ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಗ್ರಾಮೀಣ ಭಾಗದಲ್ಲಿ ಸಂಯೋಜಿಸಿದ ಬಾಲ ಲೀಲಾ ಚಿಣ್ಣರ ಬೇಸಿಗೆ ಶಿಬಿರವು ಹಾವಂಜೆಯ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ದಿನಾಂಕ 17 ಮೇ 2026ರಂದು ಸಮಾಪನಗೊಂಡಿತು.
ಈ ಸಂದರ್ಭದಲ್ಲಿ ಶಿಲ್ಪಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ‘ವಿಶ್ವಕಲಾ ಸಿಂಧು’ ಪುರಸ್ಕಾರವನ್ನು ಸ್ವೀಕರಿಸಿದ ಕಲಾವಿದ ವೆಂಕಟರಮಣ ಭಟ್ “ಮನೆಗೊಂದು ಒಲೆ, ಮನಕೊಂದು ಕಲೆ ಎಂಬಂತೆ ಚಿತ್ರಕಲೆ ಮಕ್ಕಳ ಮನಸ್ಸನ್ನು ಹದಗೊಳಿಸಲು ಬಹು ಮುಖ್ಯವಾದ ಕಲಾಪ್ರಕಾರವಾದುದು ಅಂತೆಯೇ ಚಿಣ್ಣರು ಸೃಜನಶೀಲರಾಗಿರ ಬೇಕಾದುದೂ ಮುಖ್ಯ. ಗ್ರಾಮೀಣ ಭಾಗದಲ್ಲಿ ಈ ತೆರನಾದ ಚಟುವಟಿಕೆಗಳು ಇಂದಿಗೆ ಅತ್ಯವಶ್ಯಕ” ಎಂಬುದಾಗಿ ನುಡಿದರು. ಇದೇ ಸಂದರ್ಭದಲ್ಲಿ ‘ಭಾವನಾ ಪುರಸ್ಕಾರ’ವನ್ನು ಪಾಕಶಾಸ್ತ್ರ ಪ್ರವೀಣರಾದ ವಿನೋದ್‌ರಾಜ್ ಭಟ್ ಸ್ವೀಕರಿಸಿದರು.

ಮುಖ್ಯ ಅತಿಥಿಗಳಾದ ಕರ್ನಾಟಕ ಬ್ಯಾಂಕ್ ಉಡುಪಿ ವಿಭಾಗದ ಎ.ಜಿ.ಎಂ. ರಮೇಶ್ ವೈದ್ಯರವರು ವಿವಿಧ ಉದ್ದೇಶಗಳಿಗಾಗಿ ಫೌಂಡೇಶನ್‌ಗೆ ನೀಡಿದ ಪ್ರೊಜೆಕ್ಟರ್ ಉದ್ಘಾಟಿಸಿ, “ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಈ ರೀತಿಯ ಕಾರ್ಯಕ್ರಮಗಳು ಬಹು ಉಪಯುಕ್ತವಾದುದು, ನಾವು ಚಿಕ್ಕಂದಿನಲ್ಲಿ ರಜಾ ದಿನಗಳಲ್ಲಿ ಗುಂಪುಗೂಡಿ ಆಟೋಟವಾಡುತ್ತಿತ್ತು. ಇಂದಿಗೆ ಕುಟುಂಬಗಳು ಚಿಕ್ಕದಾಗಿ ಮಕ್ಕಳ ಮೊಬೈಲ್ ಗೀಳು ಹೆಚ್ಚಾಗಿದೆ. ಈ ರೀತಿಯಲ್ಲಿ ಮಕ್ಕಳನ್ನು ಕೂಡಿಸಿ ಅವರಲ್ಲಿ ಸಂಸ್ಕಾರ ಬೆಳೆಸುವ ಕ್ರಮ ನಿಜಕ್ಕೂ ಶ್ಲಾಘನೀಯ” ಎಂಬುದಾಗಿ ಅಭಿಪ್ರಾಯವಿತ್ತರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗುರು ಹಾವಂಜೆ ಮಂಜುನಾಥ ರಾವ್ ವಹಿಸಿದ್ದರಲ್ಲದೇ ಅತಿಥಿಗಳಾದ ಬ್ರಹ್ಮಾವರ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ಮುಕ್ತಾ ಬಾಯಿ, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರತ್ನಾಕರ ಮೊಗವೀರ, ಬಾಳೆಬೈಲು ಸರಕಾರೀ ಪ್ರಾಥಮಿಕ ಶಾಲೆಯ ಉಪನ್ಯಾಸಕಿ ಶಾರದಾ ನಾಯಕ್ ಉಪಸ್ಥಿತರಿದ್ದರು. ಶಿಬಿರ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ಕಾರ್ಯಕ್ರಮ ನಿರ್ವಹಿಸಿ, ವಿದುಷಿ ಅಕ್ಷತಾ ವಿಶು ರಾವ್ ಸನ್ಮಾನಪತ್ರ ವಾಚಿಸಿ, ವಿಶುರಾವ್ ಹಾವಂಜೆ ಧನ್ಯವಾದಗೈದರು.
