Subscribe to Updates

    Get the latest creative news from FooBar about art, design and business.

    What's Hot

    ಸುರತ್ಕಲ್ ಬಂಟರ ಸಂಘದಲ್ಲಿ ‘ಯಕ್ಷ ಸಿರಿ’ ನಾಲ್ಕನೇ ವಾರ್ಷಿಕೋತ್ಸವ

    October 19, 2026

    ಡಾ. ಸುರೇಶ್ ನೆಗಳಗುಳಿ ಇವರಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ’

    October 19, 2026

    ಸರಿಗಮ ಭಾರತಿ ಸಂಗೀತ ವಿದ್ಯಾಲಯದ ‘ವಿದ್ಯಾದಶಮಿ ಸಂಗೀತೋತ್ಸವ -2026’ | ಅಕ್ಟೋಬರ್ 21

    October 19, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪರಿಚಯ ಲೇಖನ | ‘ಯಕ್ಷ ಕಲಾ ಚತುರ’ ನಿಶಿತ್ ಸುವರ್ಣ
    Article

    ಪರಿಚಯ ಲೇಖನ | ‘ಯಕ್ಷ ಕಲಾ ಚತುರ’ ನಿಶಿತ್ ಸುವರ್ಣ

    October 19, 2026No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ ಜಿಲ್ಲೆಯ ಪಡುಬಿದ್ರಿ ಇವರ ಹುಟ್ಟೂರು. ಪ್ರಸ್ತುತ ಮುಂಬೈನಲ್ಲಿ ವಾಸ. ಬಿ.ಕಾಂ ಪದವಿ ಇವರ ವಿದ್ಯಾಭ್ಯಾಸ. ಆನಂದ್ ಸುವರ್ಣ ಹಾಗೂ ಸುನೀತಾ ಸುವರ್ಣ ಇವರ ಮಗನಾಗಿ 13.04.2002ರಂದು ನಿಶಿತ್ ಸುವರ್ಣ ಜನನ. ಜಯಪ್ರಕಾಶ್ ನಿಡ್ವಣ್ಣಾಯ, ಕಟೀಲು ಸದಾನಂದ ಶೆಟ್ಟಿ, ನಾಗೇಶ್ ಕುಮಾರ್ ಪೊಳಲಿ ಇವರ ಯಕ್ಷಗಾನ ಗುರುಗಳು.

    ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಯಾರು:-
    ಬಾಲ್ಯದಿಂದಲೇ ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿ ಇತ್ತು. ಹಿರಿಯ ಕಲಾವಿದರ ವೇಷಭೂಷಣ, ಅಭಿನಯ, ನೃತ್ಯ ಹಾಗೂ ಕಲಾ ಪ್ರದರ್ಶನಗಳು ನನ್ನನ್ನು ಬಹುವಾಗಿ ಆಕರ್ಷಿಸಿ, ಯಕ್ಷಗಾನ ಕಲಿಯುವ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿತು. ಶ್ರೀ ದುರ್ಗಾಪರಮೇಶ್ವರಿ ಶನೀಶ್ವರ ದೇವಸ್ಥಾನ ದಹಿಸರ್‌ನಲ್ಲಿ ನಡೆಯುತ್ತಿದ್ದ ಯಕ್ಷಗಾನ ಕಾರ್ಯಕ್ರಮಗಳನ್ನು ನೋಡುತ್ತಾ, ಯಕ್ಷಗಾನದಿಂದ ಪ್ರೇರಿತನಾಗಿ ಅಲ್ಲಿಯೇ ಯಕ್ಷಗಾನ ಅಭ್ಯಾಸವನ್ನು ಆರಂಭಿಸಿ, ಕಲಿಕೆಯ ಮೊದಲ ಹೆಜ್ಜೆಯನ್ನು ಇಟ್ಟೆ. ಅಲ್ಲಿಂದ ಆರಂಭವಾದ ನನ್ನ ಯಕ್ಷಗಾನದ ಪಯಣ ಇಂದು ಕೂಡ ನಿರಂತರವಾಗಿ ಸಾಗುತ್ತಿದೆ. ನನ್ನ ಗುರುಗಳಾದ, ಜಯಪ್ರಕಾಶ್ ನಿಡ್ವಣ್ಣಾಯ, ಕಟೀಲ್ ಸದಾನಂದ ಶೆಟ್ಟಿ ಹಾಗೂ ನಾಗೇಶ್ ಕುಮಾರ್ ಪೊಳಲಿ ಅವರ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಕಲೆಯ ಮೇಲಿನ ಅವರ ಅಪಾರ ಬದ್ಧತೆ ನನ್ನನ್ನು ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಮುಂದುವರಿಯಲು ಪ್ರೇರೇಪಿಸಿದೆ.

