ಮಂಗಳೂರು : ಕಾರಂತ ಪ್ರಶಸ್ತಿ ಸಮಿತಿ ಮತ್ತು ಕಲ್ಕೂರ ಪ್ರತಿಷ್ಠಾನ ಇದರ ವತಿಯಿಂದ ನಡೆದಾಡುವ ವಿಶ್ವಕೋಶ ಎಂದೇ ಪ್ರಸಿದ್ಧರಾಗಿದ್ದ ಡಾ. ಕೆ. ಶಿವರಾಮ ಕಾರಂತರ ಹುಟ್ಟುಹಬ್ಬ ಕಾರ್ಯಕ್ರಮವು ದಿನಾಂಕ 10 ಅಕ್ಟೋಬರ್ 2026ರಂದು ಮಂಗಳೂರಿನ ಪತ್ತುಮುಡಿ ಸೌಧದ ಜನತಾ ಡಿಲಕ್ಸ್ ಇಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಇವರು ಸಾಹಿತಿ ಭುವನೇಶ್ವರಿ ಹೆಗಡೆಯವರನ್ನು ಅಭಿನಂದಿಸಿದರು. ನಾಡಿನ ಖ್ಯಾತ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಇವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಅನುಪಮವಾದ ಸೇವೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಕಲ್ಕೂರ ಪ್ರತಿಷ್ಠಾನದಿಂದ ‘ಜೀವಮಾನ ಸಾಧನಾ ಪ್ರಶಸ್ತಿ’ ಹಾಗೂ ಖ್ಯಾತ ಲೇಖಕಿ ವೈದೇಹಿ ಇವರಿಗೆ ‘ಕಾರಂತ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.


ಹಿರಿಯ ಸಾಹಿತಿ ಪ್ರೊ. ಬಿ.ಎ. ವಿವೇಕ ರೈ, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಭುವನೇಶ್ವರಿ ಹೆಗಡೆಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ಲೇಖಕ ಎಚ್. ಶಾಂತರಾಜ ಐತಾಳ್, ಪ್ರೊ. ಜಿ.ಕೆ. ಭಟ್ ಸೇರಾಜೆ ಮತ್ತಿತರರು ಉಪಸ್ಥಿತರಿದ್ದರು.

