ಬೆಂಗಳೂರು : ದಾಕಹವಿಸ ಆಯೋಜನೆ ಮಾಡಿರುವ ವಿಶ್ವ ದೃಶ್ಯ ಕಲಾ ದಿನಾಚರಣೆ ಅತ್ಯಂತ ಯಶಸ್ವಿಯಾಗಿ ವಿಜೃಂಭಣೆಯಿಂದ ದಿನಾಂಕ 15 ಏಪ್ರಿಲ್ 2025 ಮಂಗಳವಾರದಂದು ನಡೆಯಿತು. ರವೀಂದ್ರ ಕಲಾಕ್ಷೇತ್ರದ ಪಡಸಾಲೆ ಆರ್ಟ್ ಗ್ಯಾಲರಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕ್ಯಾನ್ವಾಸ್ ಮೇಲೆ ರೇಖಾಚಿತ್ರದ ಮೂಲಕ ನಿರಂತರ ಚಲನೆಯನ್ನು ಸೂಚಿಸುವ ಮತ್ಸ್ಯಕನ್ಯೆಯನ್ನು ಬಿಡಿಸಿ ಅದಕ್ಕೆ ಪೂರಕವಾಗಿ ವಿವಿಧ ರೂಪಕಗಳನ್ನು ರಚಿಸಿ ಆ ಚಿತ್ರದ ಧ್ವನಿಯನ್ನು ಹೆಚ್ಚಿಸಿದ ಶ್ರೀ ಚಂದ್ರನಾಥ ಆಚಾರ್ಯರವರು ಕಲಾತ್ಮಕವಾಗಿ ವರ್ಲ್ಡ್ ಆರ್ಟ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ನೂರಕ್ಕೂ ಹೆಚ್ಚು ಕಲಾವಿದರು ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಅಮೇರಿಕಾದ ಪ್ರತಿಷ್ಠಿತ ಕಲಾ ಪುರಸ್ಕಾರ ಸ್ಯಾಮ್ ಗಿಲ್ಲಿಯಮ್ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಶೀಲಾ ಗೌಡ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇವರು ಮಾತನಾಡಿ “ನಾವೆಲ್ಲ ಸೇರಿ ಈ ರೀತಿಯಾಗಿ ವಿಶ್ವ ಕಲಾ ದಿನವನ್ನು ಆಚರಿಸಿದಾಗ ಮಾತ್ರ ಅದರ ಬಗ್ಗೆ ಅರಿವು ಮತ್ತು ಕಲೆಯ ಬಗ್ಗೆ, ಕಲಾವಿದರ ಬಗ್ಗೆ ಗೌರವ ಮೂಡುವುದು” ಎಂದು ಅಭಿಪ್ರಾಯಪಟ್ಟರು. ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ ಶ್ರೀ ಪ.ಸ. ಕುಮಾರವರು, ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ಸಿ. ಚಂದ್ರಶೇಖರ ಮತ್ತು ಶ್ರೀ ಸುರೇಶ್ ಜೈರಾಂ ಹೀಗೆ ಕಲಾ ವಲಯದ ಗಣ್ಯ ಕಲಾವಿದರೆಲ್ಲ ಭಾಗಿಯಾಗಿದ್ದು ವಿಶೇಷವಾಗಿತ್ತು. ಹಾವೇರಿಯ ಕಲಾವಿದ ಶ್ರೀ ಕರಿಯಪ್ಪ ಹಂಚಿನಮನಿಯವರು ಆಳೆತ್ತರದ ಕ್ಯಾನ್ವಾಸ್ ನಲ್ಲಿ ಅಮೂರ್ತ ಕಲೆಯ ಕಲಾಪ್ರಾತ್ಯಕ್ಷಿಕೆ ನಡೆಸಿ ನೋಡುಗರ ಕಣ್ಮನ ಸೆಳೆದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕೃಷ್ಣ ಸೆಟ್ಟಿಯವರು ವಿಶ್ವ ಕಲಾ ದಿನದ ಮಹತ್ವ ಅದರ ಆಳ ಅವಶ್ಯಕತೆ ಬಗ್ಗೆ ವಿವರಿಸಿದರು. ಮೂವತ್ತಕ್ಕೂ ಹೆಚ್ಚು ಕಲಾವಿದರು ಈ ಕಲಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಎಲ್ಲಾ ಕಲಾವಿದರ ಕಲಾಕೃತಿಗಳ ಪ್ರದರ್ಶನವೂ ಜೊತೆಯಲ್ಲಿ ನಡೆದಿತ್ತು. ಅನೇಕ ಕಲಾಭಿಮಾನಿಗಳು ಈ ಎಲ್ಲಾ ಕಲಾವಿದರ ಜೊತೆ ಸಂವಾದ ನಡೆಸಿದರು. ಹಿರಿಯ ಮತ್ತು ಕಿರಿಯ ಕಲಾವಿದರ ಕಲಾ ಸಮ್ಮಿಲನ ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು. ಹಬ್ಬದ ಸಂಭ್ರಮ ಅಲ್ಲಿತ್ತು. ದಾಕಹವಿಸದ ಉಪಾಧ್ಯಕ್ಷರಾದ ಶ್ರೀ ಗಣಪತಿ ಎಸ್. ಹೆಗಡೆ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸುರೇಶ್ ವಾಘ್ಮೋರೆ ಎಲ್ಲರಿಗೂ ವಂದನೆ ಸಲ್ಲಿಸಿದರು.