    ನೆಚ್ಚಿನ ಪ್ರಸಂಗಗಳು:-
    ದೇವಿ ಮಹಾತ್ಮೆ, ಅಭಿಮನ್ಯು ಕಾಳಗ.
    ನೆಚ್ಚಿನ ವೇಷಗಳು:-
    ಕಿರೀಟ ವೇಷ, ಪುಂಡುವೇಷ ಅಭಿನಯಿಸುವುದು ನನಗೆ ವಿಶೇಷವಾಗಿ ಇಷ್ಟ. ಪಾತ್ರದ ಸ್ವಭಾವಕ್ಕೆ ತಕ್ಕಂತೆ ವೇಷಭೂಷಣ, ಮುಖವರ್ಣಿಕೆ ಮತ್ತು ಅಭಿನಯವನ್ನು ಮಾಡುವುದು ನನಗೆ ಹೆಚ್ಚು ಆಸಕ್ತಿದಾಯಕ.
    ನೆಚ್ಚಿನ ಚೆಂಡೆ ಮದ್ದಳೆ ಕಲಾವಿದರು:-
    ಸುಬ್ರಹ್ಮಣ್ಯ ಭಟ್ ದೇಲಂತಮಜಲು, ರೋಹಿತ್ ಉಚ್ಚಿಲ್.

    ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
    ಮೊದಲು ಪ್ರಸಂಗದ ಕಥೆ, ಪಾತ್ರದ ಸ್ವಭಾವ ಹಾಗೂ ಪಾತ್ರದ ಮಹತ್ವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ನಂತರ ಪದ್ಯ, ಸಂಭಾಷಣೆ ಮತ್ತು ಪಾತ್ರದ ಪ್ರವೇಶದಿಂದ ಅಂತ್ಯದವರೆಗೆ ಇರುವ ಸಂದರ್ಭಗಳನ್ನು ಅಭ್ಯಾಸ ಮಾಡಿಕೊಳ್ಳುತ್ತೇನೆ. ಅಲ್ಲದೆ, ರಂಗಕ್ಕೆ ಹೋಗುವ ಮೊದಲು ಗುರುಗಳು, ಹಿರಿಯ ಕಲಾವಿದರಲ್ಲಿ ಕೇಳಿ, ಹಾಗೆಯೇ ನನ್ನ ಮಾರ್ಗದರ್ಶಕರಾದ ಪೋಲ್ಯ ಲಕ್ಷ್ಮೀನಾರಾಯಣ ಶೆಟ್ಟಿ , ರೋಹಿತ್ ಉಚ್ಚಿಲ್ ಇವರಿಂದ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆದುಕೊಂಡು ನಂತರವೇ ಪಾತ್ರವನ್ನು ಪ್ರದರ್ಶಿಸಲು ಸಿದ್ಧನಾಗುತ್ತೇನೆ.
    ನಿಮ್ಮ ವೇಷಕ್ಕೆ ಯಾರಾದರೂ ಮಾದರಿ ಕಲಾವಿದರು ಇದ್ದಾರ:-
    ನನ್ನ ವೇಷಗಳಿಗೆ ಮಾದರಿ ಕಲಾವಿದರಾದ ದಿವಾಕರ್ ರೈ ಸಂಪಾಜೆ. ಅವರ ಅಭಿನಯ, ಪಾತ್ರದ ನಿರೂಪಣೆ, ನನಗೆ ಪ್ರೇರಣೆಯಾಗಿದೆ. ಅವರ ಕಲಾ ಶೈಲಿಯಿಂದ ಸಾಕಷ್ಟು ಕಲಿಯಲು ಪ್ರಯತ್ನಿಸುತ್ತೇನೆ.

    ಪೌರಾಣಿಕ ಯಕ್ಷಗಾನದಲ್ಲಿ ನಿಮ್ಮ ಒಲವು:-
    ಪೌರಾಣಿಕ ಯಕ್ಷಗಾನವೆಂದರೆ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಕಲೆಯ ಅದ್ಭುತ ಸಂಗಮ. ಅದರಲ್ಲೂ ಪಾತ್ರಗಳ ನಿರೂಪಣೆ, ಪದ್ಯ, ಸಂಭಾಷಣೆ ಹಾಗೂ ಹಿಮ್ಮೇಳದ ಸಂಗೀತದ ಮೂಲಕ ಕಥೆಯನ್ನು ಜೀವಂತಗೊಳಿಸುವುದು ನನಗೆ ವಿಶೇಷವಾಗಿ ಆಕರ್ಷಣೀಯ. ಜೊತೆಗೆ ತುಳು ಪ್ರಸಂಗಗಳೆಂದರೆ ನನಗೆ ತುಂಬಾ ಇಷ್ಟ. ತುಳು ಭಾಷೆಯ ಸೊಗಸು, ಹಾಸ್ಯ, ಸಂಭಾಷಣೆಯ ಸಹಜತೆ ಮತ್ತು ಸ್ಥಳೀಯ ಸಂಸ್ಕೃತಿಯ ಪ್ರತಿಬಿಂಬ ತುಳು ಪ್ರಸಂಗಗಳನ್ನು ಇನ್ನಷ್ಟು ಜನಪ್ರಿಯವಾಗಿಸುತ್ತವೆ. ಆದ್ದರಿಂದ ಪೌರಾಣಿಕ ಹಾಗೂ ತುಳು ಪ್ರಸಂಗಗಳೆರಡರಲ್ಲೂ ನನಗೆ ವಿಶೇಷ ಆಸಕ್ತಿ ಇದೆ.

    ಯಕ್ಷಗಾನದ ಇಂದಿನ ಸ್ಥಿತಿ ಗತಿ:-
    ಇಂದಿನ ದಿನಗಳಲ್ಲಿ ಯಕ್ಷಗಾನವು ಹೊಸ ತಲೆಮಾರಿನ ಪ್ರೇಕ್ಷಕರನ್ನು ತಲುಪುತ್ತಿರುವುದು ಸಂತೋಷದ ಸಂಗತಿ. ಸಾಮಾಜಿಕ ಜಾಲತಾಣಗಳು, ಯೂಟ್ಯೂಬ್ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಯಕ್ಷಗಾನವು ಜಾಗತಿಕ ಮಟ್ಟದಲ್ಲಿಯೂ ಪರಿಚಯವಾಗುತ್ತಿದೆ. ಆದರೆ ಪರಂಪರೆಯ ಶೈಲಿ, ವೇಷಭೂಷಣ, ಪದ್ಯ, ಭಾಗವತಿಕೆ ಮತ್ತು ಹಿಮ್ಮೇಳದ ವೈಶಿಷ್ಟ್ಯವನ್ನು ಉಳಿಸಿಕೊಂಡು ಹೊಸತನವನ್ನು ಅಳವಡಿಸಿಕೊಳ್ಳುವುದು ಇಂದಿನ ಪ್ರಮುಖ ಸವಾಲಾಗಿದೆ. ಯುವ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರಕ್ಕೆ ಬರಬೇಕು ಎಂಬುದು ನನ್ನ ಆಶಯ.

    ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
    ಇಂದಿನ ಪ್ರೇಕ್ಷಕರು ಯಕ್ಷಗಾನವನ್ನು ಆಸಕ್ತಿಯಿಂದ ಸ್ವೀಕರಿಸುತ್ತಿದ್ದಾರೆ. ವಿಶೇಷವಾಗಿ ಯುವಜನರು ಸಾಮಾಜಿಕ ಜಾಲತಾಣಗಳ ಮೂಲಕ ಯಕ್ಷಗಾನದ ಬಗ್ಗೆ ತಿಳಿದುಕೊಂಡು ಕಾರ್ಯಕ್ರಮಗಳಿಗೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಪ್ರೇಕ್ಷಕರ ಆಸಕ್ತಿ ಮತ್ತು ಕಲಾವಿದರ ಪರಿಶ್ರಮ ಎರಡೂ ಸೇರಿದ್ದಾಗ ಮಾತ್ರ ಯಕ್ಷಗಾನ ಇನ್ನಷ್ಟು ಬೆಳೆಯಲು ಸಾಧ್ಯ.

    ಯಕ್ಷಗಾನದ ಆಹಾರ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಯಕ್ಷಗಾನೀಯ ನಿಲುವುಗಳೇನು:-
    ಯಕ್ಷಗಾನದ ಆಹಾರ್ಯವೆಂದರೆ ಅದರ ಪ್ರಮುಖ ಗುರುತು. ವೇಷಭೂಷಣ, ಆಭರಣ, ಮುಖವರ್ಣಿಕೆ ಹಾಗೂ ಪಾತ್ರಕ್ಕೆ ತಕ್ಕ ಅಂಗಿಕಾಭಿನಯ ಇವೆಲ್ಲವೂ ಯಕ್ಷಗಾನದ ವೈಶಿಷ್ಟ್ಯವನ್ನು ಪ್ರತಿಬಿಂಬಿಸುತ್ತವೆ. ಆಧುನಿಕತೆಯ ಹೆಸರಿನಲ್ಲಿ ಮೂಲ ಪರಂಪರೆಯನ್ನು ಬದಲಾಯಿಸದೆ, ಅದರ ಸೌಂದರ್ಯ ಮತ್ತು ಶಿಸ್ತನ್ನು ಉಳಿಸಿಕೊಂಡು ಹೊಸ ತಲೆಮಾರಿಗೆ ಪರಿಚಯಿಸುವುದು ಅಗತ್ಯ. ಯುವ ಕಲಾವಿದರಿಗೆ ಸರಿಯಾದ ತರಬೇತಿ ನೀಡುವುದು ಮತ್ತು ಸಾಂಪ್ರದಾಯಿಕ ವೇಷ-ವಿನ್ಯಾಸದ ಮಹತ್ವವನ್ನು ತಿಳಿಸುವುದು ನನ್ನ ನಿಲುವು.

    ನೀವು ವಾಸವಿರುವುದು ಮುಂಬೈನಲ್ಲಿ. ಅಲ್ಲಿ ಯಕ್ಷಗಾನಕ್ಕೆ ಯಾವ ರೀತಿಯಲ್ಲಿ ಪ್ರೋತ್ಸಾಹ ಸಿಗುತ್ತದೆ:-
    ಮುಂಬೈಯಲ್ಲಿ ತುಳು-ಕನ್ನಡಿಗರ ಸಂಖ್ಯೆ ಹೆಚ್ಚಿರುವುದರಿಂದ ಯಕ್ಷಗಾನಕ್ಕೆ ಉತ್ತಮ ಪ್ರೋತ್ಸಾಹವಿದೆ. ವಿವಿಧ ಸಂಘ-ಸಂಸ್ಥೆಗಳು, ಸಾಂಸ್ಕೃತಿಕ ಮಂಡಳಿಗಳು ಮತ್ತು ಕಲಾಭಿಮಾನಿಗಳು ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಮುಂಬೈಯಲ್ಲಿ ನಡೆಯುವ ಯಕ್ಷಗಾನ, ತಾಳಮದ್ದಳೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತಿವೆ. ವಿಶೇಷವಾಗಿ ಯುವ ಕಲಾವಿದರಿಗೆ ವೇದಿಕೆ ಸಿಗುತ್ತಿರುವುದು ಸಂತೋಷದ ವಿಚಾರ.

    ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
    ಯಕ್ಷಗಾನದಲ್ಲಿ ನಿರಂತರವಾಗಿ ಕಲಿಯುತ್ತಾ, ಮುಮ್ಮೇಳ ಮತ್ತು ಹಿಮ್ಮೇಳ ಎರಡೂ ಕ್ಷೇತ್ರಗಳಲ್ಲಿ ನನ್ನ ಸಾಮರ್ಥ್ಯವನ್ನು ಮತ್ತಷ್ಟು ಬೆಳೆಸಿಕೊಳ್ಳುವುದು ನನ್ನ ಪ್ರಮುಖ ಗುರಿ. ಯುವ ಪೀಳಿಗೆಯವರಿಗೂ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಮಾಡಬೇಕು ಎಂಬ ಆಸೆ ಇದೆ. ಮುಂದಿನ ದಿನಗಳಲ್ಲಿ ಉತ್ತಮ ತಂಡಗಳೊಂದಿಗೆ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಯಕ್ಷಗಾನದ ಬೆಳವಣಿಗೆಗೆ ನನ್ನದೇ ಆದ ಕೊಡುಗೆ ನೀಡಲು ಬಯಸುತ್ತೇನೆ.

    ಸನ್ಮಾನ ಹಾಗೂ ಪ್ರಶಸ್ತಿಗಳು:-
    ಯಕ್ಷಗಾನ ಕ್ಷೇತ್ರದಲ್ಲಿ ನನಗೆ ದೊರೆತಿರುವ ಪ್ರತಿಯೊಂದು ಸನ್ಮಾನ ಮತ್ತು ಗೌರವವೂ ನನಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿದೆ. ವೇದಿಕೆಯಲ್ಲಿ ಕಲಾವಿದನಾಗಿ ದೊರೆಯುವ ಪ್ರೋತ್ಸಾಹ, ಹಿರಿಯ ಕಲಾವಿದರು ಮತ್ತು ಕಲಾಭಿಮಾನಿಗಳ ಮೆಚ್ಚುಗೆ ನನಗೆ ಅತ್ಯಂತ ದೊಡ್ಡ ಗೌರವ. ಮುಂದೆ ಇನ್ನಷ್ಟು ಸಾಧನೆ ಮಾಡುವ ಮೂಲಕ ನನ್ನ ಗುರುಗಳು, ಕುಟುಂಬ ಮತ್ತು ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಹೆಮ್ಮೆ ತರುವ ಪ್ರಯತ್ನ ಮಾಡುತ್ತೇನೆ.

    ಹವ್ಯಾಸಗಳು:-
    ಯಕ್ಷಗಾನ ನನ್ನ ಹವ್ಯಾಸ ಮಾತ್ರವಲ್ಲ, ನನ್ನ ಜೀವನದ ಒಂದು ಪ್ರಮುಖ ಭಾಗವಾಗಿದೆ. ಹಿಮ್ಮೇಳದ ಬಗ್ಗೆ ತಿಳಿದುಕೊಳ್ಳುವುದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಹಾಗೂ ಹೊಸ ವಿಷಯಗಳನ್ನು ಕಲಿಯುವುದು ನನ್ನ ಆಸಕ್ತಿಗಳಾಗಿವೆ. ಬಿಡುವಿನ ಸಮಯದಲ್ಲಿ ಸ್ನೇಹಿತರೊಂದಿಗೆ ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೂ ನನಗೆ ಇಷ್ಟ.

    ಗುರುನಾರಾಯಣ ಯಕ್ಷಗಾನ ಮಂಡಳಿ, ಗೀತಾಂಬಿಕ ಯಕ್ಷಗಾನ ಮಂಡಳಿ, ಯಕ್ಷ ಪ್ರಿಯ ಬಳಗ, ನಂದಿನಿ ಆರ್ಟ್ಸ್, ಭ್ರಾಮರಿ ಯಕ್ಷ ನೃತ್ಯ ಕಲಾ ನಿಲಯ, ಶ್ರೀ ದುರ್ಗಾಪರಮೇಶ್ವರಿ ಯಕ್ಷ ಮಂಡಳಿ, ಕಲಾಸಿರಿ ಯುವ ಯಕ್ಷ ಮಂಡಳಿ ತಂಡದಲ್ಲಿ ತಿರುಗಾಟ ಮಾಡಿದ ಅನುಭವ.
    ಯಕ್ಷಗಾನ ನನ್ನ ಬದುಕಿನ ಒಂದು ಭಾಗ. ಈ ಪಯಣದಲ್ಲಿ ನನಗೆ ಬೆನ್ನೆಲುಬಾಗಿ ನಿಂತ ಅಮ್ಮ, ಅಪ್ಪ, ಅಣ್ಣ ಅಕ್ಷಿತ್ ಸುವರ್ಣ, ನನ್ನ ಗುರುಗಳು, ಹಿರಿಯ ಕಲಾವಿದರು, ಸ್ನೇಹಿತರು ಹಾಗೂ ನನ್ನನ್ನು ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ಬೆಂಬಲವೇ ನನ್ನ ಶಕ್ತಿ ಎಂದು ಹೇಳುತ್ತಾರೆ ನಿಶಿತ್ ಸುವರ್ಣ.

    ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

    ಶ್ರವಣ್ ಕಾರಂತ್ ಕೆ.
    ‘ಸುಪ್ರಭಾತ’, ಶಕ್ತಿನಗರ, ಮಂಗಳೂರು.
    +91 8317463705

    article artist baikady introduction Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನಲ್ಲಿ ‘ಕಾರಂತ ಹುಟ್ಟುಹಬ್ಬ’ ಆಚರಣೆ ಮತ್ತು ಪ್ರಶಸ್ತಿ ಪ್ರದಾನ
    Next Article ಸರಿಗಮ ಭಾರತಿ ಸಂಗೀತ ವಿದ್ಯಾಲಯದ ‘ವಿದ್ಯಾದಶಮಿ ಸಂಗೀತೋತ್ಸವ -2026’ | ಅಕ್ಟೋಬರ್ 21
    roovari

    Add Comment Cancel Reply


    Related Posts

    ಸುರತ್ಕಲ್ ಬಂಟರ ಸಂಘದಲ್ಲಿ ‘ಯಕ್ಷ ಸಿರಿ’ ನಾಲ್ಕನೇ ವಾರ್ಷಿಕೋತ್ಸವ

    October 19, 2026

    ಡಾ. ಸುರೇಶ್ ನೆಗಳಗುಳಿ ಇವರಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ’

    October 19, 2026

    ಸರಿಗಮ ಭಾರತಿ ಸಂಗೀತ ವಿದ್ಯಾಲಯದ ‘ವಿದ್ಯಾದಶಮಿ ಸಂಗೀತೋತ್ಸವ -2026’ | ಅಕ್ಟೋಬರ್ 21

    October 19, 2026

    ಮಂಗಳೂರಿನಲ್ಲಿ ‘ಕಾರಂತ ಹುಟ್ಟುಹಬ್ಬ’ ಆಚರಣೆ ಮತ್ತು ಪ್ರಶಸ್ತಿ ಪ್ರದಾನ

    October 19, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.