಿ ದೀಕ್ಷಾ ರಾಮಕೃಷ್ಣ ಹೆಗಡೆ ಇವರನ್ನು ಸಮ್ಮಾನಿಸಲಾಗುವುದು. ತನ್ವಿ ಶಾಸ್ತ್ರಿ ಮೂಡಂಬೈಲು, ಸ್ವಸ್ತಿ ಎಂ. ಭಟ್ ಮಣಿಪಾಲ ಇವರನ್ನು ಗುರುತಿಸಿ ಗೌರವಿಸಲಾಗುವುದು.
ಬೆಳಿಗ್ಗೆ ಗಂಟೆ 10-50ರಿಂದ ಮಧ್ಯಾಹ್ನ 12.30ರ ವರೆಗೆ ಶ್ರೀಹರಿ ಭಟ್ ಬೆಂಗಳೂರು ಇವರ ಹಾಡುಗಾರಿಕೆಗೆ, ತನ್ಮಯಿ ಉಪ್ಪಂಗಳ ವಯೋಲಿನ್, ಸುನಾದ ಕೃಷ್ಣ ಅಮೈ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಮಧ್ಯಾಹ್ನ 12-45ರಿಂದ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಪ್ರಸ್ತುತಿ ನಡೆಯಲಿದೆ. ವಯೋಲಿನ್ ನಲ್ಲಿ ವಿದ್ವಾನ್ ಮೋಹನ್ ಚಿಪ್ಳೂಣ್ ಕರ್ ಕಾರ್ಕಳ, ಶ್ರೀರಾಗ್ ಪಿ. ರಾವ್ ಉಡುಪಿ, ಮೃದಂಗದಲ್ಲಿ ತಮನ್ ಎಕ್ಕಡ್ಕ ಸಹಕರಿಸಲಿದ್ದಾರೆ. ಅಪರಾಹ್ನ 3-00 ಗಂಟೆಯಿಂದ ಶ್ರೀ ತ್ಯಾಗರಾಜರ ಘನಪಂಚರತ್ನ ಗೋಷ್ಠಿ ಗಾಯನ ನಡೆಯಲಿದೆ. 4-0 ಗಂಟೆಯಿಂದ ವಿದ್ವಾನ್ ಅಮಿತ್ ನಾಡಿಗ್ ಬೆಂಗಳೂರು ಇವರ ಕೊಳಲು ವಾದನ ಕಛೇರಿ ಜರಗಲಿದ್ದು, ತನ್ಮಯಿ ಉಪ್ಪಂಗಳ ವಯೋಲಿನ್, ಸುನಾದಕೃಷ್ಣ ಅಮೈ ಮೃದಂಗದಲ್ಲಿ ಸಹಕಾರ ನೀಡಲಿದ್ದಾರೆ. ರಾತ್ರಿ ಗಂಟೆ 7-25ರಿಂದ ವಿದುಷಿ ಪೂರ್ಣಶ್ರೀ ಸಾರಡ್ಕ ಹಾಗೂ ಕುಮಾರಿ ಪೂರ್ವೀಕೃಷ್ಣ ಇವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ ಎಂದು ನಿರ್ದೇಶಕ ಡಾ. ಉದಯಶಂಕರ್ ಎಚ್.ಎನ್. ಹಾಗೂ ಗುರುಗಳಾದ ಉಮಾಶಂಕರಿ ಟಿ.ಕೆ. ತಿಳಿಸಿದ್ದಾರೆ.

