ಕರಾವಳಿಯ ಪ್ರಸಿದ್ಧ ಸ್ಥಾನವನ್ನು ಪಡೆದ ಕಲೆ “ಯಕ್ಷಗಾನ”. ಕರ್ನಾಟಕದ ಗಂಡು ಕಲೆಯಾಗಿರುವ ಯಕ್ಷಗಾನ ಪಾರ್ತಿಸುಬ್ಬರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುತ್ತಿದೆ. ಇಂತಹ ಕಲೆಯಲ್ಲಿ ರಾರಾಜಿಸುತ್ತಿರುವ ಕಲಾವಿದ ಪಡುಕರೆ ಮಂಜುನಾಥ ಭಂಡಾರಿ.
ಎಪ್ರಿಲ್ 27, 1986ರಂದು ಕೆ.ಸಂಜೀವ ಭಂಡಾರಿ ಹಾಗೂ ನಾಗವೇಣಿ ದಂಪತಿಗಳ ಮಗನಾಗಿ ಜನನ. ಪಿ.ಯು.ಸಿ ವರೆಗೆ ವಿದ್ಯಾಭ್ಯಾಸ. ಚಿಕ್ಕಪ್ಪ ಮಹಾಬಲ ಭಂಡಾರಿ ಕೋಡಿ ಅವರಿಂದ ಪ್ರೇರಣೆಗೊಂಡು ಮಂಜುನಾಥ ಅವರು ಯಕ್ಷಗಾನ ರಂಗಕ್ಕೆ ಬಂದರು. ಎಂ.ಎಚ್ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ಯಕ್ಷಗಾನದ ಗುರುಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪದ್ಯಗಳ ಕಂಠಪಾಠ, ಅರ್ಥಗಾರಿಕೆ ಹಾಗೂ ಪ್ರಸಂಗದ ಚೌಕಟ್ಟು ಏನು, ಎಷ್ಟು ಎಂದು ತಿಳಿದು ಪಾತ್ರವನ್ನು ರಂಗದ ಮೇಲೆ ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಭಂಡಾರಿಯವರು.
ವೀರಮಣಿ ಕಾಳಗ, ಭೀಷ್ಮೋತ್ಪತ್ತಿ, ಕಂಸವಧೆ, ತಾಮ್ರಧ್ವಜ ಕಾಳಗ ಇವರ ನೆಚ್ಚಿನ ಪ್ರಸಂಗಗಳು.
ಹನುಮಂತ, ಕಂಸ, ಶಂತನು, ಮಯೂರಧ್ವಜ ಇವರ ನೆಚ್ಚಿನ ವೇಷಗಳು.
ಮೀನಾಕ್ಷಿ ಕಲ್ಯಾಣದ ಈಶ್ವರ, ಅಭಿಮನ್ಯು ಕಾಳಗದ ದ್ರೋಣ, ದಕ್ಷಯಜ್ಞದ ಬ್ರಾಹ್ಮಣ, ಮೈಂದ – ದ್ವಿವಿಧದ ಬಲರಾಮ, ಅಶ್ವಿನಿ ವಿಜಯದ ಫಣಿರಕ್ಕಸ, ನವಗ್ರಹ ಮಹಾತ್ಮೆಯ ಶನೀಶ್ವರ, ಹಿರೇ ಮಹಾಲಿಂಗೇಶ್ವರ ಕ್ಷೇತ್ರ ಮಹಾತ್ಮೆಯ ರಾವಣ ಮತ್ತು ನಂದಿಕೇಶ್ವರ, ಜ್ವಾಲಾದ ಅರ್ಜುನ ಹೀಗೆ ಹಲವು ಪಾತ್ರಗಳನ್ನು ಭಂಡಾರಿ ಅವರು ನಿರ್ವಹಿಸಿದ್ದಾರೆ.
