ಯಕ್ಷಗಾನವಂತೂ ಗಂಡುಕಲೆಯೆಂದೇ ಪ್ರಸಿದ್ಧವಾಗಿದೆ. ವೃತ್ತಿ ಕಲಾವಿದರು, ಹವ್ಯಾಸೀ ಕಲಾವಿದರು ರಂಗವೇರಿ ಮಿಂಚುತ್ತಿದ್ದಾರೆ. ಇಂತಹ ಶ್ರೀಮಂತ ಕಲೆಯಾದ ಯಕ್ಷಗಾನದಲ್ಲಿ ಕಲಾ ಸೇವೆಯನ್ನು ಮಾಡುತ್ತಿರುವ ಯುವ ಕಲಾವಿದೆ ಇಂಚರ ಪೂಜಾರಿ ಶಿವಪುರ.
ಉಡುಪಿ ಜಿಲ್ಲೆಯ ಹೆಬ್ರಿಯ ಶಿವಪುರದ ಶಂಕರ್ ಪೂಜಾರಿ ಹಾಗೂ ಉಷಾ ದಂಪತಿಯರ ಮಗಳಾಗಿ 10.02.2001ರಂದು ಜನನ. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪೂರೈಸಿರುತ್ತಾರೆ. ತಂದೆ ಹವ್ಯಾಸಿ ವೇಷಧಾರಿ ಹಾಗೂ ಮನೆಯಲ್ಲಿ ಯಕ್ಷಗಾನದ ವಾತಾವರಣ ಇದುದರಿಂದ ಯಕ್ಷಗಾನ ಕಲಿಯಲು ಪ್ರೇರಣೆಯಾಯಿತು.
ಮೂರನೇ ತರಗತಿಯಲ್ಲಿ ಇರುವಾಗ ಮಹಾಬಲೇಶ್ವರ ಅಡಿಗ ಗುರುಗಳ ಬಳಿ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿತ ನಂತರ ರಂಗದ ತಾಳ, ಪೂರ್ವರಂಗ ಹಾಗೂ ವೇಷಗಾರಿಕೆ ಬಗ್ಗೆ ಕೇಂದ್ರದ ಗುರುಗಳಾದ ಸುಬ್ರಮಣ್ಯ ಪ್ರಸಾದ್ ಮುದ್ರಾಡಿ ಬಳಿ ಕಲಿತು ಪ್ರಸ್ತುತ ಮಹೇಶ್ ಕುಮಾರ ಮಂದಾರ್ತಿ ಬಳಿ ಯಕ್ಷಗಾನದ ಭಾಗವತಿಕೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ರಂಗಕ್ಕೆ ಹೋಗುವ ಮೊದಲು ಗುರುಗಳ ಹತ್ತಿರ ಆ ದಿನದ ಪ್ರಸಂಗದ ಬಗ್ಗೆ ಕೇಳಿ ಹಾಗೂ ಪ್ರಸಂಗ ಪುಸ್ತಕವನ್ನು ನೋಡಿ ಪ್ರಸಂಗದ ಬಗ್ಗೆ ತಯಾರಿಯನ್ನು ಮಾಡಿಕೊಳುತ್ತೇನೆ ಎಂದು ಹೇಳುತ್ತಾರೆ ಇಂಚರ.
ಸುದರ್ಶನ ವಿಜಯ, ಅಭಿಮನ್ಯು ಕಾಳಗ, ಕರ್ಣಾರ್ಜುನ, ಕಾರ್ತವೀರ್ಯ ಇತ್ಯಾದಿ ನೆಚ್ಚಿನ ಪ್ರಸಂಗಗಳು.
ಬೃಂದಾವನ ಸಾರಂಗ, ಷಣ್ಮುಖ ಪ್ರಿಯ, ಅಭೇರಿ ನೆಚ್ಚಿನ ರಾಗಗಳು.
ಚಂದ್ರಕಾಂತ್ ರಾವ್ ಮೂಡುಬೆಳ್ಳೆ, ರಾಮಕೃಷ್ಣ ಹೆಗಡೆ ಹಿಲ್ಲೂರು, ಪ್ರಸನ್ನ ಭಟ್ ಬಾಳ್ಕಲ್ ನೆಚ್ಚಿನ ಭಾಗವತರು.
ರಾಮಕೃಷ್ಣ ಮಂದಾರ್ತಿ, ಪರಮೇಶ್ವರ್ ಭಂಡಾರಿ, ಅಕ್ಷಯ ಆಚಾರ್ಯ ನೆಚ್ಚಿನ ಚೆಂಡೆ ಮದ್ದಳೆ ವಾದಕರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇಂದಿನ ದಿನಗಳಲ್ಲಿ ಈ ಕಲೆಗೆ ಉತ್ತಮ ಸ್ಪಂದನೆ ದೊರೆಯುತ್ತಿರುವುದು ಸಂತೋಷದ ಸಂಗತಿ. ಆಬಾಲವೃದ್ಧರನ್ನೆಲ್ಲಾ ಆಕರ್ಷಿಸುವ ಗುಣ ಹೊಂದಿದ್ದು, ಪ್ರಪಂಚದಾದ್ಯಂತ ವಿಸ್ತರಿಸಿದೆ. ಕಾಲಕ್ಕೆ ತಕ್ಕಂತೆ ಕಲಾಬದಲಾವಣೆ ಹೊಂದಿ ಉಪ ಪ್ರಕಾರಗಳನ್ನು ಕಾಣಬಹುದು. ಮಹಿಳಾ ಯಕ್ಷಗಾನ ವಿಸ್ತೃತ ರೂಪದಲ್ಲಿ ಸ್ವೀಕರಿಸಲ್ಪಟ್ಟಿದೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಸಮಯ ಹಾಗೂ ಅವಕಾಶ ಎರಡೂ ಪೂರಕವಾಗಿ ಬಂದಾಗ ಸಾಧ್ಯವಾದಷ್ಟು ಪ್ರಸಂಗಗಳ ಬಗ್ಗೆ ಅಧ್ಯಯನ ಮಾಡಬೇಕು ಎಂಬ ಬಯಕೆ ಇದೆ ಎಂದು ಹೇಳುತ್ತಾರೆ ಇಂಚರ ಪೂಜಾರಿ ಶಿವಪುರ.
ಗೆಜ್ಜೆಗಿರಿ ಮೇಳದ ಪ್ರಥಮ ಸೇವೆಯ ದಿನ ಸನ್ಮಾನ, ಕುಂದಾಪುರ ದಸರಾದಲ್ಲಿ ಸನ್ಮಾನ ಹಾಗೂ ಕೆಲವು ಕಾರ್ಯಕ್ರಮದಲ್ಲಿ ಗುರುತಿಸಿ ಪ್ರೋತ್ಸಾಹವನ್ನು ನೀಡಿದ್ದಾರೆ.
ಭಜನೆ, ಕುಣಿತ ಭಜನೆ, ಮೆಹೆಂದಿ ಹಾಕುವುದು ಇವರ ಹವ್ಯಾಸಗಳು.
ತಂದೆ, ತಾಯಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಇಂಚರ ಪೂಜಾರಿ ಶಿವಪುರ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು