ವಿಟ್ಲ : ಬಂಟ್ವಾಳ ತಾಲೂಕಿನ ವಿಟ್ಲದ ಚಂದಳಿಕೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಹಿರಿಯ ಕವಿ ಭಾಸ್ಕರ ಆಡ್ವಳ ಇವರ ‘ಜೀವಸತ್ವ’ ವಿನೂತನ ‘ಜ್ಞಾನದ ಕೆಕೆ’ (ಹೃದಯವಂತಿಕೆ, ಬುದ್ಧಿವಂತಿಕೆ) ಒಗಟಿನ ಸಂಕಲನವು ದಿನಾಂಕ 08-06-2024ರಂದು ಲೋಕಾರ್ಪಣೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿದ ವ್ಯಂಗ್ಯಚಿತ್ರಕಾರ ವಿರಾಜ್ ಅಡೂರು ಇವರು ಮಾತನಾಡಿ “ಒಗಟುಗಳು ಬುದ್ಧಿಯನ್ನು ಮಸೆಯುತ್ತವೆ. ಒಗಟಿಗೆ ಉತ್ತರ ಶೋಧಿಸುವ ಕಾರಣ ಏಕಾಗ್ರತೆಯೂ ಬಲವಾಗುತ್ತದೆ. ಮಾತಿನ ಕಟ್ಟೆಗಳಲ್ಲಿ ನಮ್ಮ ಹಿರಿಯರು ಮನರಂಜನೆಗಳಿಗಾಗಿ ಒಗಟುಗಳನ್ನು ರಚಿಸಿ, ಸ್ಪರ್ಧಾತ್ಮಕ ಮನೋಭಾವದಲ್ಲಿ ಉತ್ತರ ಕಂಡುಕೊಳ್ಳುತ್ತಿದ್ದರು. ಒಗಟುಗಳು ಬುದ್ಧಿವಂತಿಕೆಯ ಜೀವಸತ್ವ” ಎಂದು ಹೇಳಿದರು.
ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ತಿನ ಮಕ್ಕಳ ಕಲಾಲೋಕ ಅಧ್ಯಕ್ಷ ರಮೇಶ ಎಂ. ಬಾಯಾರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರರಾದ ಭಾಸ್ಕರ ಆಡ್ವಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ವಿಶ್ವನಾಥ ಗೌಡ ಕುಳಾಲು ಸ್ವಾಗತಿಸಿ, ಶಿಕ್ಷಕ ವೆಂಕಟೇಶ್ವರ ಭಟ್ ವಂದಿಸಿ, ಶಿಕ್ಷಕಿ ರೇಶ್ಮಾ ಲೂಯಿಸ್ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ನಡೆದ ಒಗಟಿಗೆ ಉತ್ತರ ನೀಡುವ ಸಂವಾದದಲ್ಲಿ ಶಾಲೆಯ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.