ಬೆಳಿಗ್ಗೆ ಹತ್ತು ಗಂಟೆಗೆ ಪ್ರಾರಂಭಗೊಂಡ ವಿಶ್ವ ಕಲಾ ದಿನ ಕಾರ್ಯಕ್ರಮ ಸಂಜೆ ಐದು ಗಂಟೆಗೆ ಸಂಪನ್ನಗೊಂಡಿತು. ಕಲಾ ಕಾರ್ಯಾಗಾರದಲ್ಲಿ ಕಲಾವಿದರಾದ ಶ್ರೀ ಹರಿರಾಮ್ ವಿ., ವೇಣುಗೋಪಾಲ್ ಹೆಚ್.ಎಸ್., ಪ್ರಹ್ಲಾದ್ ಆಚಾರ್ಯ, ನಂಜುಂಡಸ್ವಾಮಿ, ಮೋಹನ ಎಮ್., ನಾ. ರೇವನ ಸಿದ್ದಪ್ಪ, ಬಾಬು ಜತ್ಕರ, ಕೆ.ಜಿ. ಲಿಂಗದೇವರು, ಜಯರಾಮ್ ಗಿಲಿಯಾಲ್ ಭಟ್ಟ, ಪ್ರವೀಣ್ ಕುಮಾರ್, ಕಂದನ್ ಜಿ., ಗಣಪತಿ ಅಗ್ನಿಹೋತ್ರಿ, ಗಣೇಶ್ ಧಾರೇಶ್ವರ, ಅರುಣ್ ಧಾವಲಿ, ಬಸವರಾಜ್ ಆಚಾರ್, ವಿನೋದ್ ಕುಮಾರ್, ಸುಧೀರ್ ಮೇಹರ್, ನಾಗನಾಥ ಗೌರಿಪುರ, ಶೇಷಗಿರಿ ಕೆ.ಎಮ್., ಶೀಲವಂತ ಯಾದಗಿರಿ, ಹರಿಪ್ರಸಾದ್ ಬಿ.ಎನ್., ಶ್ರೀಮತಿ ಅಲ್ಕಾ ಚಡ್ಡಾ ಹರ್ಪಲಾನಿ, ಸ್ಮಿತಾ ವರ್ಮಾ, ಲಕ್ಷ್ಮಿ ಮೈಸೂರು, ಮಮತಾ ಬೋರಾ, ಶಾಲಿನಿ ಸಿಂಗ್, ಶಿಲ್ಪಾ ಕಡಕ್ಬಾವಿ, ರಶ್ಮಿ ಸೋನಿ, ಅಶ್ವಿನಿ ಹೆಗಡೆ ಭಾಗವಹಿಸಿದ್ದರು. ಕಲಾ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಕಲಾವಿದರ ಭಾಗವಹಿಸುವಿಕೆ, ಹಿರಿಯ ಕಲಾವಿದರ ಉಪಸ್ಥಿತಿ ಇವೆಲ್ಲ ಕಲಾಸಂಭ್ರಮವನ್ನು ಹೆಚ್ಚಿಸಿತ್ತು. ದಾಕಹವಿಸದಿಂದ ನಡೆದ ವಿಶ್ವ ಕಲಾ ದಿನ ಸಾರ್ಥಕವಾಗಿತ್ತು.