ಯಕ್ಷ ಸೌರಭ ಸಂಘದ ಕೋಶಾಧಿಕಾರಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಗುರುಗಳ ಮಾರ್ಗದರ್ಶನದಲ್ಲಿ, ಯಕ್ಷಸೌರಭದ ಸರ್ವರ ಸಹಕಾರದಲ್ಲಿ, ನಮ್ಮದೇ ನೇತೃತ್ವದಲ್ಲಿ ಯಕ್ಷಗಾನ ಇತಿಹಾಸದಲ್ಲಿ ಹವ್ಯಾಸಿ ಮಹಿಳಾ ಕಲಾವಿದರ ಮಾಯಾಪುರಿ ಮಹಾತ್ಮೆ ಮತ್ತು ಪುರುಷರ ಅದರಲ್ಲೂ ಪ್ರಸಾದ್ ಕುಮಾರ್ ಮೊಗೆಬೆಟ್ಟು ಶಿಷ್ಯ ಕಲಾವಿದರ ಕೂಡುವಿಕೆಯಲ್ಲಿ ವೀರಮಣಿ ಕಾಳಗ ಪ್ರಸಂಗಗಳ ಜೋಡಾಟ ನಡೆಸಿದ ಹೆಮ್ಮೆ ನಮ್ಮದು ಹಾಗೂ ಯಕ್ಷಸೌರಭದ ಅಧ್ಯಕ್ಷರಾದ ಸಮಯದಲ್ಲಿ ಹವ್ಯಾಸಿ ಹಿರಿಯ 5 ಕಲಾವಿದರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಹವ್ಯಾಸಿಗಳನ್ನು ಗುರುತಿಸುವ ಕಾರ್ಯ ಮಾಡಿದ್ದೇವೆ. ಅದು ನಮ್ಮ ಸಂಘದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಕೋರೋನಾ ಸಂದರ್ಭ 2 ವರ್ಷಗಳು ನಾನೇ ಅಧ್ಯಕ್ಷ, ಆಗೆಲ್ಲ ಯೂಟ್ಯೂಬ್ ಆಟಗಳಿದ್ದ ದಿನಮಾನಗಳಲ್ಲಿ, ಮಾಮೂಲಿ 9 ಆಟ 1 ವಾರ್ಷಿಕೋತ್ಸವ ನಡೆಸಿದ ಹೆಮ್ಮೆ ನಮ್ಮದು ಎಂದು ಭಂಡಾರಿ ಅವರು ಹೇಳುತ್ತಾರೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಪರಂಪರೆ ಮತ್ತು ಸಮಕಾಲೀನ ಎರಡಕ್ಕೂ ಆದ್ಯತೆ ಇದೆ. ಉತ್ತಮ ಕಲಾವಿದರಿಗೆ ಹೆಚ್ಚಿನ ಮನ್ನಣೆ ಇದೆ ಎಂದು ಭಂಡಾರಿ ಅವರ ಅಭಿಪ್ರಾಯ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಹವ್ಯಾಸಿಗಳ ಯಕ್ಷಕೂಟಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು, ಯಾವುದೇ ಫಲಾಪೇಕ್ಷೆ ಇಲ್ಲದೆ ರಂಗದ ಮೇಲೆ ನಿಜವಾದ ಯಕ್ಷ ಕ್ರಮಗಳನ್ನು ನಿಷ್ಠೆಯಿಂದ ನೀಡುವ ಹವ್ಯಾಸಿ ಕಲಾಸಂಸ್ಥೆಗಳಿಗೆ ಪ್ರದರ್ಶನಕ್ಕೆ ಅವಕಾಶ ನೀಡಬೇಕು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:- ಹವ್ಯಾಸಿಗಳನ್ನು ಸೇರಿಸಿ ಎಂದೂ ಮರೆಯಲಾಗದ, ನೆನಪು ಸದಾ ಉಳಿಯುವ ಪ್ರದರ್ಶನ ಸಂಘಟಿಸಬೇಕೆಂಬ ಹಂಬಲ. ಹವ್ಯಾಸಿಗಳಿಗೆ ಸರಿಹೊಂದುವ ತಾಳಮದ್ದಳೆ, ಯಕ್ಷ ಸಪ್ತಾಹದಂತಹ ಪ್ರದರ್ಶನ, ಬಣ್ಣದ ಹಾಗೂ ವೇಷಭೂಷಣ ಕಟ್ಟಿಕೊಳ್ಳುವ ಕಲಿಕಾ ಪ್ರಕಾರಗಳನ್ನು ಯಕ್ಷ ಸೌರಭದ ಮೂಲಕವೇ ನಡೆಸಬೇಕೆಂಬ ಕನಸು ಇದೆ.
ಹವ್ಯಾಸಿ ಸಂಸ್ಥೆಗಳಲ್ಲಿ ಮಾತ್ರ ವೇಷ ಮಾಡಿದ ಅನುಭವ. ಮಾತೃ ಸಂಸ್ಥೆ ಯಕ್ಷ ಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾರಂಗ ಕೋಟ ಇದರ ಕಲಾವಿದ. ಮೊದಲು ಬಣ್ಣ ಹಚ್ಚಿದ್ದು ರಾಮಪ್ರಸಾದಿತ ಯಕ್ಷಗಾನ ಸಂಘ ಕೋಡಿಯಲ್ಲಿ. ಕೆದೂರು ಸಂಘದಲ್ಲಿ ಮತ್ತು ಹವ್ಯಾಸಿಗಳ ಕೂಡಾಟದಲ್ಲಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾರಂಗ ವಡ್ಡರ್ಸೆ ವೇಷ ಮಾಡಿದ ಅನುಭವ ಭಂಡಾರಿ ಅವರದು.
ನಂದಿಕೇಶ್ವರ ಫ್ರೆಂಡ್ಸ್ ತೆಕ್ಕಟ್ಟೆ ಇವರಿಂದ ಸನ್ಮಾನ ನೀಡಿ ಗೌರವಿಸಿದ್ದಾರೆ.
ನಾಟಕ, ಭಜನೆ, ನಿರೂಪಣೆ, ಶನೀಶ್ವರ ಕಥನದ ಅರ್ಥಧಾರಿ, ಬರವಣಿಗೆ, ಹತ್ತು ಹಲವು ರೀತಿಯ ಕಾರ್ಯಕ್ರಮಗಳ ಆಯೋಜನೆ, ಕ್ರಿಕೆಟ್ ಪಂದ್ಯಾಟ, ಕ್ರೀಡೋತ್ಸವದ ಸಂಘಟನೆ ಇವರ ಹವ್ಯಾಸಗಳು.
ಪಡುಕರೆ ಮಂಜುನಾಥ ಭಂಡಾರಿ ಅವರು ತಾರ ಇವರನ್ನು ೧೧.೦೪.೨೦೧೬ ರಂದು ಮದುವೆಯಾಗಿ ಮಕ್ಕಳಾದ ಅಚಿಂತ್ಯ ಮತ್ತು ಅಗಸ್ತ್ಯ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರ ಎಲ್ಲಾ ಹವ್ಯಾಸಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವುದು ಇವರ ಮಡದಿ ತಾರ. ಕಾರ್ಯಕ್ರಮ ಆಯೋಜಿಸಲು ಅದರಲ್ಲೂ ಅವಳಿಂದಾಗುವ ಎಲ್ಲಾ ವರ್ಕ್ ಮಾಡಿಕೊಡುತ್ತಾಳೆ. ಯಾವುದೇ ಸಂಘ-ಸಂಸ್ಥೆಗಳ ಹುದ್ದೆಯನ್ನು ಏರಿದರೂ ದುಡಿಯುವುದಾದರೆ ಮಾತ್ರವೇ ಏರಬೇಕು ಅಂತ ಅವಳ ಕಿವಿಮಾತು ನನಗೆ. ವೃತ್ತಿಯಲ್ಲಿ ನಾನು ಕೋಟ ಪಡುಕರೆಯಲ್ಲಿ ಕ್ಷೌರಿಕ ವೃತ್ತಿ ನಡೆಸುತ್ತಿದ್ದೇನೆ. ಅವಳು ಚಿತ್ತೂರು ಹೈಸ್ಕೂಲ್ ನಲ್ಲಿ ಹಿಂದಿ ಅಧ್ಯಾಪಕಿ ಎನ್ನುತ್ತಾರೆ ಭಂಡಾರಿಯವರು.
ಪ್ರಸ್ತುತವಾಗಿ ಕೋಟ ವಲಯ ಸವಿತಾ ಸಮಾಜದ ಅಧ್ಯಕ್ಷರು, ಉಡುಪಿ ಜಿಲ್ಲಾ ಸವಿತಾ ಸಮಾಜದ ಕ್ರೀಡಾ ಕಾರ್ಯದರ್ಶಿಗಳು, ಯಕ್ಷಸೌರಭದ ಕೋಶಾಧಿಕಾರಿ, ಮಾಜಿ ಅಧ್ಯಕ್ಷರಾಗಿ, ಇಂಡಿಕಾ ಕಲಾಬಳಗ ಮಣೂರು ಪಡುಕರೆಯ 5ನೇ ಸಂಭ್ರಮದ ಅಧ್ಯಕ್ಷರಾಗಿ, ಭಗವತ್ ಭಜನಾ ಮಂದಿರ ಕೋಟತಟ್ಟು ಪಡುಕರೆಯ ಭಜನಾ ಉಸ್ತುವಾರಿ ಮತ್ತು ಕಾರ್ಯದರ್ಶಿಗಳಾಗಿ, ಕೋಟ ವಲಯ ಸವಿತಾ ಯುವಸೇನೆ ಅಧ್ಯಕ್ಷರಾಗಿ, ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ ಅಂಬಲಪಾಡಿ – ಉಡುಪಿ ಇದರ ನಿರ್ದೇಶಕರಾಗಿ ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಪಡುಕರೆ ಮಂಜುನಾಥ ಭಂಡಾರಿ ಅವರು ದುಡಿದ ಅನುಭವ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು